ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಡೂರು | ಬಿಡುವು ನೀಡದ ಮಳೆ: ಬಿತ್ತನೆ ವಿಳಂಬ

ಸಂಡೂರು ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ: ತೇವಾಂಶ ಹೆಚ್ಚಳ
ರಾಮು ಅರಕೇರಿ
Published 15 ಜೂನ್ 2024, 5:48 IST
Last Updated 15 ಜೂನ್ 2024, 5:48 IST
ಅಕ್ಷರ ಗಾತ್ರ

ಸಂಡೂರು: ಈ ಬಾರಿ ತಾಲ್ಲೂಕಿನಲ್ಲಿ ಮುಂಗಾರು ವಾಡಿಕೆಗಿಂತ ಹೆಚ್ಚು ಸುರಿದಿದ್ದು ರೈತರು ಸಂತಸಗೊಂಡಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ಬೀಜ ,ಗೊಬ್ಬರ ಸಿದ್ಧಪಡಿಸಿ ಭೂಮಿ ಹಸನಾಗಿಸಿಕೊಂಡಿದ್ದರೂ ಜಮೀನುಗಳು ಅವಶ್ಯಕತೆಗಿಂತ ಜಾಸ್ತಿ ಹಸಿಯಾಗಿರುವುದರಿಂದ ಬಿತ್ತನೆ ಕಾರ್ಯ ತುಸು ವಿಳಂಬವಾಗುತ್ತಿದೆ.

ವಾಡಿಕೆಗಿಂತ ಹೆಚ್ಚು ಮಳೆ:

ತಾಲ್ಲೂಕಿನಲ್ಲಿ‌ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. ಜನವರಿಯಿಂದ ವಾಡಿಕೆ ಮಳೆ 11.7 ಸೆ.ಮೀ ಆದರೆ ಈ ವರೆಗೆ 21.09 ಸೆಂಟಿಮೀಟರ್ ಗಿಂತ ಹೆಚ್ಚು ಮಳೆಯಾಗಿದೆ. ಸರಾಸರಿ ಶೇ. 80 ರಷ್ಟು ಹೆಚ್ಚು ಮಳೆ‌ಸುರಿದೆ.

ಸಂಡೂರು ಹೋಬಳಿಯಲ್ಲಿ 16.4 ಸೆಂ.ಮೀ ವಾಡಿಕೆ ಮಳೆಯಾದರೆ ಬಿದ್ದಿರುವ ಮಳೆ 19.7 ಸೆಂ.ಮೀ ಪ್ರತಿಶತ 20 ರಷ್ಟು ಹೆಚ್ಚು. ಚೋರನೂರು ಹೋಬಳಿಯಲ್ಲಿ ವಾಡಿಕೆ 12.5 ಸೆಂಮೀ ಆದರೆ 23.8 ಸೆಂ.ಮೀ ಮಳೆಯಾಗಿದೆ. ತೋರಣಗಲ್ಲು ಹೋಬಳಿಯಲ್ಲಿ 16.8 ಸೆಂಮೀ ವಾಡಿಕೆಯಾದರೆ 19.9 ಸೆಂ.ಮೀ ಶೇ.70 ರಷ್ಟು ಹೆಚ್ಚು ಮಳೆಯಾಗಿದೆ. ಇದರ ಜೊತೆಗೆ ಈಗ್ಗೆ ಒಂದು ವಾರದಿಂದ ಎಡೆಬಿಡದೆ ಮಳೆ‌ಸುರಿಯುತ್ತಿರುವುದರಿಂದ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾದಂತಾಗಿದೆ.

ಸಮರ್ಪಕ ಬೀಜಗೊಬ್ಬರ ಪೂರೈಕೆ:

ರೈತರು ಬಿತ್ತನೆಗೆ ಬೇಕಾದ ಸಕಲ‌ಸಿದ್ಧತೆ ಮಾಡಿಕೊಂಡಿದ್ದಾರೆ. ಕೃಷಿ ಇಲಾಖೆಗೆ ಈ ಬಾರಿ 34,895 ಹೆಕ್ಟೇರ್ ಬಿತ್ತನೆ ಗುರಿಯನ್ನು ನಿಗದಿಪಡಿಸಲಾಗಿದೆ. ಪೂರ್ವ ಮುಂಗಾರು ಉತ್ತಮವಾಗಿ‌ ಸುರಿದಿದ್ದು ಈಗಾಗಲೇ ತಾಲ್ಲೂಕಿನಲ್ಲಿ 350 ಹೆಕ್ಟೇರ್ ಗಿಂತ ಹೆಚ್ಚಿನ ಪ್ರದೇಶದಲ್ಲಿ ಜೋಳ ಬಿತ್ತಲಾಗಿದೆ.

ಇದಕ್ಕಾಗಿ ರೈತರು ಸುಮಾರು 581 ಕ್ವಿಂಟಾಲ್ ಜೋಳ ಕೃಷಿ ಇಲಾಖೆಯಿಂದ ಖರೀದಿಸಿದ್ದಾರೆ. ಇದರ ಜೊತೆಗೆ ಭತ್ತ, ತೊಗರಿ, ಶೇಂಗಾ, ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ, ರಾಗಿ‌ ಬೀಜಗಳನ್ನು ರೈತರು ಖರೀದಿಸಿದ್ದಾರೆ.

ಕಳೆದ ವರ್ಷಕ್ಕಿಂತ ಈ ಬಾರಿ ಜೋಳ‌ ಬಿತ್ತನೆ ಪ್ರದೇಶ ದ್ವಿಗುಣಗೊಂಡಿದೆ. ಕಳೆದ ಸಾಲಿನಲ್ಲಿ ಸುಮಾರು 40 ಕ್ವಿಂಟಲ್ ಜೋಳ ಖರೀದಿಸಿ ಬಿತ್ತನೆಗೈದಿದ್ದರೆ ಈ ಬಾರಿ ಈಗಾಗಲೇ 93 ಕ್ವಿಂಟಲ್ ಜೋಳ ಮಾರಾಟವಾಗಿವೆ. ಕೃಷಿ ಇಲಾಖೆಯಲ್ಲಿ ಯೂರಿಯಾ 873 ಟನ್, ಡಿಎಪಿ 384 ಟನ್, ಪೊಟ್ಯಾಶ್ 20 ಟನ್, ಕಾಂಪ್ಲೆಕ್ಸ್ ರಸಗೊಬ್ಬರ 400 ಟನ್ ದಾಸ್ತಾನು ಇದ್ದು, ರೈತರ ಖರೀದಿಗೆ ಯಾವುದೇ ತೊಂದರೆಯಾಗಿಲ್ಲ.

ವಿಮೆ ಮಾಡಿಸಲು ಕೃಷಿ ಇಲಾಖೆ ಸಲಹೆ
ಕಳೆದ ಸಾಲಿಗಿಂತ ಈ ಬಾರಿ ಉತ್ತಮ ಮಳೆಯಿದ್ದು ರೈತರು ತಮ್ಮ ಫಸಲಿನ ಸುರಕ್ಷತೆಯ ದೃಷ್ಟಿಯಿಂದ ವಿಮೆ ಮಾಡಿಸಬೇಕು ಎಂದು ಕೃಷಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸರ್ಕಾರದ ಆದೇಶದಂತೆ ಬಳ್ಳಾರಿ ಜಿಲ್ಲೆಗೆ ಟಾಟಾ ಎಐಜಿ ವಿಮಾ ಕಂಪನಿಯು ಇನ್ಶೂರೆನ್ಸ್ ನ್ನು ಅನುಷ್ಠಾನಗಿಳಿಸುತ್ತಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು. ಕಳೆದ ವರ್ಷ ಸುಮಾರು 81 ರೈತರು ವಿಮೆ ಮಾಡಿಸಿ ₹ 14.83 ಲಕ್ಷ ವಿಮಾ ಮೊತ್ತವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ. ಮೆಕ್ಕೆಜೋಳಜೋಳ ವಿಮೆಗೆ ಜುಲೈ 31 ಹಾಗೂ ಸಜ್ಜೆನವಣೆಶೇಂಗಾ ಹಾಗೂ ಮಳೆಯಾಶ್ರಿತ ಭತ್ತಕ್ಕೆ ಆಗಸ್ಟ್ 16 ಕೊನೆಯದಿನವೆಂದು ಸಹಾಯಕ‌ ಕೃಷಿ‌ ನಿರ್ದೇಶಕ ಸಿ.ಎ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT