ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ: ಗಡಿ ಗುರುತಿಲ್ಲದೇ ಗಣಿ ಸರ್ವೆ ಆರಂಭ!

Published 27 ಮೇ 2024, 1:23 IST
Last Updated 27 ಮೇ 2024, 1:23 IST
ಅಕ್ಷರ ಗಾತ್ರ

ಬಳ್ಳಾರಿ: ಅಕ್ರಮ ಗಣಿಗಾರಿಕೆಯಿಂದಾಗಿ ನಾಶವಾಗಿರುವ ಕರ್ನಾಟಕ ಮತ್ತು ಆಂಧ್ರ ಪ್ರದೇಶ ಮಧ್ಯದ ಅಂತರರಾಜ್ಯ ಗಡಿಯನ್ನು ಗುರುತಿಸುವಿಕೆ ಇನ್ನೂ ಅಪೂರ್ಣವಾಗಿರುವಾಗಲೇ ಎರಡೂ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಏಳು ಬಿ–1 ವರ್ಗದ ಗಣಿಗಳ ಜಂಟಿ ಸರ್ವೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಂದಾಗಿದೆ.

ಇದೇ 29ರಿಂದ ಆರಂಭವಾಗಲಿರುವ ಜಂಟಿ ಸರ್ವೆ, ಎಂಟು ದಿನ (ಜೂನ್‌ 6) ನಡೆಯಲಿದೆ. ಈ ಸಂಬಂಧ ಗಣಿ ಮಾಲೀಕರಿಗೆ ಬಳ್ಳಾರಿ ಜಿಲ್ಲಾ ಹಿರಿಯ ಭೂವಿಜ್ಞಾನಿ ಮೇ 23ರಂದು ಪತ್ರ ಬರೆದಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ಹೋರಾಟಗಾರ ಎಸ್‌.ಆರ್‌ ಹಿರೇಮಠ ನೇತೃತ್ವದ ‘ಸಮಾಜ ಪರಿವರ್ತನಾ ಸಮುದಾಯ’ 2009ರಲ್ಲಿ ರಿಟ್‌ ಸಲ್ಲಿಸಿತ್ತು. ಈ ಪ್ರಕರಣದಲ್ಲಿ 2024ರ ಮಾರ್ಚ್‌ 14ರಲ್ಲಿ ಆದೇಶ ನೀಡಿರುವ ಸುಪ್ರೀಂ ಕೋರ್ಟ್‌, ‘ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಕಬ್ಬಿಣದ ಅದಿರಿನ ಏಳು ಗಣಿಗಳ ಜಂಟಿ ಸರ್ವೆ ನಡೆಸಬೇಕು ಮತ್ತು ನಕ್ಷೆ ಸಿದ್ಧಪಡಿಸಬೇಕು’ ಎಂದು ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ, ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ)ಯ ಸದಸ್ಯರ ಅಧ್ಯಕ್ಷತೆಯಲ್ಲಿ ಮೇ 21ರಂದು ಸಭೆ ನಡೆದಿದೆ. ಏಳು ಗಣಿಗಳ ಜಂಟಿ ಸರ್ವೆ ನಡೆಸಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸರ್ವೆಯನ್ನು ಸುರತ್ಕಲ್‌ನ ಎನ್‌ಐಟಿಕೆ, ಅರಣ್ಯ, ಕಂದಾಯ, ಭೂ ದಾಖಲೆಗಳು ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳ ತಾಂತ್ರಿಕ ತಂಡದ ಮೂಲಕ ನಡೆಸಲು ನಿರ್ಧರಿಸಲಾಗಿದೆ.

ಮೇ 29ರಂದು ‘ಮಹಬೂಬ್‌ ಟ್ರಾನ್ಸ್‌ಪೋರ್ಟ್‌ ಕಂಪನಿ’ಯ ಗಣಿ ಸರ್ವೆ ನಡೆಯಲಿದೆ. 30ರಂದು ‘ಹಿಂದ್‌ ಟ್ರೇಡರ್ಸ್‌’, 31ರಂದು ‘ಎನ್‌. ರತ್ನಯ್ಯ, ಜೂ. 1ರಂದು ‘ಟಿ. ನಾರಾಯಣ ರೆಡ್ಡಿ’, 2 ರಿಂದ 4ರ ವರೆಗೆ ‘ವಿಭೂತಿಗುಡ್ಡ ಮೈನ್ಸ್‌ ಪ್ರೈ. ಲಿ.’, 5ರಂದು ‘ಸುಗ್ಗುಲಮ್ಮ ಗುಡ್ಡ ಮೈನಿಂಗ್‌ ಅ್ಯಂಡ್‌ ಕಂಪನಿ’, 6ರಂದು ‘ಬಳ್ಳಾರಿ ಮೈನಿಂಗ್‌ ಕಾರ್ಪೊರೇಷನ್‌’ಗಳ ಗಣಿ ಸರ್ವೆ ನಡೆಯಲಿದೆ.

ಇನ್ನೂ ಅಂತಿಮವಾಗಿಲ್ಲ ಗಡಿ  

ಬಿ–1 ವರ್ಗದ ಗಣಿಗಳ ಜಂಟಿ ಸರ್ವೆಗೆ ಸುಪ್ರೀಂ ಕೋರ್ಟ್‌ 2022ರಲ್ಲೂ ಆದೇಶಿಸಿತ್ತು. ಆದರೆ, ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳ ಅಂತರರಾಜ್ಯ ಗಡಿ ಗುರುತುಗಳನ್ನು ಮರುಸ್ಥಾಪಿಸುವವರೆಗೆ ಜಂಟಿ ಸರ್ವೆ ಮುಂದೂಡಬೇಕು ಎಂದು ಸುಪ್ರೀಂ ಕೋರ್ಟ್‌ ತನ್ನ ಮತ್ತೊಂದು ಆದೇಶದಲ್ಲಿ ಹೇಳಿತ್ತು. ಈ ಮಧ್ಯೆ, ಎರಡೂ ರಾಜ್ಯಗಳ ಗಡಿ ಗುರುತು ಕಾರ್ಯ ಪೂರ್ಣಗೊಂಡಿದೆ ಎಂದು ಕರ್ನಾಟಕ ಸರ್ಕಾರ 2023ರ ಜ.1ರಂದು ಸಿಇಸಿಗೆ ತಿಳಿಸಿತ್ತು ಎನ್ನಲಾಗಿದೆ. ಈ ವಿಷಯವನ್ನು ಪರಿಗಣನೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್‌ ಗಣಿಗಳ ಜಂಟಿ ಸರ್ವೆಗೆ ಮಾರ್ಚ್‌ 14ರಂದು ಆದೇಶಿಸಿತ್ತು.

ಅಂತರರಾಜ್ಯ ಗಡಿ ಗುರುತಿಸುವ ಕಾರ್ಯದ ಸ್ಥಿತಿಗತಿಯ ಬಗ್ಗೆ ಮಾಹಿತಿ ಇಲ್ಲ. ಆದರೆ, ಸದ್ಯ ಬಿ–1 ವರ್ಗದ ಏಳು ಗಣಿಗಳ ಜಂಟಿ ಸರ್ವೆ ಕಾರ್ಯ ನಡೆಸಲು ಸಿಇಸಿ ತೀರ್ಮಾನಿಸಿದೆ. ಅದರಂತೆ ಜಿಲ್ಲಾಡಳಿತ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಎಲ್ಲ ಸಹಕಾರ ನೀಡಲಾಗುತ್ತಿದೆ.
ಚಂದ್ರಶೇಖರ್‌ ಹಿರೇಮಠ, ಹಿರಿಯ ಭೂವಿಜ್ಞಾನಿ, ಬಳ್ಳಾರಿ

ಕರ್ನಾಟಕ–ಆಂಧ್ರ ಪ್ರದೇಶ ನಡುವಿನ ಗಡಿ ಗುರುತಿಗಾಗಿ ‘ಸರ್ವೆ ಆಫ್‌ ಇಂಡಿಯಾ’ದಿಂದ ನಡೆದಿರುವ ಸರ್ವೆಗೆ ಆಕ್ಷೇಪಗಳು ವ್ಯಕ್ತವಾಗಿದ್ದು, ಇದರ ಪರಾಮರ್ಶೆಗೆ ತಜ್ಞರ ಸಮಿತಿ ರಚಿಸುವುದಾಗಿ 2023ರ ಬೆಳಗಾವಿ ಅಧಿವೇಶನದಲ್ಲಿ ಕಂದಾಯ ಸಚಿವರು ತಿಳಿಸಿದ್ದರು. ಆದರೆ, ಈ ವರೆಗೆ ಸಮಿತಿ ರಚನೆಯಾಗಿಲ್ಲ. ಹೀಗಾಗಿ ಗಣಿ ಸರ್ವೆ ಅಪೂರ್ಣವಾಗಿಯೇ ಉಳಿದಿದೆ. ಇನ್ನೊಂದೆಡೆ, ಗಣಿ ಉದ್ಯಮಿ ಟಪಾಲ್‌ ಗಣೇಶ್‌ 2024ರ ಮಾರ್ಚ್‌ 18ರಂದು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಹೊಸ ಸರ್ವೆ ಗಡಿ ನಕ್ಷೆಯನ್ನು ಪಡೆದುಕೊಂಡಿದ್ದು, ಅದರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸರ್ವೆ ನಡೆಸಿದ ಕ್ಯಾಂಪ್‌ ಅಧಿಕಾರಿ ಸಹಿ ಹಾಕದೇ ಇರುವುದು ಬಯಲಾಗಿದೆ.  ‘ಸರ್ಕಾರದ ಅಂಕಿತವೇ ಇಲ್ಲದೇ ಗಡಿ ಸರ್ವೆ ಪೂರ್ಣವಾಗುವುದು ಹೇಗೆ’ ಎಂದು ಟಪಾಲ್‌ ಗಣೇಶ್‌ ಪ್ರಶ್ನೆ ಮಾಡಿದ್ದಾರೆ. 

ಗಣಿ ಸಮೀಕ್ಷೆ ಏಕೆ?
‘ಸಮಾಜ ಪರಿವರ್ತನ ಸಮುದಾಯ’ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ತುಮಕೂರು, ಚಿತ್ರದುರ್ಗ, ಬಳ್ಳಾರಿಯ ಬಹುತೇಕ ಗಣಿ ಗುತ್ತಿಗೆಗಳ ವರ್ಗೀಕರಣವನ್ನು 2012-13ರಲ್ಲೇ ಮಾಡಲಾಗಿತ್ತು. ಗಣಿಗಾರಿಕೆಯಲ್ಲಿ ಹೆಚ್ಚಿನ ಅಕ್ರಮವಾಗಿದ್ದರೆ, ಅವುಗಳನ್ನು ‘ಸಿ’ ವರ್ಗಕ್ಕೆ ಸೇರಿಸಲಾಗುತ್ತದೆ. ಅಲ್ಪ ಪ್ರಮಾಣದ ಅಕ್ರಮಗಳು ನಡೆದಿದ್ದರೆ ಅವುಗಳನ್ನು ‘ಬಿ’ ವರ್ಗಕ್ಕೆ ಸೇರಿಸಲಾಗುತ್ತದೆ. ಅಕ್ರಮ ಇಲ್ಲದಿದ್ದರೆ ಅದನ್ನು ‘ಎ’ ವರ್ಗಕ್ಕೆ ಸೇರಿಸಲಾಗುತ್ತದೆ. ಸದ್ಯ ಈ ಏಳೂ ಗಣಿಗಳು ಅಂತರರಾಜ್ಯ ಗಡಿಯಲ್ಲಿ ಬರುತ್ತಿರುವ ಕಾರಣ ಇವುಗಳನ್ನು ‘ಬಿ–1’ ವರ್ಗದಲ್ಲಿ ಅಂತಿಮವಲ್ಲದ ಗಣಿ ಗುತ್ತಿಗೆಗಳು ಎಂದು ಪರಿಗಣಿಸಲಾಗಿದೆ. ಮೊದಲು ಗಡಿ ಅಂತಿಮಗೊಂಡರೆ ಮಾತ್ರ ಗಣಿ ಸಮೀಕ್ಷೆ ಸಾಧ್ಯ ಎಂಬುದು ತಜ್ಞರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT