ಬಳ್ಳಾರಿ: ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪಿಸುವ ಹಿಂದಿನ ಸರ್ಕಾರದ ನಿರ್ಧಾರಗಳಿಂದ ಹಳೇ ವಿಶ್ವವಿದ್ಯಾಲಯಗಳು ಸಂಕಷ್ಟಕ್ಕೆ ಒಳಗಾಗಿವೆ ಎಂದು ಸಮ ಕುಲಾಧಿಪತಿಯೂ ಆದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಬೇಸರ ವ್ಯಕ್ತಪಡಿಸಿದರು.
ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಮೈಸೂರು, ಧಾರವಾಡ, ಗುಲ್ಬರ್ಗಾ ಮತ್ತು ಮಂಗಳೂರು ವಿವಿಗಳು ಐತಿಹಾಸಕ ಹಿನ್ನಲೆಯುಳ್ಳವು. ಇತ್ತೀಚೆಗೆ ಚಾಮರಾಜನಗರ, ಕೊಡಗು ಮತ್ತು ಮಂಡ್ಯ ವಿಶ್ವವಿದ್ಯಾಲಯಗಳೂ ಸ್ಥಾಪನೆಗೊಂಡಿದ್ದು ಮೈಸೂರು ವಿಶ್ವವಿದ್ಯಾಲಯ ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿಯಾಗಿದೆ’ ಎಂದರು.
‘ಜಿಲ್ಲೆಗೊಂದು ವಿವಿ ಸ್ಥಾಪಿಸುವ ಹಿಂದಿನ ಸರ್ಕಾರದ ನಿರ್ಧಾರದಿಂದ ಹಳೇ ವಿಶ್ವವಿದ್ಯಾಲಯಗಳು ಸಂಕಷ್ಟಕ್ಕೆ ಒಳಗಾದವು’ ಎಂದು ಹೇಳಿದರು.
‘ವಿಎಸ್‌ಕೆಯು ತನ್ನ ವ್ಯಾಪ್ತಿಯಲ್ಲಿ ಸುಮಾರು 76 ಸ್ನಾತಕ, ಸ್ನಾತಕೋತ್ತರ ಪದವಿ ಕಾಲೇಜುಗಳ ಸಂಯೋಜನೆ ಹೊಂದಿದೆ. ಸುಮಾರು 60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ವಿ.ವಿ ಉತ್ತಮ ರೀತಿಯಲ್ಲಿ ನಡೆಯುತ್ತಿದೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
‘ಬಳ್ಳಾರಿಯು ಸ್ವತಂತ್ರ ಪೂರ್ವದಲ್ಲಿಯೇ ಕೈಗಾರಿಕಾ ಕೇಂದ್ರವಾಗಿತ್ತು. ಇಲ್ಲಿನ ಸಮೃದ್ಧ ಖನಿಜಗಳನ್ನು ಬಳಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಆಲೋಚಿಸಬೇಕಿದೆ’ ಎಂದು ಹೇಳಿದರು.
‘ಬಳ್ಳಾರಿಯಲ್ಲಿ ಗಣಿ ಮತ್ತು ಉಕ್ಕಿನ ಕಾರ್ಖಾನೆಳಿವೆ. ಖನಿಜ ‘ಸಂಶೋಧನಾ ಕೇಂದ್ರ’ ಆರಂಭಿಸಲು ಕುಲಪತಿಯವರು ಗಮನಹರಿಸಬೇಕು. ಕೌಶಲ್ಯ ತರಬೇತಿಗೆ ಆದ್ಯತೆ ನೀಡಬೇಕಿದೆ. ಇದರಿಂದ ಹೆಚ್ಚೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ನಮ್ಮ ಸರ್ಕಾರವು ಕೌಶಲ ಅಭಿವೃದ್ಧಿಗಾಗಿ ಕೇಂದ್ರವೊಂದನ್ನು ಸ್ಥಾಪನೆ ಮಾಡಲು ಚಿಂತಿಸಿದೆ’ ಎಂದು ತಿಳಿಸಿದರು.
ಹಿರಿಯ ವಿಜ್ಞಾನಿ ಮತ್ತು ಧಾರವಾಡ ಐಐಟಿಯ ಡೀನ್ ಹಾಗೂ ಗೌರವ ಪ್ರಾಧ್ಯಾಪಕ ಪ್ರೊ.ಎಸ್.ಎಂ.ಶಿವಪ್ರಸಾದ್ ಅವರು ಘಟಿಕೋತ್ಸವದ ಭಾಷಣದಲ್ಲಿ ಮಾತನಾಡಿ, ‘ಬಳ್ಳಾರಿ ಜಿಲ್ಲೆಯು ಶ್ರೀಮಂತ ಪರಂಪರೆ ಹೊಂದಿದ್ದು, ಶಿಕ್ಷಣ ಮತ್ತು ಉದ್ಯಮದ ನಡುವಿನ ಸೇತುವೆಯಾಗಿದೆ. ಪ್ರತಿಭೆಯನ್ನು ಪೋಷಿಸುವಲ್ಲಿ ವಿಶ್ವವಿದ್ಯಾಲಯವು ತನ್ನದೇ ಆದ ಪಾತ್ರವನ್ನು ಹೊಂದಿದೆ’ ಎಂದರು.
ಸದ್ಯ ಜಗತ್ತು ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನದ ಹಿಂದೆ ಓಡುತ್ತಿದೆ. ಜ್ಞಾನ ಹೆಚ್ಚಿಸಿಕೊಳ್ಳಲು ಯುವ ಸಮುದಾಯ ನಿತ್ಯ ಇದನ್ನು ಬಳಸಿಕೊಳ್ಳಬೇಕು ಎಂದೂ ಅವರು ಸಲಹೆ ನೀಡಿದರು.
ಕುಲಾಧಿಪತಿಯೂ ಆದ ರಾಜ್ಯಪಾಲರು ಘಟಿಕೋತ್ಸವಕ್ಕೆ ಗೈರಾಗಿದ್ದರು. ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿದರು.
ಕುಲಸಚಿವ ರುದ್ರೇಶ್.ಎಸ್.ಎನ್., ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರುಗಳು, ಎಲ್ಲ ನಿಕಾಯದ ಡೀನರು, ಮುಖ್ಯಸ್ಥರುಗಳು, ಸಂಯೋಜಕರುಗಳು, ವಿವಿಧ ಮಹಾವಿದ್ಯಾಲಯಗಳ ಪಾಂಶುಪಾಲರಾಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳ 42 ವಿದ್ಯಾರ್ಥಿಗಳಿಗೆ 53 ಚಿನ್ನದ ಪದಕ, ವಿವಿಧ ವಿಭಾಗಗಳ ಒಟ್ಟು 36 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆದರು.
ಎಲ್ಲ ವಿಭಾಗಗಳ ಸ್ನಾತಕ ಪದವಿಯ 56 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 69 ಸೇರಿ ಒಟ್ಟು 125 ವಿದ್ಯಾರ್ಥಿಗಳು ರ‍್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆದುಕೊಂಡರು.
ವಿವಿಯ ಔದ್ಯೋಗಿಕ ರಸಾಯನ ಶಾಸ್ತ್ರ ವಿಭಾಗದ ಉಮಾ.ಪಿ., ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಖನಿಜ ಸಂಸ್ಕರಣ ವಿಭಾಗದ ನಾಗರಾಜ.ಕೆ.ಬಿ ಹಾಗೂ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರದ ದೌಲತ್ ಬಾನು ತಲಾ ಮೂರು ಚಿನ್ನದ ಪದಗಳನ್ನು ಪಡೆದರು.
ಐವರಿಗೆ ತಲಾ ಎರಡು ಚಿನ್ನದ ಪದಕ
ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಎ.ಕೆ.ಹುಲಿಗೆಮ್ಮ, ವಿವಿಯ ರಸಾಯನಶಾಸ್ತ್ರ ವಿಭಾಗದ ಪ್ರಿಯಾಂಕಾ.ಎ., ಭೌತಶಾಸ್ತ್ರ ವಿಭಾಗದ ಪೂಜಾ ಹಿರೇಹಾಳ್, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಸಮಾಜಶಾಸ್ತ್ರದಲ್ಲಿ ಸಾಲುಂಕೆ ಮಿತ್ರಾ ಹಾಗೂ ವೀರಶೈವ ಮಹಾವಿದ್ಯಾಲಯದ ಬಿಎಸ್‌ಸಿ ವಿಭಾಗದ ಶ್ರೇಯಾ.ಬಿ.ಪಿ ತಲಾ ಎರಡು ಚಿನ್ನದ ಪದಕ ಪಡೆದು ಸಂಭ್ರಮಿಸಿದರು.
ಮೂವರಿಗೆ ಗೌರವ ಡಾಕ್ಟರೇಟ್
ರಂಗಭೂಮಿ ಕಲೆ ಮತ್ತು ಸಮಾಜ ಸೇವೆ ಮೂಲಕ ಗುರುತಿಸಿಕೊಂಡಿರುವ ನಟಿ ಉಮಾಶ್ರೀ ಕೈಗಾರಿಕೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಉದ್ಯಮಿ ಎಸ್.ಕೆ.ಮೋದಿ ಅವರ ಪರವಾಗಿ ಪತ್ನಿ ಮಂಜು ಎಸ್.ಕೆ.ಮೋದಿ ಮತ್ತು ಶಿಕ್ಷಣ ಸೇವೆ ಗುರುತಿಸಿ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಪರವಾಗಿ ವರ ಸದುರ್ಜಾತ ಸ್ವಾಮೀಜಿ ಸೇರಿ ಮೂವರಿಗೆ ಇದೇ ವೇಳೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಮೂರು ಪದಕ ಪಡೆದರೂ ₹30 ಸಾವಿರಕ್ಕೆ ಕೆಲಸ
‘ಖನಿಜ ಸಂಸ್ಕರಣ ವಿಭಾಗದಲ್ಲಿ ಪ್ರಥಮ ರ್‍ಯಾಂಕ್ ಬಂದಿದೆ. ಮೂರು ಚಿನ್ನದ ಪದಕ ಸಿಕ್ಕಿದೆ’ ಎಂದ ಸಂಡೂರು ತಾಲೂಕಿನ ಸೋವೇನಹಳ್ಳಿಯ ನಾಗರಾಜ ಕೆ.ಬಿ ಮಧ್ಯಪ್ರದೇಶದ ‘ಅಕೋರ್ ಇಂಡ್ರಸ್ಟ್ರೀ’ ಎಂಬ ಕಂಪನಿಯಲ್ಲಿ ₹30 ಸಾವಿರಕ್ಕೆ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು. ಬಳ್ಳಾರಿ ಸಂಡೂರು ತಾಲೂಕುಗಳಲ್ಲಿ ಸಾಕಷ್ಟು ಗಣಿಗಳಿವೆ ಸ್ಪಾಂಜ್ ಐರನ್ ಕಂಪನಿಗಳಿವೆ ವಿಶ್ವ ವಿಖ್ಯಾತ ಉಕ್ಕಿನ ಕಂಪನಿಯೊಂದಿದೆ. ಇಲ್ಲಿನ ಯಾವುದೇ ಕಂಪನಿಗಳು ಕೆಲಸ ನೀಡಲಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ‘ ಎಲ್ಲ ಕಂಪನಿಗಳಿಗೂ ಅರ್ಜಿ ಹಾಕಿದ್ದೇನೆ. ಸಂದರ್ಶನಕ್ಕೆ ಕರೆಯುವ ಇಲ್ಲಿನ ಕಂಪನಿಗಳು ವೃತ್ತಿ ಅನುಭವ ಕೇಳುತ್ತಿವೆ. ಅದಕ್ಕಾಗಿ ಮಧ್ಯಪ್ರದೇಶಕ್ಕೆ ಹೋಗಿ ದುಡಿಯಬೇಕಾಗಿ ಬಂದಿದೆ’ ಎಂದರು. ‘ನನ್ನ ತಂದೆ ತಾಯಿ ಕೃಷಿಕರು. ತಾಯಿಯಂತೂ ಅನಕ್ಷರಸ್ಥೆ. ನಾವು ಮೂರು ಜನ ಮಕ್ಕಳು. ನಾನೇ ದೊಡ್ಡವನು. ನನ್ನ ಕುಟುಂಬದ ನಿರ್ವಹಣೆ ಜವಾಬ್ದಾರಿ ನನ್ನ ಮೇಲಿದೆ’ ಎಂದು ಹೇಳಿದರು.
ರ‍್ಯಾಂಕ್ ವಿದ್ಯಾರ್ಥಿಗಳ ಸಂಭ್ರಮ
ವಿವಿಧ ಕೋರ್ಸ್‌ಗಳಲ್ಲಿ ಪ್ರಥಮ ರ‍್ಯಾಂಕ್ ಪಡೆದ ಅಭ್ಯರ್ಥಿಗಳು ಶುಕ್ರವಾರ ಸಂಭ್ರಮದ ಜೊತೆಗೆ ತಮ್ಮ ಮುಂದಿನ ಕನಸುಗಳನ್ನು ಹಂಚಿಕೊಳ್ಳುತ್ತಿದ್ದರು. ಅವರಿಗೆ ಸ್ನೇಹಿತರು ಅಭಿನಂದನೆ ಸಲ್ಲಿಸುತ್ತಾ ಖುಷಿಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದರು. ಫೋಟೊ ತೆಗೆಸಿಕೊಂಡು ಖುಷಿಪಡುತ್ತಿದ್ದ ಅಭ್ಯರ್ಥಿಗಳ ಕಂಗಳಲ್ಲಿ ನೂರಾರು ಕನಸು. ಕೆಲವರಿಗೆ ಉನ್ನತ ಶಿಕ್ಷಣ ಪಿಎಚ್.ಡಿ ಮಾಡುವಾಸೆ ಇನ್ನು ಕೆಲವರಿಗೆ ಉದ್ಯೋಗ ಗಿಟ್ಟಿಸಿಕೊಳ್ಳುವ ತವಕ. ತಮ್ಮ ಮಕ್ಕಳ ಸಾಧನೆ ಕಂಡು ಪೋಷಕರು ಭಾವುಕರಾಗಿದ್ದರು. ತಮ್ಮ ಓದಿನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕ ಸಾರ್ಥಕ ಭಾವದಲ್ಲಿ ಸಾಧಕರಿದ್ದರು. ಮುಂದಿನ ಗುರಿಯ ಕನಸುಗಳನ್ನು ಹಂಚಿಕೊಳ್ಳುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.