ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರೀನ್ ಆ್ಯಪಲ್ ಬರ್’ನಿಂದ ವಲಸಿಗನ ಸಾಧನೆ

Last Updated 24 ಡಿಸೆಂಬರ್ 2018, 8:54 IST
ಅಕ್ಷರ ಗಾತ್ರ

ಕುರುಗೋಡು: ಕಡಿಮೆ ನೀರಿನಲ್ಲಿ ‘ಗ್ರೀನ್‌ ಆ್ಯಪಲ್‌ ಬರ್‌’ ಗಿಡಗಳನ್ನು ಬೆಳೆಸಿ, ತೋಟಗಾರಿಕೆಯಲ್ಲಿ ಇಲ್ಲಿನ ಮುಟ್ಟದನೂರು ಕ್ಯಾಂಪಿನ ಯುವ ರೈತ ರವೀಂದ್ರ ಯಶಸ್ಸು ಗಳಿಸಿದ್ದಾರೆ.

ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆ ಗಂಗಾಪಾಲಂನಿಂದ ಬದುಕು ಕಟ್ಟಿಕೊಟ್ಟಲು ಕೆಲ ವರ್ಷಗಳ ಹಿಂದೆ ಈ ಭಾಗಕ್ಕೆ ವಲಸೆ ಬಂದು, ಕೃಷಿ ಕಾರ್ಮಿಕರಾಗಿ ದುಡಿದ ಅವರು, ನಂತರ ಗುತ್ತಿಗೆ ಆಧಾರದಲ್ಲಿ ಭೂಮಿ ಪಡೆದು ಮೊದಲು ಅಂಜೂರ ಬೆಳೆದರು. ಎಲ್ಲರೂ ಅಂಜೂರ ಬೆಳೆಯಲು ಪ್ರಾರಂಭಿಸಿದ ಪರಿಣಾಮ ಬೆಲೆ ಕುಸಿತ ದಿಂದ ನಷ್ಟ ಅನುಭವಿಸಿದರು. ಲಾಭದಾಯಕ ‘ಗ್ರೀನ್ ಆ್ಯಪಲ್ ಬರ್’ ತೋಟ ಬೆಳೆಸಿ, ಈಗ ಅದರಲ್ಲಿ ಯಶ ಕಂಡಿದ್ದಾರೆ.

ಮೂರು ವರ್ಷಗಳ ಹಿಂದೆ ಆಂಧ್ರಪ್ರದೇಶದ ಹೈದರಾಬಾದ್‌ನ ಕೃಷ್ಣಾರೆಡ್ಡಿ ಸಸಿ ನರ್ಸರಿಯಲ್ಲಿ ₹30ಕ್ಕೆ ಒಂದರಂತೆ ಸಸಿಗಳನ್ನು ಖರೀದಿಸಿ ತಂದಿದ್ದಾರೆ. ಐದು ಎಕರೆ ಭೂಮಿಯಲ್ಲಿ 10.12 ಅಡಿ ಅಂತರದಲ್ಲಿ ಒಟ್ಟು 1,750 ಗಿಡಗಳನ್ನು ಬೆಳೆಸಿದ್ದಾರೆ.

ಒಂದು ಬಾರಿ ನಾಟಿ ಮಾಡಿ ಗಿಡ ಬೆಳೆಸಿದರೆ ಕನಿಷ್ಠ 15 ವರ್ಷ ಬೆಳೆ ಬರುತ್ತದೆ. ಪ್ರತಿ ವರ್ಷ ಡಿಸೆಂಬರ್‌ನಿಂದಫೆಬ್ರುವರಿ ವರೆಗೆ ಮೂರು ತಿಂಗಳು ನಿರಂತರವಾಗಿ ಫಸಲು ಬರುತ್ತದೆ. ಬೆಳೆ ಪಡೆದ ನಂತರ ಮೇ ಅಥವಾ ಜೂನ್ ತಿಂಗಳಲ್ಲಿ ಗಿಡಗಳ ಕೊಂಬೆಗಳನ್ನು ಬುಡದವರೆಗೆ ಕತ್ತರಿಸಲಾಗುತ್ತದೆ. ಆರು ತಿಂಗಳ ನಂತರ ಪುನಃ ಇಳುವರಿ ಕೊಡಲು ಪ್ರಾರಂಭವಾಗುತ್ತದೆ. ಬೇರೆ ಬೆಳೆಗೆ ಹೋಲಿಸಿದರೆ ‘ಗ್ರೀನ್ ಆ್ಯಪಲ್ ಬರ್’ ಬೆಳೆಗೆ ರೋಗ ಮತ್ತು ಕೀಟ ಬಾಧೆ ಕಡಿಮೆ. ಗಿಡದಲ್ಲಿ ಹಣ್ಣುಗಳ ಜತೆಗೆ ಮುಳ್ಳು ಇರುವುದರಿಂದ ಪಕ್ಷಿಗಳ ಕಾಟವೂ ಇಲ್ಲ.

ಸಮೃದ್ಧ ಬೆಳೆಗಾಗಿ ಸಾವಯವ ಗೊಬ್ಬರ ಮತ್ತು ಜೀವಾಮೃತ ಬಳಸುತ್ತಿದ್ದಾರೆ. ಇದರ ಪರಿಣಾಮ ತೋಟದಲ್ಲಿ ಸಮೃದ್ಧವಾಗಿ ಬೆಳೆದಿರುವ ಪ್ರತಿಯೊಂದು ಗಿಡದಲ್ಲಿ 250 ರಿಂದ 300 ಹಣ್ಣುಗಳು ಬಿಟ್ಟಿವೆ. ಬೆಳೆ ನಿರ್ವಹಣೆ ಮತ್ತು ಕಾರ್ಮಿಕರ ಕೂಲಿ ಸೇರಿ ಪ್ರತಿ ಎಕರೆಗೆ ₹1 ಲಕ್ಷ ವೆಚ್ಚ ಬರುತ್ತದೆ. ಪ್ರತಿದಿನ 1.5 ಟನ್ ಹಣ್ಣು ದೊರೆಯುತ್ತಿದೆ.

10 ಕೆ.ಜಿ. ಹಣ್ಣಿನ ಬಾಕ್ಸ್ ಗಳನ್ನು ಬೆಂಗಳೂರು, ಹೈದರಾಬಾದ್ ಮತ್ತು ಚೆನೈ ಮಾರುಕಟ್ಟೆಗೆ ಕಳುಹಿಸಿಕೊಡುತ್ತಿದ್ದಾರೆ. 10 ಕೆ.ಜಿ.ಗೆ ₹300 ಬೆಲೆ ದೊರೆಯುತ್ತಿದೆ. ಕಳೆದ ವರ್ಷ ₹8 ಲಕ್ಷ ಆದಾಯ ಬಂದಿತ್ತು. ಈ ವರ್ಷ ಇಳುವರಿ ಉತ್ತಮವಾಗಿದ್ದು ₹13 ಲಕ್ಷದ ವರೆಗೆ ಆದಾಯದ ನಿರೀಕ್ಷೆಯಲ್ಲಿ ರವೀಂದ್ರ ಇದ್ದಾರೆ.

‘ಜೀವನ ನಿರ್ವಹಣೆಗಾಗಿ ಆಂಧ್ರದಿಂದ ವಲಸೆ ಬಂದು ಕೂಲಿ ಕೆಲಸ ಮಾಡುತ್ತಿದ್ದ ನಾವು ‘ಗ್ರೀನ್ ಆ್ಯಪಲ್ ಬರ್’ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರಿಂದ ಪ್ರತಿದಿನ 15 ಜನ ಕಾರ್ಮಿಕರಿಗೆ ಕೆಲಸ ನೀಡುವ ಅವಕಾಶ ಬಂದಿದೆ. ನಾವು ಬದುಕುವ ಜತೆಗೆ ಕೂಲಿಕಾರರು ಬದುಕುತ್ತಿರುವುದು ನಮಗೆ ಖುಷಿ ತಂದಿದೆ. ನನ್ನ ಜತೆಗೆ ನನ್ನ ಪತ್ನಿ ಮನೋಜಮ್ಮ ಕೂಡ ಕೆಲಸದಲ್ಲಿ ಕೈಜೋಡಿಸುತ್ತಾರೆ’ ಎನ್ನುವುದನ್ನು ಹೇಳಲು ರವೀಂದ್ರ ಮರೆಯಲಿಲ್ಲ.

ತೋಟಗಾರಿಕೆ ಇಲಾಖೆಯಲ್ಲಿ ದೊರೆಯುವ ಸೂಕ್ಷ್ಮ ನೀರಾವರಿ ಯೋಜನೆಯ ಶೇ 90 ರಿಯಾಯಿತಿಯಲ್ಲಿ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ.

ಜನ ಮತ್ತು ಜಾನುಗಾರುಗಳಿಂದ ರಕ್ಷಿಸಲು ತೋಟದ ಸುತ್ತ ತಂತಿ ಬೇಲಿ ಹಾಕಿಸಿದ್ದಾರೆ. ತೋಟದ ನಿರ್ವಹಣೆ ನೋಡಲು ಜಿಲ್ಲೆಯ ವಿವಿಧ ಭಾಗಗಳ ಅನೇಕ ರೈತರು ಭೇಟಿ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT