ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ಮತದಾನವಿದ್ದರೂ ನೆರೆ ರಾಜ್ಯಗಳಿಂದ ಬಸ್‌ ಕಡಿತ!

ಆಂಧ್ರ ಪ್ರದೇಶ ವಿಧಾನಸಭೆ, ತೆಲಂಗಾಣದ 4ನೇ ಹಂತದ ಚುನಾವಣೆ: ಬಸ್‌ ಸೇವೆ ಕಡಿತ
Published 14 ಮೇ 2024, 4:50 IST
Last Updated 14 ಮೇ 2024, 4:50 IST
ಅಕ್ಷರ ಗಾತ್ರ

ಬಳ್ಳಾರಿ: ಮತದಾನದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಗಡಿ ಜಿಲ್ಲೆಗಳಿಂದ ಜನ ಹೆಚ್ಚಿನ ಸಂಖ್ಯೆ ಬರುವ ಮುನ್ಸೂಚನೆ ಇದ್ದರೂ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಸಾರಿಗೆ ಸಂಸ್ಥೆಗಳು ರಾಜ್ಯಕ್ಕೆ ಬಸ್‌ಗಳ ಕಾರ್ಯಾಚರಣೆಯನ್ನು ಕಡಿತಗೊಳಿಸಿವೆ. ಪರಿಣಾಮವಾಗಿ ರಾಜ್ಯದ ಸಾರಿಗೆ ಸಂಸ್ಥೆ ಕೆಎಸ್‌ಆರ್‌ಟಿಸಿ ಮೇಲೆ ಒತ್ತಡ ಸೃಷ್ಟಿಯಾಗಿದೆ. 

ಆಂಧ್ರ ಪ್ರದೇಶದಲ್ಲಿ 25 ಲೋಕಸಭಾ ಕ್ಷೇತ್ರಗಳು ಮತ್ತು 175 ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ತೆಲಂಗಾಣದಲ್ಲಿ 17 ಲೋಕಸಭಾ ಸ್ಥಾನಗಳಿಗೆ ಸೋಮವಾರ ಏಕಕಾಲಕ್ಕೆ ಮತದಾನ ನಡೆಯಿತು. ಮತದಾನದಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದಿಂದ ಭಾರಿ ಸಂಖ್ಯೆಯ ಜನ ಕಳೆದ ಎರಡು ದಿನಗಳಿಂದ ಆಂಧ್ರ ಮತ್ತು ತೆಲಂಗಾಣದ ವಿವಿಧ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಹೀಗೆ ಬೇರೆ ಬೇರೆ ರಾಜ್ಯಗಳಿಂದ ಬರುವ ತಮ್ಮ ಜನರಿಗೆ ನೆರೆ ರಾಜ್ಯದ ಸಾರಿಗೆ ಸಂಸ್ಥೆಗಳು ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡುವುದಿರಲಿ, ಇರುವ ಬಸ್‌ಗಳನ್ನೂ ಕಡಿತಗೊಳಿಸಿವೆ. ಈ ಮೂಲಕ ತಮ್ಮದೇ ನಾಗರಿಕರನ್ನು ತೊಂದರೆಗೆ ಸಿಲುಕಿಸಿವೆ. 

ಸಾಮಾನ್ಯ ದಿನಗಳಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಬಸ್‌ಗಳು ಬಳ್ಳಾರಿಯಿಂದ ಒಟ್ಟು 99 ಟ್ರಿಪ್‌ಗಳನ್ನು  ನಡೆಸುತ್ತವೆ. ಆದರೆ, ಮತದಾನದ ಹಿಂದಿನವಾದ ಮೇ 12ರಂದು 22 ಟ್ರಿಪ್‌ಗಳನ್ನು ಮಾತ್ರ ಮಾಡಲಾಗಿದೆ. ಮತದಾನದ ದಿನ ಬೆಳಗ್ಗೆ 11.30ರ ಹೊತ್ತಿಗೆ 10 ಟ್ರಿಪ್‌ಗಳನ್ನು ಮಾತ್ರ ಮಾಡಲಾಗಿತ್ತು. ಇದರಿಂದ ರಾಜ್ಯದ ರಾಜ್ಯ ಸಾರಿಗೆ ಸಂಸ್ಥೆಯ ಮೇಲೆ ಎರಡು ದಿನಗಳಿಂದ ವಿಪರೀತ ಒತ್ತಡ ಸೃಷ್ಟಿಯಾಗಿದೆ.

ಇಂಥ ಸಂದರ್ಭದಲ್ಲಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲು ರಾಜ್ಯ ಸಾರಿಗೆ ಸಂಸ್ಥೆಗೆ  ಪರ್ಮೀಟ್‌ ಅಡ್ಡ ಬರುತ್ತಿದೆ ಎನ್ನಲಾಗಿದ್ದು, ಹೆಚ್ಚು ಬಸ್‌ಗಳ ಬದಲಿಗೆ ಹೆಚ್ಚು ಟ್ರಿಪ್‌ಗಳನ್ನು ಮಾಡಲಾಗುತ್ತದೆ. ಭಾನುವಾರ ಮತ್ತು ಸೋಮವಾರವೂ ಆಂಧ್ರ ಮತ್ತು ತೆಲಂಗಾಣಕ್ಕೆ ಹೆಚ್ಚು ಟ್ರಿಪ್‌ಗಳನ್ನು ಕೈಗೊಳ್ಳುವ ಮೂಲಕ ಒತ್ತಡ ತಗ್ಗಿಸುವ ಪ್ರಯತ್ನವನ್ನು ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾಡಿದ್ದಾರೆ.  

ಬಳ್ಳಾರಿಯ ಬಸ್‌ ನಿಲ್ದಾಣದಿಂದ ಮೇ 12ರಂದು 94 ಟ್ರಿಪ್‌ ಬಸ್‌ ಸೇವೆಯನ್ನು ಆಂಧ್ರ ಮತ್ತು ತೆಲಂಗಾಣದ ವಿವಿಧ ಜಿಲ್ಲೆಗಳಿಗೆ ನೀಡಲಾಗಿದೆ. ಮತದಾನದ ದಿನವಾದ ಮೇ 13ರಂದು ಬೆಳಗ್ಗೆ 11.30ರ ಹೊತ್ತಿಗೇ 38 ಟ್ರಿಪ್‌ ಬಸ್‌ ಸೇವೆ ಒದಗಿಸಲಾಗಿದೆ. 

ಚುನಾವಣೆಗೆ ಬಳ್ಳಾರಿಯಿಂದ 50 ಬಸ್‌   

ಲೋಕಸಭಾ ಮತ್ತು ವಿಧಾನಸಭಾ ಚುನಾವಣಾ ಕೆಲಸಗಳಿಗಾಗಿ ಬಸ್‌ಗಳನ್ನು ಒದಗಿಸುವಂತೆ ಕರ್ನೂಲ್ ಜಿಲ್ಲಾಧಿಕಾರಿಗಳು ಕೆಕೆಎಸ್‌ಆರ್‌ಟಿಸಿಯ ಬಳ್ಳಾರಿಯ ವಿಭಾಗಕ್ಕೆ ಮನವಿ ಮಾಡಿದ್ದು, 50 ಬಸ್ಸುಗಳನ್ನು ಇಲ್ಲಿಂದ ಒದಗಿಸಲಾಗಿದೆ. ಬಸ್‌ಗಳನ್ನು ಒದಗಿಸಲು ಸಾರಿಗೆ ಸಂಸ್ಥೆ ಸಿದ್ಧವಾಗಿದ್ದರೂ, ಬಳ್ಳಾರಿ ಆರ್‌ಟಿಒ ಅಧಿಕಾರಿಗಳು ಪರ್ಮಿಟ್‌ ನೀಡಲು ವಿಳಂಬ ಮಾಡಿದ್ದರು ಎನ್ನಲಾಗಿದೆ. ಕೊನೆಗೆ ಜಿಲ್ಲಾಧಿಕಾರಿ ಮಧ್ಯಪ್ರವೇಶದ ಬಳಿಕ ಕರ್ನೂಲ್ ಜಿಲ್ಲೆಗಳಿಗೆ ಪರ್ಮಿಟ್‌ ಸಹಿತ 50 ಬಸ್‌ಗಳನ್ನು ನೀಡಲಾಗಿದೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದರು. 

ಬಳ್ಳಾರಿಯಿಂದ ಎಲ್ಲೆಲ್ಲಿಗೆ ಬಸ್‌?: ಬಳ್ಳಾರಿಯಿಂದ ಸದ್ಯ ಅನಂತಪುರ, ಕಡಪ, ಕರ್ನೂಲು, ಗುಂತಕಲ್,  ಆದೋನಿ, ತಿರುಪತಿ, ವಿಜಯವಾಡ, ಶ್ರೀಶೈಲ, ಕಲ್ಯಾಣದುರ್ಗ, ರಾಯದುರ್ಗ, ಗುತ್ತಿ, ಹೈದರಾಬಾದ್, ಊರವಕೊಂಡ, ತಾಡಿಪತ್ರಿ, ಮಂತ್ರಾಲಯ, ಹೊಳಗುಂದಿ, ಎಲ್ಲಾರ್ತಿಗೆ ಬಸ್‌ ಸೇವೆ ಒದಗಿಸಲಾಗುತ್ತಿದೆ. 

ಆಂಧ್ರ ತೆಲಂಗಾಣ ಬಸ್‌ಗಳನ್ನು ಕಡಿಮೆ ಮಾಡಲಾಗಿದೆ. ಹೀಗಾಗಿ ಒತ್ತಡ ಸೃಷ್ಟಿಯಾಗಿತ್ತು. ಹೆಚ್ಚುವರಿ ಟ್ರಿಪ್‌ಗಳನ್ನು ಮಾಡುವ ಮೂಲಕ ಒತ್ತಡ ತಗ್ಗಿಸಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ ಆಂಧ್ರಕ್ಕೆ ಇದೇ ಮೊದಲ ಬಾರಿಗೆ ನಾವು 50 ಬಸ್‌ಗಳನ್ನೂ ಕೊಟ್ಟಿದ್ದೇವೆ.
ಚಾಮರಾಜ್‌,  ವಿಭಾಗೀಯ ಸಂಚಾರ ಅಧಿಕಾರಿ, ಬಳ್ಳಾರಿ 

ಹಬ್ಬ ಹರಿದಿನ ಮತ್ತು ಮತದಾನದಂಥ ಸಂದರ್ಭಗಳಲ್ಲಿ ಬೇರೆ ರಾಜ್ಯಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಅಧಿಕವಿರುತ್ತದೆ. ಇಂಥ ಸಂದರ್ಭದಲ್ಲಿ ಹೆಚ್ಚುವರಿ ಬಸ್‌ಗಳನ್ನು ಒದಗಿಸಲು ರಾಜ್ಯ ಸಾರಿಗೆ ಸಂಸ್ಥೆ ಶಕ್ತವಾಗಿದೆಯಾದರೂ ಪ್ರಾದೇಶಿಕ ಸಾರಿಗೆ ಕಚೇರಿ(ಆರ್‌ಟಿಒ)ಯಿಂದ ಶೀಘ್ರ ಅನುಮತಿ ಸಿಗುತ್ತಿಲ್ಲ. ಪರ್ಮಿಟ್‌ ನೀಡಲು ಮೀನ ಮೇಷ ಎಣಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಖಾಸಗಿ ಟ್ರಾವೆಲ್ಸ್‌ ಮತ್ತು ಬಸ್‌ಗಳಿಗೆ ಅನುಕೂಲವಾಗುತ್ತಿದೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಆರೋಪಿಸಿದ್ದಾರೆ.   

ಪ್ರಚಾರ ಮಾಡಿ ಹೋಗಿದ್ದ ಅಭ್ಯರ್ಥಿಗಳು 

ಜಿಲ್ಲೆಗೆ ಹೊಂದಿಕೊಂಡಂತೆ ಆಂಧ್ರ ಪ್ರದೇಶದ ಅನಂತಪುರ ಕರ್ನೂಲು ಜಿಲ್ಲೆಗಳಿವೆ. ಅನಂತಪುರದಲ್ಲಿ 12 ವಿಧಾನಸಭಾ ಕ್ಷೇತ್ರಗಳಿದ್ದರೆ ಕರ್ನೂಲ್‌ ಜಿಲ್ಲೆಯಲ್ಲಿ 13 ವಿಧಾನಸಭಾ ಕ್ಷೇತ್ರಗಳಿವೆ. ರಾಯದುರ್ಗ ಉರವಕೊಂಡ ಕಲ್ಯಾಣದುರ್ಗ ಆಲೂರು ಆದೋನಿ ವಿಧಾನಸಭಾ ಕ್ಷೇತ್ರಗಳು ಬಳ್ಳಾರಿಯ ಬಗಲಲ್ಲೇ ಇವೆ. ಈ ಎರಡೂ ಜಿಲ್ಲೆಗಳಲ್ಲದೇ ಆಂಧ್ರ ಮತ್ತು ತೆಲಂಗಾಣದ ವಿವಿಧ ಜಿಲ್ಲೆಗಳ ಜನ ಉದ್ಯೋಗ ಕೃಷಿ  ಸೇರಿದಂತೆ ನಾನಾ ಕಾರಣಗಳಿಗೆ ಬಳ್ಳಾರಿ ವಿಜಯನಗರ ಜಿಲ್ಲೆಯ ಹಲವು ತಾಲ್ಲೂಕುಗಳಿಗೆ ಬಂದು ನೆಲೆಯೂರಿದ್ದಾರೆ. ಬಹುತೇಕರು ಹುಟ್ಟೂರಿನಲ್ಲೇ ಮತ ಹೊಂದಿದ್ದಾರೆ. ಇವರ ಮತಗಳನ್ನು ಸೆಳೆಯಲು ಅಲ್ಲಿನ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಬಳ್ಳಾರಿಗೆ ಬಂದು ಪ್ರಚಾರ ಮತಯಾಚನೆಯನ್ನೂ ಮಾಡಿ ಹೋಗಿದ್ದಾರೆ. ಹೀಗಾಗಿ ಮತದಾನದಲ್ಲಿ ಪಾಲ್ಗೊಳ್ಳಲೆಂದು ಸಹಜವಾಗಿಯೇ ಜಿಲ್ಲೆಯಿಂದ ಸಾಕಷ್ಟು ಜನ ಆಂಧ್ರ ತೆಲಂಗಾಣಗಳಿಗೆ ತೆರಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT