ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ದಿನದ ಹಂಪಿ ಉತ್ಸವಕ್ಕಾಗಿ ಧರಣಿ

Last Updated 25 ಅಕ್ಟೋಬರ್ 2019, 12:52 IST
ಅಕ್ಷರ ಗಾತ್ರ

ಬಳ್ಳಾರಿ: ‘ಹಂಪಿ ಉತ್ಸವವವನ್ನು ಮೂರು ದಿನ ವಿಜೃಂಭಣೆಯಿಂದ ಆಚರಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾ ಕಲಾವಿದರ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಶುಕ್ರವಾರ ಮೆರವಣಿಗೆ, ಧರಣಿ ನಡೆಸಿದರು. ಕೆಪಿಸಿಸಿ ವಕ್ತಾರ ವಿ.ಎಸ್‌.ಉಗ್ರಪ್ಪ ಅವರೊಂದಿಗೆ ಕಾಂಗ್ರೆಸ್‌ ಮುಖಂಡರೂ ಪಾಲ್ಗೊಂಡು ಬೆಂಬಲ ಸೂಚಿಸಿದರು.

ನಗರದ ಗಡಿಗಿ ಚೆನ್ನಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಬಳಿಕ ಮಾತನಾಡಿದ ಉಗ್ರಪ್ಪ, 'ಕಿತ್ತೂರು ಉತ್ಸವವನ್ನು ಮೂರು ದಿನ ಆಚರಿಸಿರುವ ರಾಜ್ಯ ಸರ್ಕಾರ ಹಂಪಿ ಉತ್ಸವವನ್ನು ಎರಡೇ ದಿನಕ್ಕೆ ಸೀಮಿತಗೊಳಿಸಿ ತಾರತಮ್ಯ ನೀತಿ ಅನುಸರಿಸುತ್ತಿದೆ.ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗೆ ಇದು ದೊಡ್ಡ ಅನ್ಯಾಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮೈಸೂರು ದಸರಾಗೆ ಮೂಲಪ್ರೇರಣೆಯಾದ ಹಂಪಿ ಉತ್ಸವವನ್ನೂ ವಿಜೃಂಭಣೆಯಿಂದ ಮೂರು ದಿನ ಆಚರಿಸಲೇಬೇಕು ಎಂದು ಗಮನ ಸೆಳೆಯುತ್ತಿದ್ದರೂ ರಾಜ್ಯ ಸರ್ಕಾರ ಗಮನ ಹರಿಸದೇ ಇರುವುದು ನಿರ್ಲಕ್ಷ್ಯಕ್ಕೆ ನಿದರ್ಶನ. ಕಲಾವಿದರ ಆಗ್ರಹಕ್ಕೆ ಬೆಲೆಯೇ ಇಲ್ಲದಂತಾಗಿರುವುದು ವಿಪರ್ಯಾಸ’ ಎಂದರು.

‘ದೂರದ ಬೆಳಗಾವಿ ಜಿಲ್ಲೆಯವರನ್ನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿಸಿರುವುದೇ ಇಂಥ ಸನ್ನಿವೇಶಕ್ಕೆ ಕಾರಣ. ಜಿಲ್ಲೆಯ ಅನನ್ಯತೆಯ ಬಗ್ಗೆ ಅರಿವಿಲ್ಲದ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಎರಡು ದಿನಕ್ಕೆ ಮಾತ್ರ ಉತ್ಸವವನ್ನು ಸೀಮಿತಗೊಳಿಸಿ ಅವಾಂತರ ಸೃಷ್ಟಿಸಿದ್ದಾರೆ. ಇದು ಇಲ್ಲಿಗೇ ಕೊನೆಗೊಳ್ಳಬೇಕು’ ಎಂದು ವೇದಿಕೆಯ ಸಂಚಾಲಕ ಕೆ.ಜಗದೀಶ್‌ ಆಗ್ರಹಿಸಿದರು.

'ಉತ್ಸವವನ್ನು ಯಾವುದೇ ಕಾರಣಕ್ಕೂ ಮುಂದೂಡಬಾರದು. ಈ ವರ್ಷದ ಉತ್ಸವವನ್ನು ಮೂರು ದಿನ ಆಚರಿಸಬೇಕು. ಸ್ಥಳೀಯ ಕಲಾವಿದರಿಗೆ ಆದ್ಯತೆ ಕೊಡಬೇಕು.ಹಿಂದಿನ ವರ್ಷ ಅವಕಾಶ ದೊರಕದ ಕಲಾವಿದರಿಗೆ ಈ ವರ್ಷ ಅವಕಾಶ ಕೊಡಬೇಕು. ಪ್ರತಿ ವರ್ಷ ನವೆಂಬರ್‌ 3ರಿಂದ 5ರವರೆಗೂ ಉತ್ಸವ ಆಚರಿಸುವ ಕುರಿತು ಆದೇಶ ಹೊರಡಿಸಬೇಕು. ಬಜೆಟ್‌ನಲ್ಲಿ ₨ 15 ಕೋಟಿ ಮೀಸಲಿರಿಸಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲಾ ಕೇಂದ್ರದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗೆ 73 ದಿನದಲ್ಲಿ ಮೂವರು ಪ್ರಭಾರಿ ಸಹಾಯಕ ನಿರ್ದೇಶಕರನ್ನು ನಿಯೋಜಿಸಿರುವುದರಿಂದ ಆಡಳಿತ ಹಳಿ ತಪ್ಪಿದೆ. ಪ್ರಾಯೋಜಿತ ಕಾರ್ಯಕ್ರಮಗಳ ಬಿಲ್‌ಗಳಿಗೆ 5 ತಿಂಗಳಿಂದ ಹಣ ಪಾವತಿಯಾಗಿಲ್ಲ. ಇಂಥ ದುರಾಡಳಿತದ ನಡುವೆ ಹಂಪಿ ಉತ್ಸವವನ್ನೂ ಮೊಟುಕುಗೊಳಿಸಲಾಗುತ್ತಿದೆ. ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆಯನ್ನು ಬೇಕೆಂದೇ ಕಡೆಗಣಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಂಕಲಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ, ಮುಖಂಡರಾದ ಬಿ.ಎಂ.ಪಾಟೀಲ್, ವೆಂಕಟೇಶ್ ಹೆಗ್ಡೆ, ನವ ಕರ್ನಾಟಕ ಯುವಶಕ್ತಿ ಸಂಘಟನೆಯ ಸಿದ್ಮಲ್‌ ಮಂಜುನಾಥ್, ರಂಗಜಂಗಮ ಸಂಸ್ಥೆಯ ಅಣ್ಣಾಜಿ ಕೃಷ್ಣಾರೆಡ್ಡಿ, ಹಂಸ ಕಲಾ ಟ್ರಸ್ಟ್‌ನ ರಾಮೇಶ್ವರ, ಶಾಂತಲಾ ಕಲಾ ಟ್ರಸ್ಟ್‌ನ ರಘು, ವಾಗ್ದೇವಿ ಕಲಾ ಟ್ರಸ್ಟ್‌ನ ವೆಂಕೋಬಾಚಾರ್, ಸನ್ಮಾರ್ಗ ಗೆಳೆಯರ ಬಳಗದ ಚಂದ್ರಶೇಖರ ಆಚಾರ್, ಕನ್ನಡ ಕ್ರಾಂತಿ ದಳದ ಕುಂದಾಪುರ ನಾಗರಾಜ್, ಬಸವ ಸಮಿತಿಯ ಸಿಂಗಾಪುರ ನಾಗರಾಜ್, ಕಲಾವಿದರಾದ ಮಲ್ಲಿಕಾರ್ಜುನ್‌, ಹನುಮಂತರೆಡ್ಡಿ, ರಾಜು, ಮಾರುತಿ, ಪದ್ಮಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT