ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಕ್ಕಲಕೋಟೆ: ಬೂದುಗುಂಬಳ ಬೆಳೆಗೆ ವರವಾದ ಚರಂಡಿ ನೀರು

ಬರಗಾಲದಲ್ಲೂ ಲಾಭ ಪಡೆಯಲು ಹೊಸ ವಿಧಾನ ಅಳವಡಿಕೆ
ಚಾಂದ್ ಬಾಷ
Published 26 ಏಪ್ರಿಲ್ 2024, 7:34 IST
Last Updated 26 ಏಪ್ರಿಲ್ 2024, 7:34 IST
ಅಕ್ಷರ ಗಾತ್ರ

ತೆಕ್ಕಲಕೋಟೆ: ಬರದಲ್ಲೂ ಬಂಗಾರದ ಬೆಳೆ ಬೆಳೆಯುವ ರೈತರಿಗೇನು ಕೊರತೆಯಿಲ್ಲ. ವಿಶೇಷವಾಗಿ ಸಣ್ಣ ಹಿಡುವಳಿ ರೈತರು, ತರಕಾರಿ ಬೆಳೆಗಾರರು ಈ ವಿಧಾನವನ್ನು ಅನುಸರಿಸಿ ತಕ್ಕಮಟ್ಟಿಗೆ ಆದಾಯ ಪಡೆಯುತ್ತಿದ್ದಾರೆ.

ಸಮೀಪದ ಕರೂರು ಗ್ರಾಮದ ರೈತ ವೈ.ಕೃಷ್ಣಾರೆಡ್ಡಿ ಅವರು ಚರಂಡಿ ನೀರು ಬಳಸಿ ಬರದಲ್ಲೂ ಬೂದುಗುಂಬಳ ಬೆಳೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಬೂದುಗುಂಬಳ ಕೃಷಿ ಹೇಗೆ?


ಒಂದುವರೆ ಎಕರೆಗೆ ದಾವಣಗೆರೆಯಿಂದ 600 ಗ್ರಾಂ ಬೂದುಗುಂಬಳ ಬೀಜ ತಂದು ಸಸಿ ಮಾಡಿ ನಾಟಿ ಮಾಡಿದ್ದಾರೆ. ಬಳ್ಳಿಯಿಂದ ಬಳ್ಳಿಗೆ ಎರಡು ಅಡಿ ಅಂತರ, ಸಾಲಿನಿಂದ ಸಾಲಿಗೆ 15 ಅಡಿ ಅಂತರಬಿಟ್ಟು ಸಸಿ ನಾಟಿ ಮಾಡುತ್ತಾರೆ. ಪ್ರತಿ ಸಸಿ ಬುಡಕ್ಕೆ ಕಾಲುಬುಟ್ಟಿಯಷ್ಟು ಸಗಣಿಗೊಬ್ಬರ, ಜತೆಗೆ, ಗಿಡ ಚಿಗುರಿ ಬಳ್ಳಿಯಾಗಿ ಹಬ್ಬುತ್ತಿದ್ದಾಗ ಇಡೀ ಹೊಲಕ್ಕೆ 20:20 ಕಾಂಪ್ಲೆಕ್ಸ್‌ ಗೊಬ್ಬರ ಹಾಕಿದ್ದಾರೆ. 40 ದಿನಗಳ ನಂತರ ಸಸಿಗಳಲ್ಲಿ ಹೂವು ಬಿಟ್ಟು, ಮಿಡಿಯಾಗಿ, 80ನೇ ದಿನದ ಹೊತ್ತಿಗೆ ಕಾಯಿ ಫಸಲಿಗೆ ಬರುತ್ತದೆ.

‘ಜನವರಿ ಮೊದಲ ವಾರ ಹೊಲ ಹದ ಮಾಡಿ, ಸಸಿ ನಾಟಿ ಹಾಕಿಸಿದ್ದೆವು. ಈಗ ಫಸಲು ಕಟಾವಿಗೆ ಬಂದಿದೆ. ಒಂದೊಂದು ಕಾಯಿ 8  ಒಂದು ಕೆ.ಜಿ.ವರೆಗೂ ತೂಗುತ್ತಿದ್ದು. ಹೊಸ ಬಗೆಯ ಪ್ರಯತ್ನ ಇದು. ಇದಕ್ಕೆ ಮಾರುಕಟ್ಟೆ ಹುಡುಕಾಟದಲ್ಲಿದ್ದೇನೆ’ ಎನ್ನುತ್ತಾರೆ ಕೃಷ್ಣಾರೆಡ್ಡಿ.

ಬೂದುಗುಂಬಳ ಸಸಿ ನಾಟಿ ಮಾಡಿದ್ದು ಮೊದಲ ಬಾರಿ ಆಗಿದ್ದರಿಂದ ಗ್ರಾಮದ ಸುತ್ತ ನಡೆಯುವ ರಥೋತ್ಸವ, ದೇವರ ಉತ್ಸವಗಳು, ಗೃಹಪ್ರವೇಶ, ದೇವಸ್ಥಾನಗಳಲ್ಲಿ ನಡೆಯುವ ಹೋಮ–ಹವನಗಳ ಕಾರ್ಯಕ್ರಮಗಳಿಗೆ ಕಾಯಿಗೆ ₹100 ರಂತೆ ಮಾರಾಟ ಮಾಡುತ್ತಿದ್ದಾರೆ.

ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಹಿಂಗಾರು ಬೆಳೆಗೆ ನೀರಿನ ಸಮಸ್ಯೆ ಆಯಿತು. ಹತ್ತಿರದಲ್ಲೇ ಇರುವ ಹಳ್ಳದ ಚರಂಡಿ ನೀರನ್ನು ಗುಂಡಿ ತೋಡಿ ಸಂಗ್ರಹಿಸಿ ಅದೇ ನೀರನ್ನು ಜಮೀನಿಗೆ ಲಿಫ್ಟ್ ಮಾಡುತ್ತಾರೆ. ಹತ್ತು ದಿನಕ್ಕೊಮ್ಮೆ ನೀರು ಕೊಡುತ್ತಾರೆ. ಸಸಿ ನಾಟಿ ಮಾಡುವಾಗ, ಗೊಬ್ಬರ ಕೊಡುವಾಗ ಕೂಲಿ ಕಾರ್ಮಿಕರು ಬೇಕಾಗುತ್ತಾರೆ.

ಮಾರುಕಟ್ಟೆ – ಲೆಕ್ಕಾಚಾರ: ಒಂದುವರೆ ಎಕರೆಯಲ್ಲಿ ಸರಾಸರಿ 15ರಿಂದ 20 ಟನ್‌ಗೆ ಮೋಸವಿಲ್ಲ. ಒಂದು ಕೆ.ಜಿ. ಕಾಯಿಗೆ ಸರಾಸರಿ ₹15 ಸಿಗುತ್ತದೆ. ಒಂದು ಎಕರೆಗೆ ₹30 ಸಾವಿರದಿಂದ ₹40 ಸಾವಿರದವರೆಗೆ ಖರ್ಚು. ಇದನ್ನು ಕಳೆದರೆ ಮಾರುಕಟ್ಟೆ ಹಾಗೂ ಬೆಲೆ ಏರಿಳಿತದ ನಡುವೆಯೂ ಸರಾಸರಿ ₹1 ಲಕ್ಷದವರೆಗೂ ಆದಾಯ ನಿರೀಕ್ಷಿಸಬಹುದು ಎನ್ನುವುದು ಕೃಷ್ಣಾರೆಡ್ಡಿ ಲೆಕ್ಕಾಚಾರ.

ರಸ್ತೆ ಬದಿಯೇ ಹೊಲ ಇರುವುದರಿಂದ ಕೊಯ್ಲಾದ ಫಸಲನ್ನು ಮಾರುಕಟ್ಟೆಗೆ ಸಾಗಿಸಲು ಸಮಸ್ಯೆ ಇಲ್ಲ. ಕುಂಬಳ ಕಾಯಿ ಕಟಾವು ಮಾಡಲು ಸಿದ್ದವಿದ್ದು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಬೂದುಗುಂಬಳ ಕೃಷಿಗೆ ಕುಟುಂಬದ ಸದಸ್ಯರು ಸಹಕರಿಸುತ್ತಾರೆ. ಮಗ ಕೂಡ ಅಪ್ಪನ ಕೃಷಿಗೆ ಸಾಥ್ ನೀಡುತ್ತಿದ್ದಾರೆ.

‘ವರ್ಷದ ಎರಡೂ ಬೆಳೆ ಭತ್ತವನ್ನೇ ಬೆಳೆಯುತ್ತಿದ್ದ ಇವರು ಈ ಬಾರಿ ಬೂದುಗುಂಬಳ ಬೆಳೆದು ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಕರೂರು ಗ್ರಾಮದಿಂದ ಹಳ್ಳಕ್ಕೆ ಹರಿದು ಬರುವ ಗಟಾರ ನೀರು ಇವರಿಗೆ ವರವಾಯಿತು’ ಎನ್ನುತ್ತಾರೆ ರೈತ ವೈ. ಕೃಷ್ಣಾರೆಡ್ಡಿ.

ಬರದಲ್ಲೂ ಬೆಳೆ ಬೆಳೆದ ರೈತನ ಸಾಧನೆಯನ್ನು ಕಣ್ತುಂಬಿಕೊಳ್ಳಲು ಸುತ್ತ ಮುತ್ತಲಿನ ಹಳ್ಳಿ ಜನರು ಬರುತ್ತಿದ್ದಾರೆ. ಬರಕ್ಕೆ ಬೆದರಿ ಭೂಮಿಯನ್ನು ಬಂಜರು ಮಾಡಿದ್ದ ರೈತರಿಗೆ ಕೃಷ್ಣಾರೆಡ್ಡಿ ಬರದಲ್ಲೂ ಮಾದರಿಯಾದರು. ಪ್ರಗತಿಪರ ರೈತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದ ರೈತ ಕೃಷ್ಣಾರೆಡ್ಡಿ ಹೊಲದಲ್ಲಿ ಸೊಂಪಾಗಿ ಬೆಳೆದ ಬೂದುಗುಂಬಳ ಬೆಳೆ
ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದ ರೈತ ಕೃಷ್ಣಾರೆಡ್ಡಿ ಹೊಲದಲ್ಲಿ ಸೊಂಪಾಗಿ ಬೆಳೆದ ಬೂದುಗುಂಬಳ ಬೆಳೆ
ಕುಂಬಳ ಬಳ್ಳಿಗೆ ಕೀಟಬಾಧೆ ಇದೆ. ಅದಕ್ಕಾಗಿ ಬಳ್ಳಿಗಳ ನಡುವೆ ಕೀಟ ಆಕರ್ಷಕ ಬಲೆ (ಟ್ರಾಪ್) ಇಡುತ್ತೇವೆ. ಇಷ್ಟು ಹೊರತುಪಡಿಸಿದರೆ ಬೂದುಗುಂಬಳ ಬೆಳೆಗೆ ನಿರ್ವಹಣೆ ಅಷ್ಟೊಂದಿಲ್ಲ
ಕೃಷ್ಣಾರೆಡ್ಡಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT