ಗೈರು ಹಾಜರಾದರೆ ಕ್ರಮ’ ಎಚ್ಚರಿಕೆ
‘ವಿಮ್ಸ್ ವೈದ್ಯರು ಮೂಲಸ್ಥಾನದಲ್ಲಿದ್ದುಕೊಂಡೇ ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯದ ವೇಳೆ ಗೈರಾಗಿರುವುದು ಕಂಡುಬಂದರೆ ಕ್ರಮ ಜರುಗಿಸಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ ಎಚ್ಚರಿಕೆ ನೀಡಿದರು. ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿಮ್ಸ್ ಹೆಸರಾಂತ ವೈದ್ಯಕೀಯ ಸಂಸ್ಥೆಯಾಗಿದ್ದು ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸಬೇಕು ಎಂದು ಸೂಚಿಸಿದರು. ವೈದ್ಯಾಧಿಕಾರಿಗಳು ಮೂಲಸ್ಥಾನದಲ್ಲಿದ್ದುಕೊಂಡು ಅವರ ಆರೈಕೆಗೆ ವಿಶೇಷ ಕಾಳಜಿ ವಹಿಸಬೇಕು. ಅವರ ಗಣಕೀಕೃತ ಹಾಜರಾತಿ ಮಾಹಿತಿ ನೀಡಬೇಕು. ಚಲನವಲನಗಳ ಬಗ್ಗೆ ನಿಗಾ ವಹಿಸಬೇಕು ಎಂದು ವಿಮ್ಸ್ ಮುಖ್ಯ ಆಡಳಿತಾಧಿಕಾರಿ ಸಿದ್ಧರಾಮೇಶ್ವರ ಅವರಿಗೆ ನಿರ್ದೇಶಿಸಿದರು. ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ ಒಳಚರಂಡಿ ವ್ಯವಸ್ಥೆ ನಿರ್ವಹಣೆಗೆ ಕ್ರಮ ವಹಿಸಬೇಕು. ಸಂಸ್ಥೆಯ ಆವರಣ ಸ್ವಚ್ಛವಾಗಿಟ್ಟುಕೊಳ್ಳಲು ಬೇಜವಾಬ್ದಾರಿ ಸಲ್ಲದು. ನಿರ್ವಹಣೆಗೆ ಕೊರತೆಯಿದ್ದಲ್ಲಿ ಗಮನಕ್ಕೆ ತರಬೇಕು ಎಂದು ತಿಳಿಸಿದರು. ವಿವಿಧ ವಿಭಾಗಗಳಿಗೆ ಗುಣಮಟ್ಟದ ಸಲಕರಣೆಗಳ ಅಗತ್ಯವಿದ್ದಲ್ಲಿ ಪ್ರಸ್ತಾವನೆ ನೀಡಬೇಕು. ಅಗತ್ಯ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ಶವ ರವಾನೆಗೆ ಹಲೇ ವಾಹನವಲ್ಲದೇ ಸುಸಜ್ಜಿತ ಅಂಬ್ಯುಲೆನ್ಸ್ ಮೀಸಲಿರಿಸಬೇಕು ಎಂದು ಹೇಳಿದರು. ವಿಮ್ಸ್‌ನಲ್ಲಿ ಬಹಳ ದಿನಗಳಿಂದ ಎಕ್ಸ್-ರೇ ಯಂತ್ರವು ದುರಸ್ಥಿಯಾಗದೆ ಬರುವ ರೋಗಿಗಳು ಹೊರಗಡೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ರಿಪೇರಿಗೆ ಕ್ರಮ ವಹಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆಯಲ್ಲಿ ನೂತನವಾಗಿ ದಂತ ವೈದ್ಯಕೀಯ ಕಾಲೇಜು ನಿರ್ಮಾಣವಾಗಿದೆ. ಹಲ್ಲಿನ ಸಮಸ್ಯೆಗಳಿಗೆ ಹಲವಾರು ಸೌಲಭ್ಯಗಳಿವೆ. ಈ ಕುರಿತು ಸಾರ್ವಜನಿಕರಿಗೆ ಹೆಚ್ಚು ಪ್ರಚಾರ ನೀಡಬೇಕು ಎಂದರು. ವಿಮ್ಸ್ ಆಸ್ಪತ್ರೆಯಲ್ಲಿ ದೊರಕುವ ಸೌಲಭ್ಯಗಳ ಬಗ್ಗೆಸಾರ್ವಜನಿಕರಿಗೆ ಸುಲಭವಾಗಿ ತಿಳಿಯಲು ಸೂಚನಾ ಅಥವಾ ಮಾಹಿತಿ ಫಲಕಗಳನ್ನು ಪ್ರದರ್ಶಿಸಬೇಕು ಇದರಿಂದ ಹಳ್ಳಿ ಭಾಗದ ಜನರಿಗೆ ಸುಗಮವಾಗುತ್ತದೆ ಎಂದು ಆಡಳಿತ ವೈದ್ಯಾಧಿಕಾರಿಗಳಿಗೆ ಆದೇಶಿಸಿದರು. ಸಾರ್ವಜನಿಕರಿಗೆ ಗುಣಮಟ್ಟ ಚಿಕಿತ್ಸೆ ಒದಗಿಸುವ ಕ್ರಮ ಹಾಗೂ ವಿಭಾಗಗಳ ಕುಂದು-ಕೊರತೆ ಚರ್ಚಿಸಲು ಎಲ್ಲಾ ವಿಭಾಗಗಳ ಮುಖ್ಯಸ್ಥರನ್ನೊಳಗೊಂಡು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂದು ನಿರ್ದೇಶಕರಿಗೆ ಹೇಳಿದರು. ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡಬಾರದು ಬದಲಾಗಿ ಅದಕ್ಕೆ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ಪಟ್ಟಿಮಾಡಿ ಪ್ರಸ್ತಾವನೆ ನೀಡಬೇಕು ಎಂದರು.