ಬಳ್ಳಾರಿ: ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ಇಎಸ್‍ಐ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಜೊತೆಗೆ ಭಾನುವಾರ ಸಭೆ ನಡೆಸಿ ಅವರು ಮಾತನಾಡಿದರು.
ಕಾರ್ಮಿಕರ ಕಾಯ್ದೆ, ಕಾನೂನಿನನ್ವಯ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ವಿವಿಧ ಇಲಾಖೆಗಳ ಹಾಗೂ ಸಂಘ–ಸಂಸ್ಥೆಗಳ ಮತ್ತು ಮಾಧ್ಯಮದ ಮೂಲಕ ಹೆಚ್ಚೆಚ್ಚು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಬಾಲ ಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವ ಸ್ಥಳಗಳನ್ನು ಗುರುತಿಸಿ ಕಾರ್ಯಾಚರಣೆ ನಡೆಸುವ ಮೂಲಕ ಮಕ್ಕಳನ್ನು ರಕ್ಷಣೆ ಮಾಡಿ, ಅವರನ್ನು ಶೈಕ್ಷಣಿಕವಾಗಿ ಮುನ್ನೆಲೆಗೆ ತರಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಾರ್ಖಾನೆಗಳಲ್ಲಿ ಕಾರ್ಮಿಕರ ಕಾಯ್ದೆ ಕಾನೂನಿನನ್ವಯ ಇರುವ ನಿಯಮಾವಳಿಗಳನ್ನು ಫಲಕಗಳಲ್ಲಿ ಪ್ರದರ್ಶಿಸಬೇಕು. ವೇತನ ಪಾವತಿ, ಪಿಎಫ್, ಇಎಸ್‍ಐ ಸೌಲಭ್ಯಗಳ ಮಾಹಿತಿ ನೀಡಬೇಕು. ಮೂರು ತಿಂಗಳಿಗೊಮ್ಮೆ ಕಾರ್ಮಿಕರಿಗೆ ನೀಡುವ ಸೌಲಭ್ಯಗಳ ಕುರಿತು ಖುದ್ದು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು.
ಸಿರುಗುಪ್ಪ ತಾಲ್ಲೂಕಿನಲ್ಲಿ 11 ರೈಸ್ ಮಿಲ್‌ಗಳಿವೆ. ಇಲ್ಲಿ ಸಾಕಷ್ಟು ಕೂಲಿ ಕಾರ್ಮಿಕರಿದ್ದು, ಅವರ ಆರೋಗ್ಯ ರಕ್ಷಣೆಗೆ ಈ ಭಾಗದಲ್ಲಿ ಇಎಸ್‍ಐ ಆಸ್ಪತ್ರೆ ನಿರ್ಮಿಸಬೇಕು ಎಂದು ಸಿರಗುಪ್ಪ ಶಾಸಕ ಬಿ.ಎಂ. ನಾಗರಾಜ್ ಸಭೆಯಲ್ಲಿ ಪ್ರಸ್ತಾಪಿಸಿದರು.
ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಕಾರ್ಮಿಕ ಇಲಾಖೆ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.