ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಂಪ್ಲಿ | 402 ರೈತರಿಂದ ಬೆಳೆ ವಿಮೆ ನೋಂದಣಿ

Published 28 ಆಗಸ್ಟ್ 2023, 4:28 IST
Last Updated 28 ಆಗಸ್ಟ್ 2023, 4:28 IST
ಅಕ್ಷರ ಗಾತ್ರ

ಪಂಡಿತಾರಾಧ್ಯ ಎಚ್.ಎಂ. ಮೆಟ್ರಿ

ಕಂಪ್ಲಿ: ತಾಲ್ಲೂಕಿನಲ್ಲಿ ಸುಮಾರು 22,709 ರೈತರಿದ್ದು, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಗೆ 402 ರೈತರು ನಿಗದಿತ ಮೊತ್ತ ಪಾವತಿಸಿ ನೋಂದಣಿ ಮಾಡಿಸಿದ್ದಾರೆ.

ಕೃಷಿ ಇಲಾಖೆ ಮತ್ತು ವಿಮಾ ಕಂಪನಿ ಅಧಿಕಾರಿಗಳು ಮುಂಗಾರಿಗೆ ಮುನ್ನ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲಿ ಈ ಕುರಿತು ಕರಪತ್ರ ವಿತರಿಸಿ ಜಾಗೃತಿ ಮೂಡಿಸಿದ್ದರು. ಆದರೆ, ರೈತರ ನಿರಾಸಕ್ತಿಯಿಂದ ನೋಂದಣಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎನ್ನುವುದು ಈ ಅಂಕಿ ಅಂಶ ದೃಢೀಕರಿಸುತ್ತದೆ.

ತಾಲ್ಲೂಕಿನಲ್ಲಿ ತುಂಗಭದ್ರಾ ನದಿ, ತುಂಗಭದ್ರಾ ಬಲದಂಡೆ ಮೇಲ್ಮಟ್ಟ, ಕೆಳಮಟ್ಟದ ಕಾಲುವೆಗಳು, ವಿಜಯನಗರ ಕಾಲುವೆ ವ್ಯಾಪ್ತಿಯಲ್ಲಿ ಪ್ರತಿ ಮುಂಗಾರಿನಲ್ಲಿ ಅಂದಾಜು 18,000 ಹೆಕ್ಟೇರ್ ಭತ್ತ ನಾಟಿಯಾಗುತ್ತದೆ. ಕಾಲುವೆ ನೀರನ್ನೇ ನೆಚ್ಚಿಕೊಂಡಿರುವ ಈ ರೈತರು ಬೆಳೆ ವಿಮೆ ನೋಂದಣಿಗೆ ಆಸಕ್ತಿ ತೋರುತ್ತಿಲ್ಲ. ಕನಿಷ್ಠ ಅತಿವೃಷ್ಟಿ, ಹವಾಮಾನ ವೈಪರಿತ್ಯ ಕುರಿತು ಅರಿವು ಮೂಡಿಸಿದರು ನಿರ್ಲಕ್ಷ ವಹಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ತಾಲ್ಲೂಕಿನಲ್ಲಿ ಖುಷ್ಕಿ ಪ್ರದೇಶ ಕಡಿಮೆ ಇದ್ದು ನೀರಾವರಿ ಪ್ರದೇಶ ಅಧಿಕವಾಗಿದೆ. ಹೆಚ್ಚಾಗಿ ಭತ್ತ ಬೆಳೆಯುತ್ತಿರುವುದರಿಂದ ಬೆಳೆ ವಿಮೆಗೆ ರೈತರು ಆಸಕ್ತಿ ತೋರುತ್ತಿಲ್ಲ.
ಶ್ರೀಧರ, ಕೃಷಿ ಅಧಿಕಾರಿ

ಕಳೆದ ಸಾಲಿನಲ್ಲಿ ಮೆಣಸಿಕಾಯಿ ಬೆಳೆದ 36 ರೈತರು ನಷ್ಟ ಹೊಂದಿ ಪರಿಹಾರ ಪಡೆದಿದ್ದಾರೆ. ಇದನ್ನು ಅರಿತ ಕೆಲ ಮೆಣಸಿನಕಾಯಿ ಬೆಳೆ ರೈತರು ಈ ಬಾರಿ ವಿಮೆ ಮಾಡಿಸಿದ್ದಾರೆ. ಜೊತೆಗೆ 3,917 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶವಿದ್ದು, ಬೆರಳೆಣಿಕೆ ರೈತರು ವಿಮೆಗೆ ನೋಂದಾಯಿಸಿದ್ದಾರೆ.

‘ಬ್ಯಾಂಕ್‍ನಲ್ಲಿ ಬೆಳೆ ಸಾಲ ಪಡೆಯುವಾಗ ಬೆಳೆ ವಿಮೆ ಮೊತ್ತ ಕಳೆದು ಮಿಕ್ಕ ಹಣವನ್ನು ನಮ್ಮ ಖಾತೆ ಜಮೆ ಮಾಡುತ್ತಾರೆ. ಆದರೆ, ವಿವಿಧ ಕಾರಣಕ್ಕೆ ಬೆಳೆ ನಷ್ಟ ಹೊಂದಿದಾಗ ಮಾರ್ಗಸೂಚಿಗಳನ್ನು ಮುಂದಿಟ್ಟುಕೊಂಡು ಪರಿಹಾರಕ್ಕೆ ನೀವು ಅರ್ಹರಲ್ಲ ಎನ್ನುತ್ತಾರೆ. ಬೆಳೆ ವಿಮೆ ಪಾವತಿಸಿಕೊಳ್ಳುವ ಮುನ್ನ ನಿಯಮಗಳ ಕುರಿತು ರೈತರಿಗೆ ಮನವರಿಕೆ ಮಾಡಬೇಕು’ ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ತಾಲ್ಲೂಕು ಘಟಕ ಅಧ್ಯಕ್ಷ ಕೊಟ್ಟೂರು ರಮೇಶ್ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT