ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುನಗುಂದ | ಬಿಳಿಜೋಳದ ದರ ಕುಸಿತ: ಬೆಳೆಗಾರರು ಕಂಗಾಲು

Published 6 ಮಾರ್ಚ್ 2024, 4:39 IST
Last Updated 6 ಮಾರ್ಚ್ 2024, 4:39 IST
ಅಕ್ಷರ ಗಾತ್ರ

ಹುನಗುಂದ: ಉತ್ತರ ಕರ್ನಾಟಕದ ಪ್ರಮುಖ ಆಹಾರದ ಬೆಳೆ ಬಿಳಿಜೋಳ. ಈಗ ಮಾರುಕಟ್ಟೆಯಲ್ಲಿ ಬಿಳಿಜೋಳದ ದರ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ಉತ್ತಮ ದರದ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಕಂಗಾಲಾಗಿದ್ದಾರೆ.

ಹುನಗುಂದ ಮತ್ತು ಇಳಕಲ್ ತಾಲ್ಲೂಕು ಉತ್ತಮ ಗುಣಮಟ್ಟದ ಬಿಳಿಜೋಳಕ್ಕೆ ಜಿಲ್ಲೆಯಲ್ಲಿ ಹೆಸರುವಾಸಿ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಕ್ವಿಂಟಲ್ ಬಿಳಿಜೋಳ ₹ 7 ಸಾವಿರದಿಂದ ₹ 8 ಸಾವಿರಕ್ಕೆ ಮಾರಾಟವಾಗಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು. ಪ್ರಸ್ತುತ ಪಟ್ಟಣದ ಮಾರುಕಟ್ಟೆಯಲ್ಲಿ ಗುಣಮಟ್ಟದ ಬಿಳಿಜೋಳದ ದರ ₹ 3 ಸಾವಿರ ಇದೆ. ಒಮ್ಮಿಂದೊಮ್ಮಲೇ ಈ ರೀತಿ ದರ ಕುಸಿದಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ಬಾರಿ ಹುನಗುಂದ ತಾಲ್ಲೂಕಿನಲ್ಲಿ 4,180 ಹೆಕ್ಟೇರ್ ಹಾಗೂ ಇಳಕಲ್ ತಾಲ್ಲೂಕಿನಲ್ಲಿ 3,740 ಹೆಕ್ಟೇರ್ ಪ್ರದೇಶದಲ್ಲಿ ಬಿಳಿಜೋಳ ಬೆಳೆಯಲಾಗಿದೆ.

ಈ ಬಾರಿ ಹುನಗುಂದ ಮತ್ತು ಇಳಕಲ್ ತಾಲ್ಲೂಕಿನಲ್ಲಿ ತೀವ್ರ ಬರ ಆವರಿಸಿದೆ. ಕ್ವಿಂಟಲ್ ಬಿಳಿಜೋಳಕ್ಕೆ ₹ 5 ಸಾವಿರ ದರ ಇದ್ದರೆ ರೈತರಿಗೆ ಸ್ವಲ್ಪಮಟ್ಟಿನ ಅನುಕೂಲ ಆಗುತ್ತಿತ್ತು
ಮಲ್ಲಿಕಾರ್ಜುನ ಕರಡಿ, ರೈತ, ಹುನಗುಂದ

ಈ ಬಾರಿ ಜಿಲ್ಲೆಯಾದ್ಯಂತ ತೀವ್ರ ಬರ ಆವರಿಸಿದೆ. ಈಗಾಗಲೇ ಮುಂಗಾರು ಮಳೆ ಕೊರತೆಯಿಂದ ಬೆಳೆ ಬಾರದೇ ರೈತರು ಕೈ ಸುಟ್ಟುಗೊಂಡಿದ್ದಾರೆ. ಇದರ ನಡುವೆ ಪ್ರಮುಖ ಹಿಂಗಾರು ಬೆಳೆಯಾದ ಬಿಳಿಜೋಳ ಅಲ್ಪ ಸ್ವಲ್ಪ ಇಳುವರಿ ಬಂದು ರೈತರಿಗೆ ಆಸರೆಯಾಗಿದೆ. ಉತ್ತಮ ಬೆಲೆ ದೊರತು ಸ್ವಲ್ಪಮಟ್ಟಿನ ಆಸರೆ ಆಗಬಹುದು ಎಂದು ಕನಸು ಕಾಣುತ್ತಿದ್ದವರಿಗೆ ಈಗ ಲಭಿಸುತ್ತಿರುವ ದರ ತಣ್ಣೀರು ಎರಚಿದೆ.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಗೆ ನಿತ್ಯ ಮಾರಾಟಕ್ಕೆ 100 ಕ್ವಿಂಟಲ್‌ಗೂ ಹೆಚ್ಚು ಬಿಳಿಜೋಳ ಬರುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಬಿಳಿಜೋಳಕ್ಕೆ ಬೇಡಿಕೆ ಇಲ್ಲ.ಹೀಗಾಗಿ ಸ್ಥಳೀಯವಾಗಿ ಮಾರಾಟ ಮಾಡಲಾಗುತ್ತಿದೆ. ಈ ಮೊದಲು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಬಿಳಿಜೋಳ ನೀರಾವರಿ ಪ್ರದೇಶಗಳಾದ ಹುಣಸಗಿ, ಗಂಗಾವತಿ, ಸಿಂಧನೂರ ಸೇರಿದಂತೆ ಇತರ ಪಟ್ಟಣಕ್ಕೆ ಕಳುಹಿಸಲಾಗುತ್ತಿತ್ತು. ಈಗ ಕಳೆದ 5-6 ವರ್ಷಗಳಿಂದ ನೀರಾವರಿ ಪ್ರದೇಶಗಳಲ್ಲಿಯೂ ಹೈಬ್ರಿಡ್ ಜೋಳವನ್ನು ಹೆಚ್ಚಿಗೆ ಬೆಳೆಯವುದರಿಂದ ಬೇಡಿಕೆ ಇಲ್ಲದಂತಾಗಿದೆ ಎಂದು ಪಟ್ಟಣದ ಎಪಿಎಂಸಿ ವರ್ತಕರೊಬ್ಬರು ಹೇಳಿದರು.

ಹುನಗುಂದ ಪಟ್ಟಣದ ಹೊರ ವಲಯದ ಹೊಲದಲ್ಲಿ ಬೆಳದ ಬಿಳಿಜೋಳದ ಬೆಳೆ
ಹುನಗುಂದ ಪಟ್ಟಣದ ಹೊರ ವಲಯದ ಹೊಲದಲ್ಲಿ ಬೆಳದ ಬಿಳಿಜೋಳದ ಬೆಳೆ
ಹುನಗುಂದ ಪಟ್ಟಣದ ಹೊರ ವಲಯದ ಹೊಲದಲ್ಲಿ ಬೆಳೆದ ಬಿಳಿಜೋಳದ ಬೆಳೆ
ಹುನಗುಂದ ಪಟ್ಟಣದ ಹೊರ ವಲಯದ ಹೊಲದಲ್ಲಿ ಬೆಳೆದ ಬಿಳಿಜೋಳದ ಬೆಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT