ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಸರ್ಕಾರಿ ಗೌರವಗಳೊಂದಿಗೆ ನಾಡೋಜ ಬೆಳಗಲ್ಲು ವೀರಣ್ಣ ಅಂತ್ಯಕ್ರಿಯೆ

ತೊಗಲುಗೊಂಬೆ ಕಲಾವಿದ
Last Updated 3 ಏಪ್ರಿಲ್ 2023, 15:56 IST
ಅಕ್ಷರ ಗಾತ್ರ

ಬಳ್ಳಾರಿ: ರಸ್ತೆ ಅಪಘಾತದಲ್ಲಿ ಭಾನುವಾರ ನಿಧನರಾದ ಹಿರಿಯ ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣನವರ ಅಂತ್ಯಕ್ರಿಯೆ ತಾಲೂಕಿನ ಶಂಕರಬಂಡೆ ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಸಂಜೆ ನಡೆಯಿತು.

ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಂಕರಬಂಡೆ ಗ್ರಾಮಸ್ಥರು, ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಕಲಾವಿದರು ಸೇರಿದಂತೆ ನೂರಾರು ಜನ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.

ಇದಕ್ಕೂ ಮುನ್ನ ನಗರದ ರಾಘವ ಕಲಾಮಂದಿರದಲ್ಲಿ ಮೃತರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ಅವಕಾಶವಿತ್ತು.

ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಜಿಲ್ಲಾ ಖನಿಜ ನಿಧಿ ವಿಶೇಷಾಧಿಕಾರಿ ಪಿ.ಎಸ್‌. ಮಂಜುನಾಥ, ಲೋಹಿಯಾ ಪ್ರಕಾಶನದ ಸಂಸ್ಥಾಪಕ ಚೆನ್ನಬಸವಣ್ಣ, ವರ್ಣಾಲಂಕಾರ ಕಲಾವಿದ ಮೈಸೂರಿನ ಡಿ.ಎ. ರಾಮಚಂದ್ರ, ಉದ್ಯಮಿ ಎಂ.ಜಿ.ಗೌಡ, ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್, ಮಹಾನಗರ ಪಾಲಿಕೆ ಸದಸ್ಯ ಪಿ.ಗಾದೆಪ್ಪ, ಎಂ.ಡಿ.ಆಸೀಫ್, ಶ್ರೀನಿವಾಸ ಮೋತ್ಕರ್, ಪ್ರಭಂಜನ ಕುಮಾರ್‌, ಮಾಜಿ ಮೇಯರ್ ವೆಂಕಟರಮಣ ಸೇರಿದಂತೆ ವೀರಣ್ಣನವರ ಅಭಿಮಾನಿಗಳು ಹಾಗೂ ಕಲಾವಿದರು ಅಂತಿಮ ದರ್ಶನ ಪಡೆದರು.

ಇದೇ ಸಂದರ್ಭದಲ್ಲಿ ನಡೆದ ಶ್ರದ್ಧಾಂಜನಿ ಸಭೆಯಲ್ಲಿ ಮಾತನಾಡಿದ ಹಿರಿಯ ಕಲಾವಿದ ನಾಡೋಜ ವಿ.ಟಿ.ಕಾಳೆ, ತೊಗಲುಗೊಂಬೆ ಕಲಾ ಪ್ರಕಾರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಬೆಳಗಲ್ಲು ವೀರಣ್ಣನವರ ಸಹೋದರನಂತೆ ಇದ್ದರು. ವೀರಣ್ಣನವರ ಬೊಂಬೆಯಾಟಕ್ಕೆ ಬೇಕಾಗಿದ್ದ 600ಕ್ಕೂ ಹೆಚ್ಚು ರೇಖಾಚಿತ್ರಗಳನ್ನು ಮಾಡಿಕೊಟ್ಟಿದ್ದೆ. ಒಬ್ಬ ಕಲಾವಿದ ಹೇಗೆ ಸರಳ, ಸಜ್ಜನಿಕೆಯಿಂದ ಜೀವನ ನಿರ್ವಹಿಸಬೇಕು ಎಂಬುದನ್ನು ತೋರಿಸಿಕೊಟ್ಟ ಅಪರೂಪದ ವ್ಯಕ್ತಿತ್ವ ವೀರಣ್ಣನವರದ್ದು ಎಂದು ಸ್ಮರಿಸಿದರು.

ತೆರೆಮರೆಯಲ್ಲಿದ್ದ ಅಪರೂಪದ ತೊಗಲುಗೊಂಬೆ ಕಲಾ ಪ್ರಕಾರಕ್ಕೆ ಜೀವ ತುಂಬಿ ದೇಶದ ಅನೇಕ ರಾಜ್ಯಗಳಲ್ಲಿ ಪ್ರದರ್ಶನ ನೀಡಿದ್ದಲ್ಲದೆ, ವಿದೇಶಗಳಲ್ಲೂ ನಮ್ಮ ನೆಲಮೂಲದ ಕಲೆಯನ್ನು ಪರಿಚಯಿಸಿದ ದೊಡ್ಡ ಕೆಲಸ ವೀರಣ್ಣನವರಿಂದಾಗಿದೆ ಎಂದು ಕಾಳೆ ಹೇಳಿದರು.

ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದ ಬೆಳಗಲ್ಲು ವೀರಣ್ಣನವರು ಈ ನಾಡು ಕಂಡ ಅಪರೂಪದ ಕಲಾವಿದ. ಬಾಲ್ಯದಲ್ಲಿ ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ, ರಂಗಭೂಮಿ ಕ್ಷೇತ್ರದಲ್ಲಿಯೇ ಸಾಧನೆ ಮಾಡಬೇಕು ಎಂಬ ಹಠ ತೊಟ್ಟವರು ಎಂದು ನೆನಪು ಮಾಡಿಕೊಂಡರು.

ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಮಾತನಾಡಿ, ರಂಗಭೂಮಿ ಹಾಗೂ ತೊಗಲುಗೊಂಬೆ ಕ್ಷೇತ್ರದಲ್ಲಿ ಬಹುದೊಡ್ಡ ಕೆಲಸ ಮಾಡಿರುವ ವೀರಣ್ಣನವರು ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದರು.

ವೀರಣ್ಣನವರನ್ನು ವಿಧಾನಸಭೆ ಚುನಾವಣೆಗೆ ರಾಯಭಾರಿಯಾಗಿದ್ದರು. ಮತದಾರರ ಜಾಗೃತಿ ಮೂಡಿಸುವ ಸಂಬಂಧ ನಿರ್ಮಿಸಲಾಗಿರುವ ಕಿರು ಚಿತ್ರದಲ್ಲಿ ಅವರು ಅಭಿನಯಿಸಿದ್ದರು. ಈ ಚಿತ್ರವನ್ನು ಸಾರ್ವಜನಿಕರಿಗೆ ಸಮರ್ಪಿಸಲಾಗಿದೆ ಎಂದೂ ಜಿಲ್ಲಾಧಿಕಾರಿ ವಿವರಿಸಿದರು.

ಕಲಾವಿದರಿಂದ ಗಾನ ನಮನ...
ಬೆಳಗಲ್ಲು ವೀರಣ್ಣನವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದ್ದ ರಾಘವ ಕಲಾ ಮಂದಿರದಲ್ಲಿ ಕಲಾವಿದರಿಂದ ಗಾನ-ನಮನ ಕಾರ್ಯಕ್ರಮ ಜರುಗಿತು.

ವಂದವಾಗಲಿ ದೊಡ್ಡಬಸಯ್ಯಸ್ವಾಮಿ, ದೊಡ್ಡಬಸವ ಗವಾಯಿ ಡಿ.ಕಗ್ಗಲ್, ಹುಸೇನಪ್ಪ ಅರಳಿಗನೂರು, ಶೃತಿ ಹಂದ್ಯಾಳು, ಅಯ್ಯಪ್ಪಯ್ಯ ಗದಗ, ಸುರೇಂದ್ರ ಹೊಸಪೇಟೆ ಸೇರಿದಂತೆ ಜಿಲ್ಲೆಯ ವಿವಿಧ ಕಲಾವಿದರು ಪಾಲ್ಗೊಂಡು ನಾಡೋಜ ವೀರಣ್ಣನವರಿಗೆ ಗಾನ-ನಮನ ಸಮರ್ಪಿಸಿದರು.

ಕಣ್ಣೀರಿಟ್ಟ ಪಂ. ವೆಂಕಟೇಶ್ ಕುಮಾರ್
ಗಾನ- ನಮನ ವೇಳೆ ಬೆಳಗಲ್ಲು ವೀರಣ್ಣನವರ ಅಳಿಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಹಿಂದೂಸ್ತಾನಿ ಗಾಯಕ ಪಂಡಿತ ವೆಂಕಟೇಶ್ ಕುಮಾರ್ ಹಾಡಲು ಮುಂದಾಗಿ ಸಾಧ್ಯವಾಗದೆ ಕಣ್ಣೀರಿಟ್ಟ ಪ್ರಸಂಗ ಜರುಗಿತು.

ಮಾವನವರ ನಿಧನದಿಂದ ಆಘಾತಗೊಂಡಿದ್ದ ವೆಂಕಟೇಶ್‍ ಕುಮಾರ್ ಗಾನ-ನಮನ ವೇಳೆ ಶಿವ, ಶಿವ ಎಂಬ ವಚನ ಹಾಡಲು ಮುಂದಾದರು. ಹಾಡಲಾರಂಭಿಸುತ್ತಿದ್ದಂತೆ ದುಃಖ ತಾಳಲಾರದೆ ಗಾಯನ ನಿಲ್ಲಿಸಿದರು.

ಸರಳತೆ-ಸಜ್ಜನಿಕೆಯ ಬೆಳಗಲ್ಲು ವೀರಣ್ಣನವರು ಇತರರಿಗೆ ಮಾದರಿ. ವೈರಿಗಳನ್ನು ಸಹ ಆತ್ಮೀಯರಾಗಿ ಕಾಣುವ ಮನೋಭಾವ ಅವರದ್ದು. ಈ ಮಹಾನುಭಾವ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ವೆಂಕಟೇಶ್‌ ಕುಮಾರ್ ಹೇಳಿದರು.

ಎರಡು ನಕ್ಷತ್ರಗಳು: ಚೆನ್ನಬಸವಣ್ಣ
ಸುಭದ್ರಮ್ಮ ಮನ್ಸೂರು ಹಾಗೂ ಬೆಳಗಲ್ಲು ವೀರಣ್ಣನವರು ರಂಗಭೂಮಿಯ ನಕ್ಷತ್ರಗಳಂತೆ ಇದ್ದರು. ರಂಗಭೂಮಿ ಹಾಗೂ ತೊಗಲುಗೊಂಬೆ ಕಲಾ ಪ್ರಕಾರದ ಮೂಲಕ ಬಳ್ಳಾರಿ ಕೀರ್ತಿ ಬೆಳಗಿದ ಮಹಾನುಭಾವರು ಎಂದು ಸಮಾಜವಾದಿ ಚಿಂತಕ ಹಾಗೂ ಲೋಹಿಯಾ ಪ್ರಕಾಶನದ ಸಂಸ್ಥಾಪಕ ಚೆನ್ನಬಸವಣ್ಣ ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT