ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಂದಾಲ್‌ಗೆ ಜಮೀನು ಮಾರಾಟ: ಸಂಘಟನೆಗಳ ವಿರೋಧ

ಭೂ ಲೆಕ್ಕಪರಿಶೋಧನೆ ಕೈಗೊಳ್ಳಲು ವಿವಿಧ ಸಂಘಟನೆಗಳ ಮುಖಂಡರ ಆಗ್ರಹ
Published : 23 ಆಗಸ್ಟ್ 2024, 23:26 IST
Last Updated : 23 ಆಗಸ್ಟ್ 2024, 23:26 IST
ಫಾಲೋ ಮಾಡಿ
Comments

ಬಳ್ಳಾರಿ: ಜಿಂದಾಲ್‌ ಉಕ್ಕು ಕಂಪನಿಗೆ ಸಂಡೂರು ತಾಲ್ಲೂಕಿನ ತೋರಣಗಲ್ಲು ಹೋಬಳಿಯಲ್ಲಿ 3,677 ಎಕರೆ ಜಮೀನನ್ನು ಮಾರುವ ಸರ್ಕಾರದ ನಿರ್ಧಾರಕ್ಕೆ ಒಂದೆಡೆ ವಿರೋಧ ವ್ಯಕ್ತವಾದರೆ, ಇನ್ನೊಂದೆಡೆ ‘ಆ ಕಂಪನಿಗೆ ಅಷ್ಟೊಂದು ಭೂಮಿ ಏಕೆ ಬೇಕು’ ಎಂಬ ಪ್ರಶ್ನೆಗಳು ಉದ್ಭವಿಸಿವೆ.

‘ಕೈಗಾರಿಕೆ ಉದ್ದೇಶಕ್ಕೆ 1971–72ರ‌ಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಜಮೀನು ನೀಡಿದ್ದ ರೈತರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಉದ್ಯೋಗಾವಕಾಶವೂ ಲಭಿಸಲಿಲ್ಲ. ಕಡಿಮೆ ಬೆಲೆಗೆ ಜಮೀನು ಮಾರಿ, ಸರ್ಕಾರವು ಬೊಕ್ಕಸಕ್ಕೆ ₹ 10,950 ಕೋಟಿ ನಷ್ಟ ಮಾಡಿಕೊಳ್ಳುತ್ತಿದೆ’ ಎಂದು ಸಿಪಿಎಂ ಟೀಕಿಸಿದೆ.

‘ಕುರೇಕುಪ್ಪ, ತೋರಣಗಲ್ಲು, ಯರಬನಹಳ್ಳಿ, ಮುಸೇನಾಯಕನ ಹಳ್ಳಿಯ ಈ ಜಮೀನನ್ನು ಕೆಐಎಡಿಬಿಯು 5 ದಶಕಗಳ ಹಿಂದೆಯೇ ಎಕರೆಗೆ ₹ 900ರಂತೆ ಸ್ವಾಧೀನಕ್ಕೆ ಪಡೆದಿತ್ತು. ಈಗ ಅದೇ ಜಮೀನನ್ನು ಸರ್ಕಾರ ಎಕರೆಗೆ ₹ 1.25 ಲಕ್ಷದಿಂದ ₹ 1.50 ಲಕ್ಷಕ್ಕೆ ಮಾರುತ್ತಿದೆ. ಈ ಪ್ರದೇಶದಲ್ಲಿ 1 ಎಕರೆ ಜಮೀನಿನ ಬೆಲೆ ₹50 ಲಕ್ಷದಿಂದ ₹1.25 ಕೋಟಿ ಇದೆ. ಅಭಿವೃದ್ಧಿ ಹೊಂದಿದ ಜಮೀನಿನ ಬೆಲೆ ಕನಿಷ್ಠ ₹3 ಕೋಟಿ ಇದೆ. ತುಂಗಭದ್ರಾ ಬಲದಂಡೆಯ ಎತ್ತರಿಸಿದ ಕಾಲುವೆಯ ಅಚ್ಚುಕಟ್ಟು ಪ್ರದೇಶವಾದ ಕುರೇಕುಪ್ಪ ಉತ್ಕೃಷ್ಟ ಕೃಷಿ ಭೂಮಿಯಾಗಿದೆ’ ಎಂದು ಸ್ಥಳೀಯರು ಹೇಳುತ್ತಾರೆ.

ಇಷ್ಟು ಪ್ರಮಾಣದ ಭೂಮಿ ಏಕೆ ಬೇಕು?

‘ಜಿಂದಾಲ್ ಕಂಪನಿ ಜೊತೆ 3,677 ಎಕರೆ ಜಮೀನಿನ ವ್ಯವಹಾರವನ್ನು ಗುತ್ತಿಗೆ ಆಧಾರದಲ್ಲೇ  ಮುಂದುವರಿಸಬೇಕು. ಭಾರಿ ಪ್ರಮಾಣದ ಜಮೀನು ಆ ಕಂಪನಿಗೆ ಏಕೆ ಬೇಕು ಎಂಬುದು ಸ್ಪಷ್ಟವಾಗಬೇಕು. ಇದರ ಬಗ್ಗೆ ಭೂ ಲೆಕ್ಕಪರಿಶೋಧನೆ (ಲ್ಯಾಂಡ್‌ ಆಡಿಟ್‌) ಆಗಬೇಕು’ ಎಂದು ಜನಸಂಗ್ರಾಮ ಪರಿಷತ್‌ ಆಗ್ರಹಿಸಿದೆ.

ಭೂ ಲೆಕ್ಕಪರಿಶೋಧನೆಗೆ ಆಗ್ರಹಿಸಿ 2019ರಲ್ಲಿ ತೋರಣಗಲ್‌ನ ವಡ್ಡು ಗ್ರಾಮದಿಂದ ಬಳ್ಳಾರಿಗೆ ಸಂಘಟನೆ ಪಾದಯಾತ್ರೆ ಕೈಗೊಂಡಿತ್ತು. ಸಮಾಜ ಪರಿವರ್ತನಾ ಸಮುದಾಯದ ಎಸ್‌.ಆರ್‌ ಹಿರೇಮಠ ಅವರು ನೇತೃತ್ವ ವಹಿಸಿದ್ದರು.     

‘10 ಸಾವಿರ ಎಕರೆ ಕೃಷಿ ಭೂಮಿಯನ್ನು ಜಿಂದಾಲ್ ಕಂಪನಿಗೆ ಆರಂಭದಲ್ಲಿ ನೀಡಲಾಯಿತು. ಆಗಾಗ್ಗೆ ಕಂಪನಿಗೆ ಜಮೀನು ನೀಡಲಾಗುತ್ತಿದೆ. ಇದರ ಉತ್ಪಾದನಾ ಸಾಮರ್ಥ್ಯಕ್ಕೂ, ಉದ್ಯೋಗ ಸೃಷ್ಟಿಗೂ, ಸರ್ಕಾರದಿಂದ ಪಡೆದ ಭೂಮಿ ಪ್ರಮಾಣಕ್ಕೂ ತಾಳೆಯೇ ಆಗುತ್ತಿಲ್ಲ. ಈ ಕಂಪನಿ ಮೇಲೆ ಸರ್ಕಾರಿ ಭೂಮಿ ಅತಿಕ್ರಮಣದ ಆರೋಪವೂ ಇದೆ’ ಎಂದು ಪತ್ರಕರ್ತ ಚಂದ್ರಕಾಂತ ವಡ್ಡು ‘ಪ್ರಜಾವಾಣಿ’ಗೆ ತಿಳಿಸಿದರು.

1994ರಲ್ಲಿ ತೋರಣಗಲ್‌ ಭಾಗದಲ್ಲಿ ಉಕ್ಕಿನ ಕಾರ್ಖಾನೆ ಆರಂಭಿಸಿದ್ದ ಜಿಂದಾಲ್‌ ವಾರ್ಷಿಕ 12 ದಶಲಕ್ಷ ಟನ್‌ ಉತ್ಪಾದನಾ ಸಾಮರ್ಥ್ಯ ಹೊಂದಿರುವುದಾಗಿ ಹೇಳಿಕೊಂಡಿದೆ. ಸದ್ಯ, ಉಕ್ಕು ಅಲ್ಲದೇ ವಿದ್ಯುತ್‌ ಉತ್ಪಾದನೆ, ಸಿಮೆಂಟ್, ಪೇಂಟ್‌, ಡಾಂಬರು ತಯಾರಿಕೆಯಲ್ಲಿ ಕಂಪನಿ ತೊಡಗಿದೆ. 

ಬಳ್ಳಾರಿಯ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಮೀಸಲಾದ ಸಾವಿರಾರು ಕೋಟಿ ಹಣ ಸರ್ಕಾರದ ಬಳಿ ಇದೆ. ಅದನ್ನು ಗಣಿ ಬಾಧಿತ ಜನರಿಗೆ ಕೊಟ್ಟರೆ, ಅವರು ಜಮೀನು ಖರೀದಿಸುವರು
ಮಲ್ಲಿಕಾರ್ಜುನ ರೆಡ್ಡಿ, ವಕೀಲ, ಜನಸಂಗ್ರಾಮ ಪರಿಷತ್‌ ಜಿಲ್ಲಾ ಅಧ್ಯಕ್ಷ, ಬಳ್ಳಾರಿ
ಸಂಡೂರು, ತೋರಣಗಲ್ಲು, ವಡ್ಡು, ಗಾದಿಗನೂರು, ಹೊಸಪೇಟೆಯವರೆಗೆ ಜಿಂದಾಲ್‌ ಕಂಪನಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಖಾಸಗಿಯಾಗಿ ಜಮೀನು ಖರೀದಿಸುತ್ತಲೇ ಇದೆ.
ಜಂಬಯ್ಯ, ಸಾಮಾಜಿಕ ಕಾರ್ಯಕರ್ತ, ಯರಬನಹಳ್ಳಿ (ಸುಲ್ತಾನಪುರ)
ಜಿಂದಾಲ್‌ ಕಂಪನಿಗೆ ಜಮೀನು ನೀಡದಂತೆ ನಮ್ಮ ಹೋರಾಟಕ್ಕೆ ಅಂದು ಎಚ್‌.ಕೆ ಪಾಟೀಲರೇ ನೆರವಾಗಿದ್ದರು. ಇಂದು ಜಮೀನು ಮಾರುವ ಘೋಷಿಸಿದ್ದಾರೆ ಎಂದರೆ ಏನರ್ಥ.
ಮಾಧವ ರೆಡ್ಡಿ, ಮುಖಂಡ, ಕರ್ನಾಟಕ ರಾಜ್ಯ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT