ಬೆಳಗಾವಿ: ಕೊಲೆ ಆರೋಪಿ, ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಕರೆತಂದ ಸಂದರ್ಭದಲ್ಲಿ ಆರೋಪಿ ಕೂಲಿಂಗ್ ಗ್ಲಾಸ್ ಧರಿಸಲು ಅವಕಾಶ ಕೊಟ್ಟ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿ, ಇಲ್ಲಿನ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಉತ್ತರವಲಯ ಡಿಐಜಿ ಟಿ.ಪಿ.ಶೇಷ ಅವರು ಬೆಂಗಳೂರು ಡಿಜಿಪಿ ಮಾಲಿನಿ ಅವರಿಗೆ ವರದಿ ನೀಡಿದ್ದಾರೆ.
ದರ್ಶನ್ ಅವರನ್ನು ಬಳ್ಳಾರಿ ಜೈಲಿನ ಮುಂದೆ ಕರೆತಂದಾಗ ಅವರು ಕೂಲಿಂಗ್ ಗ್ಲಾಸ್ ಧರಿಸಿದ್ದರು. ಇದು ಜೈಲಿನ ನಿಯಮಗಳಿಗೆ ವಿರುದ್ಧವಾದುದು. ಈ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ವರದಿಗಳು ಬಿತ್ತರವಾಗುತ್ತಿವೆ. ಇದರಿಂದ ಇಲಾಖೆಯ ಘನತೆಗೆ ಧಕ್ಕೆ ಬಂದಿದೆ. ದರ್ಶನ್ ಒಬ್ಬ ಸೆಲೆಬ್ರಿಟಿ ಆಗಿದ್ದರಿಂದ ಈ ಪ್ರಕರಣದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಿತ್ತು. ಈಗಾಗಲೇ ಆರೋಪಿ ಕುರಿತಾಗಿ ಸಣ್ಣ ಸಣ್ಣ ತಪ್ಪುಗಳು ಕೂಡ ದೊಡ್ಡ ಸುದ್ದಿಗಳಾಗುತ್ತಿವೆ. ಯಾವುದೇ ಸಣ್ಣ ತಪ್ಪೂ ಆಗದಂತೆ ಎಚ್ಚರಿಕೆ ವಹಿಸಬೇಕಾಗಿತ್ತು. ಆದರೆ, ಬೆಂಗಳೂರಿನಿಂದ ಆರೋಪಿಯನ್ನು ಕರೆತಂದ ಬೆಂಗಾವಲು ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಳ್ಳಾರಿ ಪೊಲೀಸ್ ಅಧಿಕಾರಿಗಳು, 'ದರ್ಶನ್ ಧರಿಸಿದ್ದು ಕೂಲಿಂಗ್ ಗ್ಲಾಸ್ ಅಲ್ಲ. ಅವರ ದೃಷ್ಟಿದೋಷ ನಂಬರ್ ಇರುವ ಗ್ಲಾಸ್' ಎಂದು ತಿಳಿಸಿದ್ದಾರೆ.