ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟ ನಾಯಕರನ್ನು ತಿರಸ್ಕರಿಸಿ: ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿಕೆ

ಕೆಆರ್‌ಎಸ್ ಪಕ್ಷದಿಂದ ಜಾಥಾ
Published 28 ಫೆಬ್ರುವರಿ 2024, 6:50 IST
Last Updated 28 ಫೆಬ್ರುವರಿ 2024, 6:50 IST
ಅಕ್ಷರ ಗಾತ್ರ

ಬಳ್ಳಾರಿ: ಭ್ರಷ್ಟ, ಅಪ್ರಾಮಾಣಿಕ, ಸ್ವಜನಪಕ್ಷಪಾತಿ ರಾಜಕೀಯ ನಾಯಕರನ್ನು ತಿರಸ್ಕರಿಸಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್‌) ಬೆಂಬಲಿಸಿ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿದರು.

‘ಕರ್ನಾಟಕಕ್ಕಾಗಿ ನಾವು’ ಹೆಸರಲ್ಲಿ ಕೆಆರ್‌ಎಸ್‌ ಪಕ್ಷದ ಬೈಕ್‌ ಜಾಥಾ ಮಂಗಳವಾರ ಬಳ್ಳಾರಿ ತಲುಪಿತು. ಈ ವೇಳೆ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಅನೈತಿಕ ನಡವಳಿಕೆ ಉಳ್ಳವರನ್ನು, ಸುಳ್ಳರನ್ನು, ಸಮಾಜಘಾತುಕ ಶಕ್ತಿಗಳನ್ನು, ಕುಟುಂಬ ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿರುವ ಜೆಸಿಬಿ (ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ) ಪಕ್ಷಗಳ ಪರಮಸ್ವಾರ್ಥಿ ರಾಜಕಾರಣಿಗಳನ್ನು ರಾಜಕೀಯ ನಾಯಕರೆಂದು ಒಪ್ಪಿಕೊಳ್ಳಬಾರದು. ಜನಪರ ಕಾಳಜಿಯ, ಸ್ಚಚ್ಛ ಮತ್ತು ಪ್ರಾಮಾಣಿಕ ರಾಜಕೀಯ ವ್ಯವಸ್ಥೆಗಾಗಿ ಶ್ರಮಿಸುತ್ತಿರುವ ನಮ್ಮ ಪಕ್ಷದವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ಬಳ್ಳಾರಿ ಜನ ಜನಾರ್ದನ ರೆಡ್ಡಿ ಕುಟುಂಬದವರನ್ನು ಸೋಲಿಸಿದ್ದಾರೆ. ಆದರೆ, ಭರತ್‌ ರೆಡ್ಡಿಯನ್ನು ಗೆಲ್ಲಿಸಿಬಿಟ್ಟರು. ಆತ ಈಗಾಗಲೇ ಐ.ಟಿ, ಇ.ಡಿ ದಾಳಿ ನಡೆಸುವಷ್ಟು ಮಾಡಿಕೊಂಡಿದ್ದಾರೆ’ ಎಂದರು.

ಪಕ್ಷದ  ಉಪಾಧ್ಯಕ್ಷ ಲಿಂಗೇಗೌಡ ಮಾತನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್, ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ, ನರಸಿಂಹ ಮೂರ್ತಿ, ಜಂಟಿ ಕಾರ್ಯದರ್ಶಿ ರಘುಪತಿ ಭಟ್, ಸಂಘಟನಾ ಕಾರ್ಯದರ್ಶಿ ಎಲ್. ಜೀವನ್, ಚಂದ್ರಶೇಖರ್ ಮಠದ, ಬಿ. ಜಿ ಕುಂಬಾರ್, ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಇತರರು ಇದ್ದರು. 

‘ಬಳ್ಳಾರಿ ಎಸ್ಪಿ ಅಪ್ಪನದ್ದಲ್ಲ’

ಬಳ್ಳಾರಿಯಲ್ಲಿ ರಾಜಕಾರಣಿಗಳು ಮಾತ್ರ ಗೂಂಡಾಗಳಲ್ಲ. ಅಧಿಕಾರಿಗಳೂ ಗೂಂಡಾಗಳೇ. ಇಲ್ಲಿನ ಎಸ್ಪಿಗೆ  ಕರ್ನಾಟಕದ ಪರಂಪರೆ ಬಗ್ಗೆ ತಿಳಿದಂತಿಲ್ಲ. ಪಕ್ಷದ ಸಭೆಗೆ ಅನುಮತಿ ಪಡೆಯಲು ಹೋದರೆ ‘ಗೆಟ್‌ ಲಾಸ್ಟ್‌’ ಎಂದಿದ್ದಾರೆ. ಬಳ್ಳಾರಿ ಏನು ಅವರ ಅಪ್ಪನದ್ದಾ ಎಂದು ರವಿಕೃಷ್ಣಾ ರೆಡ್ಡಿ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

‘ಇಲ್ಲಿನ ಅಧಿಕಾರಿಗಳಿಗೆ ಅಹಂಕಾರವಿದೆ. ಇದು ಯಾರ ಅಪ್ಪನ ಆಸ್ತಿಯಲ್ಲ, ಜಹಗೀರಲ್ಲ. ಇದು ಕನ್ನಡಿಗರ ರಾಜ್ಯ. ಯಾವುದೋ ರಾಜ್ಯದಿಂದ ಬಂದು ಇಲ್ಲಿ ಗೂಂಡಾಗಿರಿ ಮಾಡುವುದನ್ನು ಅಧಿಕಾರಿಗಳು ನಿಲ್ಲಿಸಬೇಕು. ಕೆಆರ್‌ಎಸ್‌ ಪಕ್ಷ  ಖಾಕಿಗೆ ಹೆದರುವುದಿಲ್ಲ. ಸ್ವಲ್ಪ ಅಹಂಕಾರ ಬಿಟ್ಟು ನಡೆಯಬೇಕು. ಈ ರಾಜ್ಯದಲ್ಲಿ ಐಪಿಎಸ್‌ ಅಧಿಕಾರಿಗಳೂ ಜೈಲು ನೋಡಿರುವ ಉದಾಹರಣೆಗಳಿವೆ. ಇದು ಎಸ್ಪಿ ಗಮನದಲ್ಲಿರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT