ಭಾನುವಾರ, ಮಾರ್ಚ್ 7, 2021
32 °C
₹ 25 ಲಕ್ಷ ಮೌಲ್ಯದ ಮಾಂಗಲ್ಯ ಸರಗಳು ವಶಕ್ಕೆ

ಸಹೋದರ ಸರಗಳ್ಳರ ಸೆರೆ: ₹ 25 ಲಕ್ಷ ಮೌಲ್ಯದ ಮಾಂಗಲ್ಯ ಸರಗಳ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಬೈಕ್‌ನಲ್ಲಿ ಬಂದು ಗ್ರಾಮೀಣ ಪ್ರದೇಶದ ಒಂಟಿ ಮಹಿಳೆಯರನ್ನೇ ಗುರಿ ಮಾಡಿಕೊಂಡು ಹಲ್ಲೆ ನಡೆಸಿ ಅವರ ಕೊರಳಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗುತ್ತಿದ್ದ ಸಹೋದರರನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೆಲಮಂಗಲ ಮಾರುತಿ ನಗರದ ಸಿ. ಅಶೋಕ್ ಮತ್ತು ವಿನೋದ್ ಬಂಧಿತರು.

‘ಈ ಇಬ್ಬರು ಅಣ್ಣ- ತಮ್ಮಂದಿರಾಗಿದ್ದಾರೆ. ಆರೋಪಿಗಳು ಸರಗಳ್ಳತನಕ್ಕೆ ಇಳಿದಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ ತಾಲ್ಲೂಕು, ತುಮಕೂರು, ರಾಮನಗರ ಜಿಲ್ಲೆ, ಬೆಂಗಳೂರು ನಗರ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಒಂಟಿಯಾಗಿ ಓಡಾಡುವ, ದನ ಮೇಯಿಸುವ, ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರ, ವೃದ್ಧೆಯರ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗುತ್ತಿದ್ದರು’ ಎಂದು ಕೇಂದ್ರ ವಲಯದ ಐಜಿಪಿ ಸೀಮಂತ್ ‌ಕುಮಾರ್ ‌ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಪ್ರತಿಭಟಿಸಿದವರಿಗೆ ಚಾಕು, ಸ್ಪ್ಯಾನರ್, ರಾಡು, ಕಟಿಂಗ್ ಪ್ಲೇಯರ್‌ಗಳಿಂದ ಹಲ್ಲೆ ಮಾಡಿ ಚಿನ್ನದ ಸರಗಳನ್ನು ಕಿತ್ತುಕೊಂಡು ಹೋಗಿದ್ದರು. ಒಟ್ಟು 26 ಪ್ರಕರಣಗಳನ್ನು ಪತ್ತೆ ಹಚ್ಚಿ ₹ 25 ಲಕ್ಷ ಬೆಲೆ ಬಾಳುವ 510 ಗ್ರಾ. ತೂಕದ 23 ಚಿನ್ನದ ಸರಗಳು ಹಾಗೂ ಅರೋಪಿಗಳು ಕೃತ್ಯಕ್ಕೆ ಬಳಸಿದ್ದ ಬೈಕ್‌, ಚಾಕು, ಕಬ್ಬಿಣದ ರಾಡು, ಕಟಿಂಗ್ ಪ್ಲೇಯರ್, ಸ್ಪ್ಯಾನರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಬಂಧನ: ಲಾಕ್‌ಡೌನ್‌ ಸಮಯದಲ್ಲಿ ಬಾರ್ ಮತ್ತು ವೈನ್‌ಶಾಪ್‌ಗಳ ಷಟರ್‌ಗಳನ್ನು ಒಡೆದು ಮದ್ಯ ಕಳ್ಳತನ ಮಾಡುತ್ತಿದ್ದ ಖದೀಮರನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ದೊಡ್ಡಬಳ್ಳಾಪುರ ನಗರದ ಸಿದ್ದೇನಾಯಕನಹಳ್ಳಿ ಬಳಿಯ ಗೌರಿ ವೈನ್ಸ್‌ ಷಟರ್ ಮುರಿದು ಮದ್ಯದ ಬಾಟಲಿಗಳು ಮತ್ತು ನಗದು ಕಳವು ಮಾಡಲಾಗಿತ್ತು. ನಂತರ ತಾಲ್ಲೂಕಿನಾದ್ಯಂತ ಮದ್ಯ ಕಳ್ಳತನ ಪ್ರಕರಣ ದಾಖಲಾಗಿದ್ದವು. ನಂದಿ ಕ್ರಾಸ್ ಬಳಿಯ ಮನು ವೈನ್ಸ್, ತೂಬಗೆರೆ ಹರ್ಷ ಬಾರ್ ಅಂಡ್ ರೆಸ್ಟೋರೆಂಟ್‌, ಕೊನಘಟ್ಟದ ಎಂಎಸ್‌ಐಎಲ್‌, ತಿಪ್ಪೂರು ಗ್ರಾಮದ ಹಂಸ ವೈನ್ಸ್ ಷಟರ್ ಮುರಿದು ಮದ್ಯ, ಹಣ ಕಳ್ಳತನ ಮಾಡಲಾಗಿತ್ತು. ನಾಗರಾಜ, ಅಂಜಿ, ನವೀನ್‌ಕುಮಾರ್, ಶಶಿಕುಮಾರ್ ಎಂಬುವರನ್ನು ಬಂಧಿಸಿ 13 ಬಾಕ್ಸ್ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು,

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು