ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಕೋಟೆ: 64 ಅಂಗನವಾಡಿಗಳಿಗಿಲ್ಲ ಸ್ವಂತ ಕಟ್ಟಡ

ವೆಂಕಟೇಶ್.ಡಿ.ಎನ್
Published 26 ಜೂನ್ 2024, 3:30 IST
Last Updated 26 ಜೂನ್ 2024, 3:30 IST
ಅಕ್ಷರ ಗಾತ್ರ

ಹೊಸಕೋಟೆ: ತಾಲ್ಲೂಕಿನಲ್ಲಿ ಒಟ್ಟು 321 ಅಂಗನವಾಡಿ ಕೇಂದ್ರಗಳಿವೆ. ಅದರಲ್ಲಿ 64 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲದೆ ಸುಮುದಾಯ ಭವನ, ಶಾಲಾ ಕಟ್ಟಡ, ಪಂಚಾಯಿತಿ ಕಟ್ಟಡ, ಸ್ವಂತ  ಮತ್ತು ಇತರ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಸ್ವಂತ ಕಟ್ಟಡ ಇಲ್ಲದ ಕಾರಣ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಅಡ್ಡಿಯಾಗಿದೆ. 321 ಅಂಗನವಾಡಿ ಕೇಂದ್ರಗಳಲ್ಲಿ 257ಕ್ಕೆ ಸಂತ ಕಟ್ಟಡವಿದ್ದರೆ, 64 ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಅದರಲ್ಲಿ 12 ಕೆಂದ್ರಗಳು ಸಮುದಾಯ ಭವನದಲ್ಲಿ, 30 ಕೇಂದ್ರಗಳು ಶಾಲಾ ಕೊಠಡಿಗಳಲ್ಲಿ, 21 ಕೇಂದ್ರಗಳು ಬಾಡಿಗೆ ಕೊಠಡಿಗಳಲ್ಲಿ ನಡೆಯುತ್ತಿವೆ.

ಬಾಡಿಗೆ ಕೊಠಡಿ: ತಾಲ್ಲೂಕಿನಾದ್ಯಂತ ಒಟ್ಟು 21 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ನಗರದಾದ್ಯಂತ ಒಟ್ಟು 30 ಅಂಗನವಾಡಿ ಕೇಂದ್ರಗಳಿವೆ. ಅದರಲ್ಲಿ ಕೇವಲ 11 ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡವಿದೆ. ಉಳಿದಂತೆ 1 ಸಮುದಾಯ ಭವನ, 3 ಶಾಲೆಯಲ್ಲಿ, 15 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಗ್ರಾಮೀಣ ಭಾಗದಲ್ಲಿ 6 ಅಂಗನವಾಡಿ ಕೇಂದ್ರಗಳು ಬಾಡಿಗೆಯಲ್ಲಿ ನಡೆಯುತ್ತಿದ್ದರೆ ಉಳಿದಂತೆ 27 ಕೇಂದ್ರಗಳು ಶಾಲೆಯಲ್ಲಿ, 11 ಸಮುದಾಯ ಭವನದಲ್ಲಿ, 1 ಇತರ ಕಟ್ಟಡದಲ್ಲಿ ನಡೆಯುತ್ತಿದೆ.

ಗೂಡುಗಳಂತಿರುವ ಕೇಂದ್ರಗಳು: ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳು ಮಕ್ಕಳಿಗೆ ಇಕ್ಕಟ್ಟಿನ ವಾತಾವರಣ ನಿರ್ಮಾಣ ಮಾಡಿವೆ. ಮಕ್ಕಳಿಗೆ ತನ್ನದೆ ವಾತಾವರಣ ಅಂಗನವಾಡಿ ಕೇಂದ್ರಗಳಲ್ಲಿ ಇರಬೇಕು. ಮುಖ್ಯವಾಗಿ ಗಾಳಿ, ಬೆಳಕು, ವಿಶಾಲವಾದ ಸ್ಥಳಾವಕಾಶವಿರಬೇಕು. ಆದರೆ, ನಗರದ ಬಹುತೇಕ ಬಾಡಿಗೆ ಕೇಂದ್ರಗಳಲ್ಲಿ ಆ ವಾತಾವರಣವಿಲ್ಲ.

ಬಾಡಿಗೆ ಕೇಂದ್ರಗಳು ಮಕ್ಕಳನ್ನು ಸೆಳೆಯುವ ಬದಲು ಮಕ್ಕಳಿಗೆ ಭಯ ಹುಟ್ಟಿಸುವಂತಿವೆ.
ಮಕ್ಕಳನ್ನು ಸೆಳೆಯುವಲ್ಲಿ ಖಾಸಗಿ ನರ್ಸರಿ, ಪ್ರಿಕೆ.ಜಿ ಶಾಲೆಗಳು ಯಶಸ್ಸು ಪಡೆಯುತ್ತಿವೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ನೂರಾರು ಕೋಟಿ ವ್ಯಯಿಸುತ್ತಿರುವ ಸರ್ಕಾರ ತಾಲ್ಲೂಕಿನ ಎಲ್ಲ ಅಂಗನವಾಗಿ ಕೇಂದ್ರಗಳನ್ನು ಮಕ್ಕಳ ಸ್ನೇಹಿಯಾಗಿ ಮಾರ್ಪಡಿಸಬೇಕಿದೆ.

ಕಟ್ಟಡ ನಿರ್ಮಾಣ ಪ್ರಗತಿ

ನಗರ ಭಾಗದಲ್ಲಿ ಸ್ವಂತ ಕಟ್ಟಡವಿಲ್ಲ. 19 ಕೇಂದ್ರಗಳಿಗೆ 5 ಕಟ್ಟಡಗಳಿಗೆ ನಿವೇಶನ ಗುರ್ತಿಸಲಾಗಿದೆ. ಉಳಿದಂತೆ 14 ಕೆಂದ್ರಗಳಿಗೆ ನಿವೇಶನ ಇನ್ನೂ ಲಭ್ಯವಾಗಿಲ್ಲ. ಗ್ರಾಮೀಣ ಭಾಗದಲ್ಲಿ ಸ್ವಂತ ಕಟ್ಟಡವಿಲ್ಲದ ಒಟ್ಟು 45 ಅಂಗನವಾಡಿ ಕೇಂದ್ರಗಳಿಗೆ 15ಕ್ಕೆ ನಿವೇಶನ ಲಭ್ಯವಾಗಿದ್ದರೆ 8 ಕೇಂದ್ರಗಳಿಗೆ ಲಭ್ಯವಿಲ್ಲ. 6 ಕೇಂದ್ರಗಳಿಗೆ ನಿವೇಶನ ಗುರ್ತಿಸಲಾಗಿದೆ. 16 ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ವಿದ್ಯಾ ವಸ್ತ್ರದ ತಿಳಿಸಿದ್ದಾರೆ.

ಮೂಲ ಸೌಲಭ್ಯಗಳ ಕೊರತೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಅಂಗನವಾಡಿ ಕೇಂದ್ರಗಳನ್ನು ಸರ್ಕಾರಿ ನಡೆಸುತ್ತಿದೆ. ಆದರೆ ತಾಲ್ಲೂಕಿನಲ್ಲಿ ಇರುವ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸೂಕ್ತ ಮೂಲ ಸೌಲಭ್ಯಗಳಿಲ್ಲ. ಖಾಸಗಿಯವರ ಮುಂದೆ ಅಂಗನವಾಡಿ ಕೇಂದ್ರಗಳು ಮಂಕಾಗುತ್ತಿವೆ. ಆದ್ದರಿಂದ ತಾಲ್ಲೂಕಿನಾದ್ಯಂತ ಅಂಗನವಾಡಿ ಕೇಂದ್ರಗಳನ್ನು ಮಕ್ಕಳ ಸ್ನೇಹಿಯಾಗಿ ರೂಪಿಸುವ ಕೆಲಸವನ್ನು ಆದ್ಯತೆ ಮೇರೆಗೆ ಸರ್ಕಾರ ತೆಗೆದುಕೊಳ್ಳಬೇಕು. ರಮಾಮಣಿ ಗೃಹಿಣಿ ಹೊಸಕೋಟೆ

ದೊಡ್ಡ ಹುಲ್ಲೂರಿನಲ್ಲಿ ವಿಶಾಲವಾಗಿರುವ ಅಂಗನವಾಡಿ ಕೇಂದ್ರ.
ದೊಡ್ಡ ಹುಲ್ಲೂರಿನಲ್ಲಿ ವಿಶಾಲವಾಗಿರುವ ಅಂಗನವಾಡಿ ಕೇಂದ್ರ.
ಹೊಸಕೋಟೆ ನಗರದಲ್ಲಿ ಬಾಡಿಗೆ ಮನೆಯಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರ.
ಹೊಸಕೋಟೆ ನಗರದಲ್ಲಿ ಬಾಡಿಗೆ ಮನೆಯಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT