ಬಳ್ಳಾರಿ: ಇಲ್ಲಿನ ಜಿಲ್ಲಾಡಳಿತ ಭವನ ಉದ್ಘಾಟನೆ ಆಗಿ ತಿಂಗಳುಗಳೇ ಕಳೆದರೂ ಕಚೇರಿಗಳು ಇನ್ನೂ ಸ್ಥಳಾಂತರ ಆಗಿಲ್ಲ. ಜಿಲ್ಲೆಯ ಜನರಿಗೆ ಸರ್ಕಾರದ ಸೇವೆ– ಸೌಲಭ್ಯಗಳು ಒಂದೆಡೆ ಸಿಗಬೇಕೆಂಬ ಸದುದ್ದೇಶದಿಂದ ಕಟ್ಟಿದ ಭವನವಿನ್ನೂ ಪೂರ್ಣ ಭರ್ತಿಯಾಗಿಲ್ಲ. ಭರ್ತಿಯಾದ ಕಚೇರಿಗಳಿಗೂ ವಿಳಾಸವಿಲ್ಲ ಅರ್ಥಾತ್ ಫಲಕಗಳಿಲ್ಲ.
ಜಿಲ್ಲಾಡಳಿತ ಭವನಕ್ಕೆ ಸರ್ಕಾರದ ಕಚೇರಿಗಳು ಸ್ಥಳಾಂತರಗೊಂಡಿರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು ಜನ ಬರುತ್ತಾರೆ. ಅವರಿಗೆ ಬೇಕಾದ ಕಚೇರಿ ಇನ್ನೂ ಬಂದಿಲ್ಲ ಎಂದು ತಿಳಿದ ಬಳಿಕ ಹಳೇ ಸ್ಥಳಕ್ಕೆ ಹಿಂತಿರುಗುತ್ತಾರೆ.
ಬಳ್ಳಾರಿ ತಾಲ್ಲೂಕಿನ ಕೊಳಗಲ್ಲು ತಾಂಡಾದಿಂದ ಬಾಬು ನಾಯ್ಕ ಎಂಬ ರೈತ ಮಂಗಳವಾರ ಜಿಲ್ಲಾಡಳಿತ ಭವನಕ್ಕೆ ಬಂದಿದ್ದರು. ಹೊಸ ಟ್ತ್ಯಾಕ್ಟರ್‌ಗೆ ಸಬ್ಸಿಡಿ ಪಡೆಯುವ ಮಾಹಿತಿಗಾಗಿ ಅವರು ಕೃಷಿ ಇಲಾಖೆ ಅಧಿಕಾರಿಗಳನ್ನು ಕಾಣಬೇಕಿತ್ತು. ಇನ್ನೂ ಕೃಷಿ ಇಲಾಖೆ ಸ್ಥಳಾಂತರವಾಗಿಲ್ಲ ಎಂದು ಗೊತ್ತಾದ ಬಳಿಕ ‘ಬಂದ ದಾರಿಗೆ ಸುಂಕವಿಲ್ಲ’ ಎಂಬಂತೆ ವಾಪಸ್ ಹೋದರು.
ಆಧಾರ್ ಕಾರ್ಡ್ ಸಂಬಂಧ ಅಂಧರೊಬ್ಬರು ಡಿ.ಸಿ. ಕಚೇರಿ ಆವರಣದಲ್ಲಿರುವ ‘ಸ್ಪಂದನಾ ಕೇಂದ್ರ’ಕ್ಕೆ ಬಂದಿದ್ದರು. ಕೆಲ ಹೊತ್ತಿನ ಬಳಿಕ ಜಿಲ್ಲಾಡಳಿತ ಭವನದಲ್ಲಿ ಕಾಣಿಸಿಕೊಂಡರು. ಪ್ರತಿದಿನ ನೂರಾರು ಜನ ಬಳ್ಳಾರಿಗೆ ಬರುತ್ತಾರೆ. ತಮಗೆ ಬೇಕಾದ ಕಚೇರಿ ಹುಡುಕಿಕೊಂಡು ಓಡಾಡುತ್ತಾರೆ. ಎಷ್ಟೋ ಸಲ ಕಚೇರಿಗಳು ಎಲ್ಲಿವೆ ಎಂದು ಗೊತ್ತಾಗದೆ ಪರದಾಡುತ್ತಾರೆ. ಎದುರಿಗೆ ಯಾರಾದರೂ ಗೊತ್ತಿದ್ದವರಿದ್ದರೆ ಸರಿಯಾದ ವಿಳಾಸ ಹೇಳುತ್ತಾರೆ. ಗೊತ್ತಿಲ್ಲದವರು ಕೈ ಅಲುಗಾಡಿಸುತ್ತಾರೆ.
ಅನಂತಪುರ ರಸ್ತೆಯಲ್ಲಿ ₹30 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಿಲ್ಲಾಡಳಿತ ಭವನದ ಅವ್ಯವಸ್ಥೆ ಇದು. ರಾಜ್ಯ ಸರ್ಕಾರದ ಬಹುತೇಕ ಇಲಾಖೆಗಳು ಇಲ್ಲಿಗೆ ಸ್ಥಳಾಂತರಗೊಳ್ಳಬೇಕು. ಕೆಲವು ಇಲಾಖೆಗಳು ಮಾತ್ರ ಬಂದಿವೆ. ಈ ಭವನದ ಉದ್ಘಾಟನೆ ಒಂದಷ್ಟು ತಡವಾಯಿತು. ಈಗ ಸ್ಥಳಾಂತರಕ್ಕೂ ಅದೇ ಗತಿ ಬಂದಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಒಟ್ಟು 17.13 ಎಕರೆ ಪ್ರದೇಶದಲ್ಲಿ ಸುಂದರವಾದ ಜಿಲ್ಲಾಡಳಿತ ಭವನ ತಲೆಎತ್ತಿದೆ. ಕರ್ನಾಟಕ ಗೃಹ ಮಂಡಳಿ ₹25 ಕೋಟಿ ವೆಚ್ಚದಲ್ಲಿ ಕಟ್ಟಡ ಕಟ್ಟಿದೆ. ಭವನದ ಒಳಾಂಗಣ ರಸ್ತೆಗಳಿಗೆ ₹5 ಕೋಟಿ ಖರ್ಚು ಮಾಡಲಾಗಿದೆ. ಒಳಾಂಗಣ ವಿನ್ಯಾಸ ಮತ್ತು ಪೀಠೋಪಕರಣಗಳಿಗೆ ಪ್ರತ್ಯೇಕ ಹಣ ವ್ಯಯಿಸಲಾಗಿದೆ.
‘ಸರ್ಕಾರದ ಕೆಲಸಕ್ಕೆ ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆಯುವುದು ತಪ್ಪಲಿ’ ಎಂಬ ಉದ್ದೇಶದಿಂದ ಜಿಲ್ಲಾಡಳಿತ ಭವನ ಕಟ್ಟಲಾಗಿದೆ. ಸ್ಟೇಷನ್ ರಸ್ತೆಯಲ್ಲಿರುವ ಬ್ರಿಟೀಷ್ ಕಾಲದ ಕಲ್ಲಿನ ಕಟ್ಟಡದಲ್ಲಿ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಕಚೇರಿಗಳಿವೆ. ಸುತ್ತಮುತ್ತ ಡಿಡಿಎಲ್‌ಆರ್, ಎಡಿಎಲ್‌ಆರ್, ಖಜಾನೆ, ಕೆಜಿಐಡಿ, ವಾರ್ತಾ ಇಲಾಖೆ ಒಳಗೊಂಡು ಅನೇಕ ಕಚೇರಿಗಳಿವೆ.ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಉಪವಿಭಾಗಾಧಿಕಾರಿ ಕಚೇರಿ ಕಟ್ಟಡಗಳನ್ನು ಬಿಟ್ಟು ಉಳಿದವು ಶಿಥಿಲಾವಸ್ಥೆಯಲ್ಲಿವೆ.
ಅಬಕಾರಿ, ಸಣ್ಣ ಉಳಿತಾಯ, ತೋಟಗಾರಿಕೆ, ಆಹಾರ ಮತ್ತು ನಾಗರಿಕ ಪೂರೈಕೆ, ಜವಳಿ ಇಲಾಖೆ, ಧಾರ್ಮಿಕ ದತ್ತಿ, ತಹಸೀಲ್ದಾರ್ ಕಚೇರಿಗಳು ಮಾತ್ರ ಸ್ಥಳಾಂತರ ಆಗಿದೆ. ಏಪ್ರಿಲ್‌ನೊಳಗೆ ಕಚೇರಿ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದರು.
ಜಿಲ್ಲಾಡಳಿತ ಭವನದಲ್ಲಿ ಎಷ್ಟು ಬ್ಲಾಕ್‌ಗಳಿವೆ. ಯಾವ ಬ್ಲಾಕ್‌ನಲ್ಲಿ ಯಾವ ಕಚೇರಿಯಿದೆ ಎಂಬ ಮಾಹಿತಿ ನೀಡುವ ಫಲಕಗಳಿಲ್ಲ. ಅಲ್ಲಿಗೆ ಹೋದವರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹುಡುಕಿಕೊಂಡು ಅಲೆದಾಡುವುದು ಸಾಮಾನ್ಯವಾಗಿದೆ. ನೆಲ ಮಹಡಿಯಲ್ಲಿ ಯಾವ ಕಚೇರಿಗಳಿವೆ. ಮೇಲಿನ ಮಹಡಿಯಲ್ಲಿವೆ ಯಾವ ಕಚೇರಿಗಳಿವೆ ಎಂದು ಹೇಳುವವರೂ ದಿಕ್ಕಿಲ್ಲ. ಹೊಸ ಕಟ್ಟಡದಲ್ಲಿ ಸಂವಹನದ ಕೊರತೆ ಎದ್ದು ಕಾಣುತ್ತದೆ.
ಬೆಂಗಳೂರು ಬಹುಮಹಡಿ ಕಟ್ಟಡದಲ್ಲಿ (ಮಲ್ಟಿ ಸ್ಟೋರಿ ಬಿಲ್ಡಿಂಗ್) ಎಷ್ಟೊಂದು ಬ್ಲಾಕ್‌ಗಳಿವೆ. ಬ್ಲಾಕ್ ಮುಂದೆ ನಿಂತುಕೊಂಡರೆ ಯಾವ ಮಹಡಿಯಲ್ಲಿ ಯಾವ ಕಚೇರಿ ಇದೆ ಎಂಬ ಫಲಕಗಳನ್ನು ಹಾಕಲಾಗಿದೆ. ಅಲ್ಲಿಗೆ ಬರುವ ಜನರಿಗೆ ಕೊಂಚವೂ ಗೊಂದಲವಾಗುವುದಿಲ್ಲ. ಅಷ್ಟೇ ಏಕೆ, ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೂ ಈಚೆಗೆ ಫಲಕಗಳನ್ನು ಹಾಕಲಾಗಿದೆ. ಜಿಲ್ಲಾಡಳಿತ ಭವನಕ್ಕೆ ಏಕೆ ಈ ಯೋಗ ಕೂಡಿ ಬಂದಿಲ್ಲ.
18 ಇಲಾಖೆಗಳ ಸ್ಥಳಾಂತರ: ಎಡಿಸಿ ಜಿಲ್ಲಾಡಳಿತ ಭವನಕ್ಕೆ 18 ಇಲಾಖೆಗಳು ಸ್ಥಳಾಂತರಗೊಂಡಿವೆ. ಉಳಿದವುಗಳನ್ನು ಆದಷ್ಟು ಬೇಗ ಸ್ಥಳಾಂತರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್ ತಿಳಿಸಿದರು. ಕಟ್ಟಡದ ಬಾಡಿಗೆ, ನಿರ್ವಹಣಾ ವೆಚ್ಚ ನಿಗದಿ ಆಗಬೇಕಿರುವುದರಿಂದ ಕಚೇರಿಗಳ ಸ್ಥಳಾಂತರ ಕೊಂಚ ತಡವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಲ್ಯಾಂಡ್‌ಸ್ಕೇಪ್‌ಗೆ ಅವಕಾಶವಿದೆ... ಜಿಲ್ಲಾಡಳಿತ ಭವನದ ಮುಂಭಾಗ ಎರಡೂ ಬದಿಯಲ್ಲೂ ಸಾಕಷ್ಟು ಜಾಗವಿದ್ದು ಸೊಗಸಾದ ಲ್ಯಾಂಡ್‌ಸ್ಕೇಪ್‌ಗೆ ಅವಕಾಶವಿದೆ. ಎರಡು ಕಡೆ ಉದ್ಯಾನವನ ಮಾಡಿ ಜಿಲ್ಲಾಡಳಿತ ಭವನಕ್ಕೆ ಬರುವ ಜನ ಕುಳಿತುಕೊಳ್ಳಲು ಕಲ್ಲು ಬೆಂಚುಗಳನ್ನು ಹಾಕಿದರೆ ಅನುಕೂಲ. ಇದರಿಂದ ಕಟ್ಟಡಕ್ಕೆ ಇನ್ನಷ್ಟು ಮೆರಗು ಬರಲಿದೆ ಎಂಬುದು ಹಲವರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.