ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ | ಕೊಳಗಲ್ಲು ಗ್ರಾಮದಲ್ಲಿ ಘರ್ಷಣೆ: ಪೊಲೀಸ್‌ ಸಿಬ್ಬಂದಿಗೆ ಗಾಯ

Published 8 ಏಪ್ರಿಲ್ 2024, 8:27 IST
Last Updated 8 ಏಪ್ರಿಲ್ 2024, 8:27 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಕೊಳಗಲ್ಲು ಗ್ರಾಮದಲ್ಲಿ ಎರ್ರೆಪ್ಪ ತಾತ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಭಾನುವಾರ ರಾತ್ರಿ ಘರ್ಷಣೆ ನಡೆದಿದೆ. ಪರಿಸ್ಥಿತಿ ನಿಭಾಯಿಸುವ ವೇಳೆ ಗ್ರಾಮಾಂತರ ಠಾಣೆ ಪಿಎಸ್‌ಐಗೆ ಕಲ್ಲೇಟು ಬಿದ್ದಿದ್ದು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಕೊಳಗಲ್ಲು ಗ್ರಾಮದಲ್ಲಿ ಸಂತ ಎರ್ರಿತಾತ ದೇವಾಲಯವಿದೆ. ಎರ್ರಿ ತಾತ ಅವರ ಶಿಷ್ಯ ಎರ್ರೆಪ್ಪ ತಾತಾ ಅವರು ಕೆಲ ವರ್ಷದ ಹಿಂದೆ ನಿಧನರಾಗಿದ್ದರು. ಅವರ ಹೆಸರಲ್ಲೂ ದೇವಾಲಯದ ಆವರಣದಲ್ಲಿ ಸಣ್ಣದೊಂದು ಗುಡಿ ನಿರ್ಮಿಸಲಾಗಿದೆ. ಈ ಗುಡಿಯಲ್ಲಿ ಎರ್ರೆಪ್ಪ ತಾತ ಅವರ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಕೊಳಗಲ್ಲು ಗ್ರಾಮದಲ್ಲಿ ಹಲವು ತಿಂಗಳಿಂದ ಸಣ್ಣಪುಟ್ಟ ಘರ್ಷಣೆಗಳು ನಡೆದೇ ಇದ್ದವು. ಈ ಮಧ್ಯೆ ದೇವಾಲಯದಲ್ಲಿ ಎರ್ರೆಪ್ಪ ತಾತ ಮೂರ್ತಿಯನ್ನು ಗ್ರಾಮಸ್ಥರು ಪ್ರತಿಷ್ಠಾಪಿಸಿದ್ದರಾದರೂ, ಇದರ ವಿರುದ್ಧ ಸಮುದಾಯವೊಂದು ಕೋರ್ಟ್‌ ಮೆಟ್ಟಿಲೇರಿತ್ತು. 

ಗುಡಿಯಿಂದ ಎರ್ರೆಪ್ಪತಾತ ಮೂರ್ತಿಯನ್ನು ತೆರವು ಮಾಡಬೇಕಾಗಿ ನ್ಯಾಯಾಲಯ ಇತ್ತೀಚೆಗೆ ಆದೇಶಿಸಿತ್ತು. ಅದರಂತೆ ದೇವಾಲಯದ ಮೂರ್ತಿಯನ್ನು ತೆರವು ಮಾಡಲಾಗಿತ್ತು ಎನ್ನಲಾಗಿದೆ. ಆದರೆ, ದೇವಾಲಯದಲ್ಲಿ ಮೂರ್ತಿಯನ್ನು ಮತ್ತೆ ಪ್ರತಿಷ್ಠಾಪಿಸಲೇ ಬೇಕು ಎಂದು ಮತ್ತೊಂದು ಸಮುದಾಯ ಪಟ್ಟು ಹಿಡಿದಿತ್ತು. ಈ ವಿಚಾರ ಎರಡು ಸಮುದಾಯಗಳ ನಡುವೆ ಘರ್ಷಣೆಗೆ ಕಾರಣವಾಗಿದೆ. 

ಬೂದಿ ಮುಚ್ಚಿದ ಕೆಂಡದಂತಿದ್ದ ಈ ವಿವಾದ ಭಾನುವಾರ ರಾತ್ರಿ ಭುಗಿಲೆದ್ದಿದ್ದು, ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಘರ್ಷಣೆ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ. ಆಗ ಪೊಲೀಸರ ಮೇಲೂ ದಾಳಿ ನಡೆದಿದೆ. ಘಟನೆಯಲ್ಲಿ ಗ್ರಾಮಾಂತರ ಠಾಣೆಯ ಪಿಎಸ್‌ಐ ಸಂತೋಷ್‌ ಡಬ್ಬಿನ್‌, ಸಿಪಿಐ ಸತೀಶ್ ಸೇರಿದಂತೆ ಮೂವರಿಗೆ ಗಾಯಗಳಾಗಿವೆ. ಸಂತೋಷ್‌ ಡಬ್ಬಿನ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. 

ಘಟನೆಗೆ ಸಂಬಂಧಿಸಿದಂತೆ ಗ್ರಾಮದ 20ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಗ್ರಾಮದಲ್ಲಿ ಬಂದೋಬಸ್ತ್‌ ಬಿಗಿಗೊಳಿಸಲಾಗಿದೆ. ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ. 

ಗುಂಪುಗಳ ನಡುವೆ ಕಲ್ಲು ತೂರಾಟ ನಡೆಯುವ ದೃಶ್ಯಗಳು, ಪೊಲೀಸರು ಲಾಠಿ ಚಾರ್ಜ್‌ ಮಾಡಿರುವುದು, ಕಲ್ಲೇಟು ತಿಂದು ಪೊಲೀಸ್‌ ಅಧಿಕಾರಿ ನಿತ್ರಾಣಗೊಂಡು ಬಿದ್ದಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. 

ಸಂಧಾನ: ಗ್ರಾಮದಲ್ಲಿ ಘರ್ಷಣೆ ನಡೆಯುತ್ತಲೇ ಎರಡೂ ಗುಂಪುಗಳನ್ನು ಸಮಾಧಾನಪಡಿಸಲು ರಾಜಕೀಯ ಮುಖಂಡರು ಪ್ರಯತ್ನ ನಡೆಸಿದ್ದಾರೆ. ಸಮುದಾಯದ ನಾಯಕರ ಸಭೆಯನ್ನು ಕರೆಯಲಾಗಿದ್ದು, ಪ್ರಭಾವಿ ನಾಯಕರೊಬ್ಬರು ಮಧ್ಯಸ್ಥಿಕೆ ವಹಿಸಿದ್ದಾರೆ ಎನ್ನಲಾಗಿದೆ. ವಿವಾದ ಸುಖಾಂತ್ಯವಾಗುವ ನಿರೀಕ್ಷೆ ಇದೆ ಎಂದು ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT