ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಕೇಂದ್ರಗಳಲ್ಲಿ ಕಡಿಮೆ ವೆಚ್ಚದ ಮಾದರಿ ಪೌಷ್ಟಿಕ ಕೈತೋಟ

ಇತರೆ ಜಿಲ್ಲೆಗಳಲ್ಲಿ ಕೈತೋಟಕ್ಕೆ ₹40 ಸಾವಿರ, ವಿಜಯನಗರದಲ್ಲಿ ₹7 ಸಾವಿರ
Last Updated 8 ಜುಲೈ 2022, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಪೌಷ್ಟಿಕ ಕೈತೋಟ ನಿರ್ಮಿಸುವ ಕೆಲಸವನ್ನು ಜಿಲ್ಲಾ ಪಂಚಾಯಿತಿ ಕೈಗೆತ್ತಿಕೊಂಡಿದ್ದು, ಇದಕ್ಕೊಂದು ಅಭಿಯಾನದ ಸ್ವರೂಪ ಕೊಟ್ಟಿದೆ. ಇಷ್ಟೇ ಅಲ್ಲ, ಬೊಕ್ಕಸಕ್ಕೆ ದೊಡ್ಡ ಮೊತ್ತದ ಹಣ ಉಳಿತಾಯವೂ ಆಗುತ್ತಿದೆ.

ಒಂದು ಅಂಗನವಾಡಿಯಲ್ಲಿ ಒಂದು ಕೈತೋಟ ನಿರ್ಮಾಣಕ್ಕೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ₹42 ಸಾವಿರ ಖರ್ಚು ಮಾಡಲಾಗುತ್ತಿದೆ. ಆದರೆ, ವಿಜಯನಗರ ಜಿಲ್ಲೆಯಲ್ಲಿ ₹7 ಸಾವಿರದಲ್ಲೇ ಕೈತೋಟ ನಿರ್ಮಿಸುತ್ತಿರುವುದು ವಿಶೇಷ. ಬೇರೆ ಜಿಲ್ಲೆಗಳಲ್ಲಿ ಸಿಮೆಂಟ್‌ ಬೆಡ್‌, ಫೌಂಡೇಷನ್‌ಗೆ ಹೆಚ್ಚಿನ ವೆಚ್ಚವಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ 3X10 ಅಡಿ ಸುತ್ತಳತೆಯಲ್ಲಿ ಒಂದೂವರೆ ಅಡಿ ಎತ್ತರ ಕಟ್ಟಿಕೊಂಡು, ಅದರ ಸುತ್ತ ಜಾಲರಿ ಹಾಕಲಾಗುತ್ತಿದೆ. ನರೇಗಾದಡಿ ಜಿಲ್ಲೆಯ ಕೆಲ ಅಂಗನವಾಡಿಗಳಲ್ಲಿ ಪ್ರಾಯೋಗಿಕವಾಗಿ ಕೈತೋಟ ನಿರ್ಮಿಸಲಾಗಿದ್ದು, ಹಂತ ಹಂತವಾಗಿ ಎಲ್ಲ ಕಡೆ ವಿಸ್ತರಿಸಲು ಯೋಜಿಸಲಾಗಿದೆ.

ಸದ್ಯ ಅಂಗನವಾಡಿಗಳಲ್ಲಿ ತಯಾರಿಸಲಾಗುವ ಆಹಾರಕ್ಕೆ ಮಾರುಕಟ್ಟೆಯಿಂದ ತರಕಾರಿ ಖರೀದಿಸಿ ತರಲಾಗುತ್ತಿದೆ. ಅಲ್ಲೇ ಕೈತೋಟ ನಿರ್ಮಿಸಿ, ಯಾವುದೇ ರಾಸಾಯನಿಕವಿಲ್ಲದೇ ತರಕಾರಿಗಳನ್ನು ಬೆಳೆದು ಆಹಾರದಲ್ಲಿ ಉಪಯೋಗಿಸುವುದು. ಕೈತೋಟದ ಮೂಲಕ ಗ್ರಾಮಸ್ಥರಲ್ಲಿ ಅರಿವು ಮೂಡಿಸಿ, ಮನೆಯ ಹಿತ್ತಲ, ಅಂಗಳದಲ್ಲಿ ಬೆಳೆಸುವಂತೆ ಪ್ರೇರೇಪಿಸುವುದು ಇದರ ಉದ್ದೇಶ.

ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್‌ ಭೋಯರ್‌ ನಾರಾಯಣರಾವ್‌ ಅವರು ಈ ಯೋಜನೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಗುರಿ ನಿಗದಿಪಡಿಸಿದ್ದಾರೆ. ಅಂಗನವಾಡಿಗಳಲ್ಲಿ ಈ ಯೋಜನೆ ಅನುಷ್ಠಾನಗೊಂಡ ನಂತರ ಎಲ್ಲ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಯೋಜನೆ ಜಾರಿಗೆ ತರಲು ಯೋಜನೆ ಹಾಕಿಕೊಂಡಿದ್ದಾರೆ.

197 ಅತಿ ಕಡಿಮೆ ತೂಕದ ಮಕ್ಕಳು:

ವಿಜಯನಗರ ಜಿಲ್ಲೆಯಲ್ಲಿ 197 ಮಕ್ಕಳು ಅತಿ ಕಡಿಮೆ ತೂಕ ಹೊಂದಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಮಕ್ಕಳನ್ನು ಗುರುತಿಸಿ, ಪೌಷ್ಟಿಕ ಆಹಾರ ಕೊಡುವ ವ್ಯವಸ್ಥೆ ಮಾಡಿದೆ. ಇನ್ನು, ಸಾಧಾರಣಕ್ಕಿಂತ ಕಡಿಮೆ ತೂಕವಿರುವ 10830 ಮಕ್ಕಳ ಪೋಷಕರಿಗೆ ತಿಳಿ ಹೇಳಿ, ಪೌಷ್ಟಿಕ ಆಹಾರದ ಮಹತ್ವ ತಿಳಿಸಿಕೊಡಲಾಗಿದೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ವಿಜಯನಗರದಲ್ಲಿ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಬಹಳ ಕಡಿಮೆ ಇದೆ.

‘ಜನರಲ್ಲಿ ಕೈತೋಟದ ಮಹತ್ವ ಸಾರುವುದರ ಜೊತೆಗೆ ಅಂಗನವಾಡಿಗಳನ್ನು ತರಕಾರಿ ವಿಷಯದಲ್ಲಿ ಸ್ವಾವಲಂಬಿಗೊಳಿಸಲು ಈ ಯೋಜನೆ ಸಹಕಾರಿಯಾಗಲಿದೆ. ಈಗಾಗಲೇ ಅಂಗನವಾಡಿಗಳಿಗೆ ಬೀಜ ಕೂಡ ಕಳಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೀರನಗೌಡ ತಿಳಿಸಿದರು.

ಅಂಕಿ ಅಂಶ

114486 ಜಿಲ್ಲೆಯ ಒಟ್ಟು ಮಕ್ಕಳ ಸಂಖ್ಯೆ

197 ಅತಿ ಕಡಿಮೆ ತೂಕ ಹೊಂದಿದ ಮಕ್ಕಳು

10830 ಸಾಧಾರಣಕ್ಕಿಂತ ಕಡಿಮೆ ತೂಕವಿರುವ ಮಕ್ಕಳು

1090 ಸ್ವಂತ ಕಟ್ಟಡ ಹೊಂದಿರುವ ಅಂಗನವಾಡಿ

577 ಕಾಂಪೌಂಡ್‌ ಇರುವ ಅಂಗನವಾಡಿ

513 ಕಾಂಪೌಂಡ್‌ ಇಲ್ಲದ ಅಂಗನವಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT