ಕುರುಗೋಡು: ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರು ಶಾಸ್ತ್ರೀಜಿ ಅವರ ಜಯಂತಿಯನ್ನು ಬುಧವಾರ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ನರಸಪ್ಪ, ನಿಜ ಅಥವಾ ಸತ್ಯದ ಪರಿಶೋಧನೆಯೆಂಬ ವಿಸ್ತೃತ ಉದ್ದೇಶಕ್ಕಾಗಿ ಗಾಂಧೀಜಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ತಮ್ಮ ತಪ್ಪುಗಳಿಂದಲೇ ಕಲಿತು ಹಾಗೂ ತಮ್ಮ ಮೇಲೇಯೇ ಪ್ರಯೋಗ ಮಾಡಿಕೊಂಡು ಅದನ್ನು ಸಾಧಿಸಲು ಯತ್ನಿಸಿದವರು. ಬರಿ ಯುದ್ದದಿಂದ ಅಲ್ಲ ಶಾಂತಿಯಿಂದಲೂ ಏನು ಬೇಕಾದರೂ ಸಾಧಿಸಬಹುದು ಎಂದು ವಿಶ್ವಕ್ಕೆ ತೋರಿಸಿಕೊಟ್ಟ ರಾಷ್ಟ್ರಪಿತನ ಆದರ್ಶ ನಮ್ಮೆಲ್ಲರಿಗೆ ಮಾದರಿಯಾಗಬೇಕು ಎಂದರು.
ಗ್ರೇಡ್-2 ತಹಶೀಲ್ದಾರ್ ಮಲ್ಲೇಶಪ್ಪ, ಶಿರಸ್ತೇದಾರ್ ವಿಜಯಕುಮಾರ್ ಮತ್ತು ರಾಜಶೇಖರ್, ಕಂದಾಯ ನಿರೀಕ್ಷಕ ಸುರೇಶ್, ಪುರಸಭೆ ಕಂದಾಯಾಧಿಕಾರಿ ಮಲ್ಲಿಕಾರ್ಜುನ, ಮಂಜುನಾಥ ಮತ್ತು ಮೂರ್ತಿ ಇದ್ದರು.
ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧನೆ
ಸಿರುಗುಪ್ಪ: ನಗರದ ಗಾಂಧಿ ವೃತ್ತದಲ್ಲಿ ತಾಲ್ಲೂಕು ಆಡಳಿತ, ನಗರಸಭೆ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಗಾಂಧೀಜಿ ಪ್ರತಿಮೆಗೆ ತಹಸೀಲ್ದಾರ್ ಎಚ್.ವಿಶ್ವನಾಥ್ ಗೌರವ ಸಮರ್ಪಿಸಿ, ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಪೌರಕಾರ್ಮಿಕ ಮಾರೆಪ್ಪ ಮಹಾತ್ಮ ಗಾಂಧೀಜಿ ಛದ್ಮವೇಷ ಎಲ್ಲರ ಗಮನ ಸೆಳೆಯಿತು. ಕುರುಗೋಡು ಗ್ರೇಡ್-2 ತಹಶೀಲ್ದಾರ್ ಎಂ.ಮಲ್ಲೇಶಪ್ಪ, ಸಿರುಗುಪ್ಪ– ಸತ್ಯಮ್ಮ, ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ ವೆಂಕಟೇಶ, ಉಪಾಧ್ಯಕ್ಷೆ ಯಶೋಧಾ ಮೂರ್ತಿ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಎಚ್.ರಂಗಸ್ವಾಮಿ, ಸ್ವರ್ಣ ಲತಾ ಪೌರಕಾರ್ಮಿಕರು ಮತ್ತು ಕಂದಾಯ ಅಧಿಕಾರಿಗಳು ಹಾಗೂ ನಗರಸಭೆ ಸದಸ್ಯರು ಇದ್ದರು.
ತ್ಯಾಜ್ಯ ವಿಲೇವಾರಿ ಮಾಡಿ ಗೌರವ
ತೋರಣಗಲ್ಲು: ಗ್ರಾಮ ಸೇರಿದಂತೆ ಕುರೆಕುಪ್ಪ ಪುರಸಭೆ, ಶಂಕರಗುಡ್ಡ ಕಾಲೊನಿಯ ಜಿಂದಾಲ್ ಆದರ್ಶ ವಿದ್ಯಾಲಯ, ಕುಡತಿನಿ ಪಟ್ಟಣದಲ್ಲಿ ಗಾಂಧಿ ಜಯಂತಿಯನ್ನು ವಿವಿಧ ವಿಶೇಷ ಆಚರಣೆಗಳ ಮೂಲಕ ಅಧಿಕಾರಿಗಳು, ಬೀದಿ ಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸಂಭ್ರಮದಿಂದ ಆಚರಿಸಿದರು.
ಗ್ರಾಮದ ಶಂಕರಗುಡ್ಡ ಕಾಲೊನಿಯ ಜಿಂದಾಲ್ ಆದರ್ಶ ವಿದ್ಯಾಲಯದ ಪ್ರಾಚಾರ್ಯರು, ಎಲ್ಲ ಶಿಕ್ಷಕರು ಸಾರ್ವಜನಿಕ ಪ್ರಮುಖ ಸ್ಥಳಗಳಲ್ಲಿ ಶ್ರಮದಾನ ಮಾಡುವುದರ ಮೂಲಕ ಕಸ, ತ್ಯಾಜ್ಯವನ್ನು ಸ್ವಚ್ಚಗೊಳಿಸಿ, ಸಂಗ್ರಹಿಸಿ ಜನರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು, ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.
ಕುಡತಿನಿ ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿ ಸಂಘಟನೆಯ ಮುಖಂಡರು ಗಾಂಧಿ ಜಯಂತಿಯ ಅಂಗವಾಗಿ ಪಟ್ಟಣ ಪಂಚಾಯಿತಿಯ ಎಲ್ಲ ಪೌರಕಾರ್ಮಿಕರಿಗೆ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಇತರೆ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ಉಚಿತವಾಗಿ ವಿತರಿಸಿ ಮಾನವಿಯತೆ ಮೆರೆದು ಇತರರಿಗೆ ಮಾದರಿಯಾದರು.
ಕುರೆಕುಪ್ಪ ಪುರಸಭೆ, ಕುಡತಿನಿ ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಗಾಂಧಿ ಜಯಂಯತಿಯನ್ನು ಸರಳವಾಗಿ ಆಚರಿಸಿದರು.
‘ಗಾಂಧೀಜಿ ಅಹಿಂಸಾ ಮಾರ್ಗ ಜಗತ್ತಿಗೆ ಮಾದರಿ’
ಕಂಪ್ಲಿ: ‘ಮಹಾತ್ಮಗಾಂಧೀಜಿಯವರ ಅಹಿಂಸಾ ಮಾರ್ಗ ಜಗತ್ತಿಗೆ ಮಾದರಿ’ ಎಂದು ಶಾಸಕ ಜೆ.ಎನ್. ಗಣೇಶ್ ಬಣ್ಣಿಸಿದರು.
ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ಕಂಪ್ಲಿ, ಕುರುಗೋಡು ಬ್ಲಾಕ್ ಕಾಂಗ್ರೆಸ್ ಬುಧವಾರ ಆಯೋಜಿಸಿದ್ದ ಗಾಂಧೀಜಿ ಅಧ್ಯಕ್ಷತೆಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನದ ನೂರು ವರ್ಷಗಳ ಸಂಭ್ರಮ ಆಚರಣೆ ಸಮಾರಂಭವನ್ನು ಉದ್ಘಾಟಿಸಿ, ಗಾಂಧೀಜಿಯವರ ಮಾರ್ಗ ಅನುಸರಿಸಿದರೆ ಸರ್ವೋದಯ ಸಾಧ್ಯ ಎಂದರು.
ಬಳಿಕ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಗಾಂಧಿ ಭಾರತ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲಾಯಿತು. ಇದಕ್ಕು ಮುನ್ನ ಶಾಲಾ ಮಕ್ಕಳು, ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಬಿಳಿ ವಸ್ತ್ರ, ಬಿಳಿ ಟೋಪಿ ಧರಿಸಿ ಡಾ. ಅಂಬೇಡ್ಕರ್ ವೃತ್ತದಿಂದ ಗಾಂಧಿ ನಡಿಗೆ ಪಾದಯಾತ್ರೆ ಆರಂಭಿಸಿ ಪಾಠಶಾಲೆಯಲ್ಲಿ ಸಮಾರೋಪಗೊಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಶ್ರೀನಿವಾಸರಾವ್, ಚನ್ನಬಸವನಗೌಡ, ಪ್ರಮುಖರಾದ ಎನ್. ಹಬೀಬ್ ರೆಹಮಾನ್, ಭಟ್ಟ ಪ್ರಸಾದ್, ವೀರಾಂಜನೇಯಲು, ಕೆ.ಎಸ್. ಚಾಂದ್‍ಬಾಷ, ಲಡ್ಡು ಹೊನ್ನೂರವಲಿ, ಎಂ. ಉಸ್ಮಾನ್, ಜಾಫರ್, ಆರ್.ಎಂ. ರಾಮಯ್ಯ, ಆರ್.ಪಿ. ಶಶಿಕುಮಾರ್, ವೈ. ಅಬ್ದುಲ್ ಮುನಾಫ್, ಕೆ. ಮನೋಹರ, ಕೆ. ಮಸ್ತಾನ್, ಸೈಯ್ಯದ್ ಉಸ್ಮಾನ್, ಕರಿಬಸವನಗೌಡ, ಶರಣಬಸವನಗೌಡ, ಗದ್ಗಿ ವಿರುಪಾಕ್ಷಿ, ಗೌಡ್ರು ಅಂಜಿನಪ್ಪ, ಕೆ. ಶಿವಕುಮಾರ, ಕಾಂಗ್ರೆಸ್ ವಿವಿಧ ಘಟಕಗಳ ಪದಾಧಿಕಾರಿಗಳು, ಇತರರು ಹಾಜರಿದ್ದರು.
ಸಂಡೂರಿನ ನಂಟು: ಸ್ಮರಣೆ
ಸಂಡೂರು: ಮಹತ್ಮಾ ಗಾಂಧೀಜಿಯವರಿಗೂ ಸಂಡೂರಿಗೂ ಅವಿನಾಭಾವ ಸಂಬಂಧವಿದ್ದು, ಅವರ ಜೀವಿತದಲ್ಲಿ ಎರಡು ಬಾರಿ ಇಲ್ಲಿಗೆ ಭೇಟಿ ನೀಡಿದ್ದರು ಎಂದು ತಹಶೀಲ್ದಾರ್ ಅನಿಲ್ ಕುಮಾರ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರ ನಡೆದ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂಡೂರನ್ನು ಸೆಪ್ಟಂಬರ್ ತಿಂಗಳಲ್ಲಿ ನೋಡು’ ಎಂಬ ಐತಿಹಾಸಿಕ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಇಲ್ಲಿನ ಪರಿಸರವನ್ನು ಮನದುಂಬಿ ಹೊಗಳಿ ರಾಷ್ಟ್ರಮಟ್ಟದಲ್ಲಿ ಪ್ರಚಾರ ಮಾಡಿದ್ದರು. ಸ್ವರಾಜ್ ಹೋರಾಟಕ್ಕೆ ಗಾಂಧೀಜಿಯವರ ಸೇವೆ ಗಣನೀಯ ಎಂದು ತಿಳಿಸಿದರು.
ತಾಲ್ಲೂಕು ಕಚೇರಿ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಂದಾಯ ಇಲಾಖೆ ಸಿಬ್ಬಂದಿಗೆ ಸ್ವಚ್ಚತೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಕೆ.ಜಯಣ್ಣ, ಕಿರಿಯ ಆರೋಗ್ಯ ನಿರೀಕ್ಷಕಿ ಶಿವರಂಜಿನಿ, ತಾಲ್ಲೂಕು ಕಚೇರಿ ಸಿಬ್ಬಂದಿ ಇದ್ದರು.
‘ರಾಷ್ಟ್ರೀಯ ಸ್ಮಾರಕ ರೀತಿ ಅಭಿವೃದ್ಧಿ’
ಹರಪನಹಳ್ಳಿ: ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ರೀತಿಯಲ್ಲಿ ಗಾಂಧೀಜಿ ತಂಗಿದ್ದ ಸ್ಥಳವನ್ನು ಅಭಿವೃದ್ದಿಪಡಿಸುವ ಕಾರ್ಯಕ್ಕೆ ಎಲ್ಲರೂ ಸಹಕರಿಸಿ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪಿಯು ಕಾಲೇಜ್ ಆವರಣದಲ್ಲಿ ತಾಲ್ಲೂಕು ಆಡಳಿತ ಬುಧವಾರ ಆಯೋಜಿಸಿದ್ದ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿ ಕಠಿಣ ವ್ರತಗಳನ್ನು ಮಾಡುತ್ತಿದ್ದರು. ಅಂತಹ ಮಹನೀಯರ ಏಕಶಿಲೆ ಪ್ರತಿಮೆ ಏಷ್ಯಾದಲ್ಲಿಯೇ ಮೊದಲ ಬಾರಿ ಹರಪನಹಳ್ಳಿಯಲ್ಲಿ ಸ್ಥಾಪಿಸಿರುವುದು ನಮ್ಮ ತಾಲ್ಲೂಕಿನ ಹೆಮ್ಮೆ. ಸಹೋದರ ದಿವಂಗತ ಎಂ.ಪಿ.ರವೀಂದ್ರ ಆಶಯದಂತೆ ಗಾಂಧೀಜಿ ತಂಗಿದ್ದ ಸ್ಥಳವನ್ನು ಅಭಿವೃದ್ದಿಗೊಳಿಸಿ ಐತಿಹಾಸಿಕ ಸ್ಮಾರಕವಾಗಿಸಲು ಪ್ರಯತ್ನಿಸಲಾಗುವುದು ಎಂದರು.
ಶಿಕ್ಷಕಿ ಶ್ವೇತಾ ಉಪನ್ಯಾಸ ನೀಡಿದರು. ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್.ಚಂದ್ರಶೇಖರ ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಕ್ಷೇತ್ರ ಶಿಕ್ಷಣಾಧಿಕಾರಿ ಲೇಪಾಕ್ಷಪ್ಪ ಭಾಗವಹಿಸಿದ್ದರು.
ಕಾಂಗ್ರೆಸ್ ಕಾರ್ಯಕರ್ತರಿಂದ ಕಾಲ್ನೆಡಿಗೆ ಜಾಥಾ
ಸಿರುಗುಪ್ಪ: ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಬೆಳಗಾವಿಯಲ್ಲಿ ನಡೆದ ‘ಕಾಂಗ್ರೇಸ್ ಅಧಿವೇಶನ‘ದ ಶತಮಾನ ಸಂಭ್ರಮಾಚರಣೆ ಹಾಗೂ ಗಾಂಧೀಜಿ ಜಯಂತಿ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರಿಂದ ಬುಧವಾರ ಕಾಲನಡಿಗೆ ಜಾಥಾ ನಡೆಸಿ ಸಂಭ್ರಮಿಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಿಂದ ವಾಲ್ಮೀಕಿ ವೃತ್ತದ ಮೂಲಕ ಅಭಯ ಆಂಜನೇಯ ದೇವಸ್ಥಾನದವರೆಗೆ ಜಾಥಾ ನಡೆಯಿತು.
ಮಾಜಿ ಶಾಸಕ ಟಿ.ಎಂ.ಚಂದ್ರಶೇಖರಯ್ಯ ಸ್ವಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರಿಬಸಪ್ಪ ಮಾಜಿ ನಗರಸಭೆ ಅಧ್ಯಕ್ಷ ಬಿ.ಎಂ.ಸತೀಶ ಮಾಜಿ ತಾ.ಪಂ. ಅಧ್ಯಕ್ಷ ಗೋಪಾಲ್ ರೆಡ್ಡಿ ಮುಖಂಡರಾದ ಹುಸೇನ್ ಪೀರ್ ಕೊಡ್ಲೆ ಮಲ್ಲಿಕಾರ್ಜುನ ವೆಂಕಟೇಶ ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.