ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಮೈಲಾರ ಅಭಿವೃದ್ಧಿ ಪ್ರಾಧಿಕಾರ’ ಘೋಷಣೆಗೆ ಸೀಮಿತ?

2017ರ ಬಜೆಟ್ ನಲ್ಲಿ ಘೋಷಣೆಯಾಗಿದ್ದ ಮೈಲಾರ ಸುಕ್ಷೇತ್ರ ಅಭಿವೃದ್ಧಿ ಯೋಜನೆ
Published 20 ಜೂನ್ 2024, 7:13 IST
Last Updated 20 ಜೂನ್ 2024, 7:13 IST
ಅಕ್ಷರ ಗಾತ್ರ

ಹೂವಿನಹಡಗಲಿ: ನಾಡಿನ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಪ್ರಸ್ತಾವ ನನೆಗುದಿಗೆ ಬಿದ್ದಿದೆ.

2017–18ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಲಾರಲಿಂಗೇಶ್ವರ ಹಾಗೂ ದೇವರಗುಡ್ಡ ಜಂಟಿ ಪ್ರಾಧಿಕಾರ ಘೋಷಿಸಿ, 5 ಕೋಟಿ ಹಣ ಮೀಸಲಿಟ್ಟಿದ್ದರು. ಪ್ರಾಧಿಕಾರ ನಿಯಮಾವಳಿ ರೂಪಿಸುವ ವೇಳೆ ಮೈಲಾರ ಸುಕ್ಷೇತ್ರದ ಧರ್ಮಕರ್ತರು ಮತ್ತು ದೇವರಗುಡ್ಡ ದೇವಸ್ಥಾನ ಟ್ರಸ್ಟ್‌ ನವರು ಆಕ್ಷೇಪಣೆ ಸಲ್ಲಿಸಿ, ನ್ಯಾಯಾಲಯ ಮೊರೆ ಹೋಗಿದ್ದರಿಂದ ಪ್ರಕ್ರಿಯೆಗೆ ತಡೆ ಬಿದ್ದಿತ್ತು. ಮುಜರಾಯಿ ಇಲಾಖೆ ಏಳು ವರ್ಷದಿಂದ ಕಾನೂನು ಹೋರಾಟ ಮುಂದುವರಿಸಿದ್ದರೂ ಇತ್ಯರ್ಥವಾಗಿಲ್ಲ.

ಪ್ರಾಧಿಕಾರ ಏಕೆ ಬೇಕು?

ಮೈಲಾರ ಅಭಿವೃದ್ಧಿ ಪ್ರಾಧಿಕಾರ ರಚನೆಯಾದಲ್ಲಿ ಸುಕ್ಷೇತ್ರದ ಚಿತ್ರಣ ಬದಲಾಗಲಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯ ಪ್ರಾಧಿಕಾರಕ್ಕೆ ಪ್ರತಿವರ್ಷವೂ ಸೀಮಿತ ಅನುದಾನ ಬಿಡುಗಡೆಗೊಂಡು ಶಾಶ್ವತ ಅಭಿವೃದ್ಧಿ ಕೆಲಸಕ್ಕೆ ಸಹಕಾರಿಯಾಗಲಿದೆ. ಪ್ರಾಧಿಕಾರಕ್ಕೆ ಆಯುಕ್ತರು ನೇಮಕ ಆಗುವುದರಿಂದ ಸುಕ್ಷೇತ್ರ ಆಡಳಿತ ಮೇಲೆ ಸರ್ಕಾರ ಹಿಡಿತ ಸಾಧಿಸಲಿದೆ. ಎಲ್ಲ ವ್ಯವಹಾರಗಳು ಪಾರದರ್ಶಕವಾಗಿ ನಡೆಯುವುದರಿಂದ ಭಕ್ತರಿಗೆ ಹೆಚ್ಚಿನ ಸೌಕರ್ಯಗಳು ದೊರೆಯಲಿವೆ. ‘ದಕ್ಷಿಣ ಕರ್ನಾಟಕ ದೇವಸ್ಥಾನಗಳ ಮಾದರಿಯಲ್ಲಿ ಮೈಲಾರವೂ ಅಭಿವೃದ್ಧಿ ಹೊಂದಿ, ಪ್ರಸಿದ್ಧ ಯಾತ್ರಾ ಸ್ಥಳವಾಗಿ ರೂಪುಗೊಳ್ಳಲು ಪ್ರಾಧಿಕಾರ ಅಸ್ತಿತ್ವಕ್ಕೆ’ ಬರಬೇಕು ಎಂಬುದು ಭಕ್ತರ ಆಶಯ.

ಮೈಲಾರಲಿಂಗೇಶ್ವರ ದೇವಾಲಯ ವಾರ್ಷಿಕ 5 ಕೋಟಿ ರೂ. ಆದಾಯವಿರುವ ಮುಜರಾಯಿ ಇಲಾಖೆಯ ‘ಎ’ ಶ್ರೇಣಿ ದೇಗುಲವಾಗಿದೆ. ಮೈಲಾರ ಪಕ್ಕದಲ್ಲೇ ‘ಎ’ ಶ್ರೇಣಿಯ ಕುರುವತ್ತಿ ಸುಕ್ಷೇತ್ರವಿದೆ. ಎರಡೂ ಸುಕ್ಷೇತ್ರಗಳಲ್ಲೂ ಮೂಲಸೌಕರ್ಯ ಕೊರತೆ ಇದೆ. ಮೈಲಾರ ಮತ್ತು ದೇವರಗುಡ್ಡ ಅಂತರ್ ಜಿಲ್ಲೆಯ ದೇಗುಲಗಳಾಗಿರುವುದರಿಂದ ಈ ಪ್ರಸ್ತಾವ ಕೈ ಬಿಟ್ಟು, ಮೈಲಾರ-ಕುರುವತ್ತಿ ಸುಕ್ಷೇತ್ರ ಒಳಗೊಂಡು ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂಬುದು ಭಕ್ತರ ಒತ್ತಾಸೆಯಾಗಿದೆ.

ಈ ಕುರಿತು ಶಾಸಕ ಕೃಷ್ಣ ನಾಯಕ ಪ್ರತಿಕ್ರಿಯೆ ನೀಡಿ, ಪ್ರಾಧಿಕಾರದಿಂದ ಯಾರ ಹಕ್ಕುಗಳು ಮೊಟಕುಗೊಳ್ಳುವುದಿಲ್ಲ. ಸುಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ. ಮೈಲಾರ ಮತ್ತು ದೇವರಗುಡ್ಡ ಅಂತರ್ ಜಿಲ್ಲೆಯ ದೇಗುಲಗಳಾಗುವುದರಿಂದ ಅದನ್ನು ಕೈಬಿಟ್ಟು ‘ಮೈಲಾರ-ಕುರುವತ್ತಿ ಅಭಿವೃದ್ಧಿ ಪ್ರಾಧಿಕಾರ’ ರಚಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವೆ’ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಲಾದರೂ ಮೈಲಾರ ಪ್ರಾಧಿಕಾರ ರಚಿಸಿ ಶಾಶ್ವತ ಮೂಲಸೌಕರ್ಯ ಕಲ್ಪಿಸಬೇಕು. ಪಾರ್ಕಿಂಗ್ ನೈರ್ಮಲ್ಯ ಸಮಸ್ಯೆಯಿಂದ ಸ್ಥಳೀಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
–ಎಂ.ಬಿ. ಕೋರಿ, ಮೈಲಾರ ನಿವಾಸಿ

ಮೂಲ ಸೌಕರ್ಯ ಕೊರತೆ

ಮೈಲಾರಲಿಂಗನ ಪರಂಪರೆ ದೇಶದಲ್ಲೇ ವಿಶಿಷ್ಟವಾಗಿದೆ. ಇಲ್ಲಿ ಜರುಗುವ ಕಾರಣಿಕ ಮಹೋತ್ಸವದಲ್ಲಿ ರಾಜ್ಯ ಹೊರ ರಾಜ್ಯಗಳಿಂದ 10-15 ಲಕ್ಷ ಭಕ್ತರು ಪಾಲ್ಗೊಳ್ಳುತ್ತಾರೆ. ಕಾರಣಿಕ ನುಡಿಯನ್ನು ‘ಮೈಲಾರಲಿಂಗಸ್ವಾಮಿಯ ಭವಿಷ್ಯವಾಣಿ’ ಎಂದೇ ಭಕ್ತರು ನಂಬುತ್ತಾರೆ.

ಪ್ರತಿ ಹುಣ್ಣಿಮೆ ಭಾನುವಾರ ಗುರುವಾರದಂದು ಸುಕ್ಷೇತ್ರಕ್ಕೆ ಅಪಾರ ಭಕ್ತರು ಬರುತ್ತಾರೆ. ಆದರೆ ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಸಂಚಾರ ದಟ್ಟಣೆ ಉಂಟಾಗಿ ಸ್ಥಳೀಯರು ಸಮಸ್ಯೆ ಎದುರಿಸುತ್ತಾರೆ.

ಕುಡಿಯುವ ನೀರು ಶೌಚಾಲಯ ತಂಗಲು ಕೊಠಡಿಗಳ ಸೌಕರ್ಯಗಳಿಲ್ಲದೇ ಭಕ್ತರು ತೊಂದರೆ ಅನುಭವಿಸುತ್ತಾರೆ. ಅಭಿವೃದ್ಧಿ ಪ್ರಾಧಿಕಾರ ರಚಿಸಿ ಸುಕ್ಷೇತ್ರದ ಮಾದರಿ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಬೇಕು. ಅಗತ್ಯ ಜಮೀನು ಸ್ವಾಧೀನಪಡಿಸಿಕೊಂಡು ವಾಹನ ಪಾರ್ಕಿಂಗ್ ಮಾಡಿಕೊಡಬೇಕು. ದೇವಸ್ಥಾನ ಒತ್ತುವರಿ ತೆರವುಗೊಳಿಸಿ ಸಂಚಾರ ಸುಗಮಗೊಳಿಸಬೇಕು. ಅಭಿಷೇಕ ಸೇವೆಗೆ ಪ್ರತ್ಯೇಕ ಪೂಜಾ ಮಂಟಪ ಕಾರಣಿಕ ಮೈದಾನ ಅಭಿವೃದ್ಧಿಯಾಗಬೇಕು. ಭಕ್ತರ ವಾಸ್ತವ್ಯಕ್ಕಾಗಿ 100 ಕೊಠಡಿಗಳು ನಿರ್ಮಾಣವಾಗಬೇಕು. ಸ್ನಾನಘಟ್ಟ ಶೌಚಾಲಯ ಮೂತ್ರಾಲಯ ಸುಗಮ ರಸ್ತೆಗಳು ನಿರ್ಮಾಣವಾಗಬೇಕು ಎಂಬುದು ಭಕ್ತರ ಬೇಡಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT