ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಗೋಡು | ಬತ್ತಿದ ಕೆರೆ: ಕುಡಿಯುವ ನೀರಿಗೆ ತತ್ವಾರ

Published 27 ಮಾರ್ಚ್ 2024, 4:53 IST
Last Updated 27 ಮಾರ್ಚ್ 2024, 4:53 IST
ಅಕ್ಷರ ಗಾತ್ರ

ಕುರುಗೋಡು: ಬಿಸಿಲಿನ ಪ್ರಖರತೆ ಹೆಚ್ಚುತ್ತಿದೆ. ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಬಿಸಿಲ ಬೇಗೆಯಲ್ಲಿ ಬೆಂದು ಬಸವಳಿದ ತಾಲ್ಲೂಕಿನ ಜನರ ನೀರಿನ ದಾಹ ತೀರದಾಗಿದೆ.

ಕುರುಗೋಡು ಪಟ್ಟಣದಲ್ಲಿಯೂ ಪುರಸಭೆ ವತಿಯಿಂದ ಎರಡು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕೆಲವು ವಾರ್ಡ್‍ಗಳಲ್ಲಿ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ನಿತ್ಯ ಕೊಡ ಹಿಡಿದು ಗಲ್ಲಿಗಲ್ಲಿ ಅಲೆಯುವುದೇ ಕೆಲಸವಾಗಿದೆ.

ತಾಲ್ಲೂಕಿನ ಬಾದನಹಟ್ಟಿ, ಕಲ್ಲುಕಂಭ, ಗ್ರಾಮದಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಕೆರೆಯಲ್ಲಿ ನೀರು ಸಂಗ್ರಹವಾಗಿಲ್ಲ. ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕಗಳು ಜನರ ದಾಹ ತೀರಿಸುತ್ತಿಲ್ಲ. ಜನರಿಗೆ ಕೊಳವೆಬಾವಿಯ ಫ್ಲೋರೈಡ್‍ಯುಕ್ತ ನೀರೇ ಗತಿಯಾಗಿದೆ.

ಓರ್ವಾಯಿ, ಗುತ್ತಿಗನೂರು, ಪಟ್ಟಣಸೆರಗು, ಎಮ್ಮಿಗನೂರು ಮತ್ತು ಎರಡು ಕ್ಯಾಂಪ್‍ಗಳಿಗೆ ನೀರು ಪೂರೈಸುವ ಉದ್ದೇಶ ದಿಂದ ತಾಲ್ಲೂಕಿನ ಓರ್ವಾಯಿ ಕ್ರಾಸ್‍ನಲ್ಲಿ ನಿರ್ಮಿಸಿರುವ ಬಹು ಗ್ರಾಮ ಕುಡಿಯುವ ನೀರು ಕೆರೆ ಭರ್ತಿಯಾಗದೆ ಜನರ ನೀರಿನ ದಾಹ ತೀರಿಸುತ್ತಿಲ್ಲ.

ತಾಲ್ಲೂಕಿನ ಸಿಂಧಿಗೇರಿ ಗ್ರಾಮದಲ್ಲಿ ನಿರ್ಮಿಸಿದ ಬಹುಗ್ರಾಮ ಕುಡಿಯುವ ನೀರಿನ ಕೆರೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ಪರಿಣಾಮ ಆ ವ್ಯಾಪ್ತಿಯ ಸೋಮಸಮುದ್ರ, ಕೋಳೂರು ಮತ್ತು ದಮ್ಮೂರು ಗ್ರಾಮಗಳ ಜನರಿಗೆ ಫ್ಲೋರೈಡ್‌ಯುಕ್ತ ಬೋರ್‌ವೆಲ್ ನೀರಿನ ಬಳಕೆ ಅನಿವಾರ್ಯವಾಗಿದೆ.

ಕೋಳೂರು ಗ್ರಾಮದಲ್ಲಿ ಕೆರೆ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದದೆ. ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ತೆರೆದಿದ್ದರೂ ಜನರ ನೀರಿನ ದಾಹ ತೀರಿಸುತ್ತಿಲ್ಲ ಎನ್ನುವ ಆರೋಪ ಮಾಡುತ್ತಾರೆ ಕೋಳೂರು ಗ್ರಾಮದ ನಿವಾಸಿ ಎ.ಪಂಪಾಪತಿ.

ಯರಿಂಗಳಿಗಿ ಗ್ರಾಮದ ಕೆರೆಯಲ್ಲಿ ನೀರು ಸಂಗ್ರಹ ಪ್ರಮಾಣ ಕಡಿಮೆ ಇರುವುದರಿಂದ ವಾರದಲ್ಲಿ ಒಂದು ದಿನ ಕುಡಿಯುವ ನೀರು ಸರಬರಾಜು ಮಾಡಲು ಗ್ರಾಮದ ಜನರ ಸಭೆ ನಡೆಸಿ ನಿರ್ಣಯಿಸಿದ್ದಾರೆ.

ಗೆಣಿಕೆಹಾಳು, ಸಿದ್ದಮ್ಮನಹಳ್ಳಿ, ಎಚ್.ವೀರಾಪುರ, ಸೋಮಸಮುದ್ರ, ಏಳುಬೆಂಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೆರೆಗಳು ಅರೆಬರೆ ತುಂಬಿದೆ. ಬೇಸಿಗೆ ಕಳೆಯುವವರೆ ನೀರು ಸಾಲುವುದಿಲ್ಲ ಎನ್ನುವ ಆತಂಕ ಮತ್ತು ದುಗುಡ ಜನರನ್ನು ಕಾಡತೊಡಗಿದೆ.

ಕುರುಗೋಡಿನ 4ನೇ ವಾರ್ಡ್‍ನಲ್ಲಿ ಬಳಕೆಯಾಗದೆ ನಿರುಪಯುಕ್ತವಾಗಿರುವ ಶುದ್ಧ ನೀರಿನ ಘಟಕ
ಕುರುಗೋಡಿನ 4ನೇ ವಾರ್ಡ್‍ನಲ್ಲಿ ಬಳಕೆಯಾಗದೆ ನಿರುಪಯುಕ್ತವಾಗಿರುವ ಶುದ್ಧ ನೀರಿನ ಘಟಕ
ಕುರುಗೋಡಿನ 6ನೇ ವಾರ್ಡ್‍ನಲ್ಲಿ ಮಹಿಳೆಯರು ಕಾಲಿಕೊಡಗಳೊಂದಿಗೆ ನೀರಿಗಾಗಿ ಕಾಯುತ್ತಿರುವುದು
ಕುರುಗೋಡಿನ 6ನೇ ವಾರ್ಡ್‍ನಲ್ಲಿ ಮಹಿಳೆಯರು ಕಾಲಿಕೊಡಗಳೊಂದಿಗೆ ನೀರಿಗಾಗಿ ಕಾಯುತ್ತಿರುವುದು

ಬೇಸಿಗೆಯಲ್ಲಿ ನೀರಿನ ತೊಂದರೆಯಾಗದಂತೆ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸೂಚಿಸಲಾಗಿದೆ

-ಕೆ.ವಿ.ನಿರ್ಮಲಾ ತಾ.ಪಂ. ಇಒ

ಗ್ರಾಮಗಳಲ್ಲಿರುವ ಜಲಮೂಲಗಳನ್ನು ರಕ್ಷಿಸಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ತಾಲ್ಲೂಕು ಕಾರ್ಯಪಡೆ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದೆ

-ಎಂ.ರೇಣುಕಾ ತಹಶೀಲ್ದಾರ್

ಕೆರೆ ನೀರಿಲ್ಲದೆ ಒಣಗಿದೆ. ಶುದ್ದ ಕುಡಿಯುವ ಘಟಕಗಳು ಗ್ರಾಮದ ಜನರ ನೀರಿನ ದಾಹ ತೀರಿಸುತ್ತಿಲ್ಲ. ಬೋರ್‌ವೆಲ್ ನೀರು ಸೇವನೆ ಅನಿವಾರ್ಯವಾಗಿದೆ

- ಗೊಲ್ಲರ ನಾಗರಾಜ ಕಲ್ಲುಕಂಭ ಗ್ರಾಮಸ್ಥ

ಮೂಲೆ ಸೇರಿದ ಜೆಜೆಎಂ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ಗಂಗೆ ಯೋಜನೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಅನುಷ್ಠಾನಗೊಂಡಿದ್ದರೂ ಜನರ ನೀರಿನ ದಾಹ ತೀರಿಸುತ್ತಿಲ್ಲ. ಇನ್ನು ಕೆಲವು ಗ್ರಾಮಗಳಲ್ಲಿ ಅರೆಬರೆಯಾದರೆ ಉಳಿದ ಗ್ರಾಮಗಳಲ್ಲಿ ನಲ್ಲಿ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಗ್ರಾಮೀಣ ಭಾಗದ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕನಸು ನನಸಾಗದೆ ಉಳಿದಿರುವುದು ದುರಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT