ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಮುಚ್ಚುವ ಸ್ಥಿತಿ ತಲುಪಿದ ಮಹಿಳಾ ಪದವಿ ಕಾಲೇಜು

ದೊಡ್ಡಬಳ್ಳಾಪುರ: ಮೂಲ ಸೌಕರ್ಯ ಕೊರತೆ । ಕುಸಿಯುತ್ತಿದೆ ವಿದ್ಯಾರ್ಥಿನಿಯರ ಸಂಖ್ಯೆ
Published 23 ಜನವರಿ 2024, 3:42 IST
Last Updated 23 ಜನವರಿ 2024, 3:42 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರ ಮತ್ತು ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಪದವಿ ಶಿಕ್ಷಣ ನೀಡುವ ಉದ್ದೇಶದಿಂದ 2014ರಲ್ಲಿ ನಗರದ ಸರ್ಕಾರಿ ಪದವಿ ಪೂರ್ವ (ಪ್ರೌಢ ಶಾಲಾ ವಿಭಾಗ) ಕಾಲೇಜು ಕಟ್ಟಡದಲ್ಲಿ ಆರಂಭವಾದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮೂಲ ಸೌಕರ್ಯ ಕೊರತೆಯಿಂದ ಬಾಗಿಲು ಮುಚ್ಚವ ಹಂತಕ್ಕೆ ಬಂದು ನಿಂತಿದೆ.

ನಗರದ ಹೊರವಲಯದ ಮಾದಗೊಂಡನಹಳ್ಳಿ ರಸ್ತೆಯಲ್ಲಿ ಸುಸಜ್ಜಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಆದರೆ ನಗರದಿಂದ ದೂರ ಹೋಗುವುದು ಕಷ್ಟ ಅನ್ನುವ ದೃಷ್ಠಿಯಿಂದ ಹೆಣ್ಣು ಮಕ್ಕಳಿಗೆ ಪ್ರತ್ಯೇಕಾಗಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ನಗರದ ಹೃದಯ ಭಾಗದಲ್ಲಿ ಸ್ಥಾಪಿಸಲಾಯಿತು.

ಪ್ರಾರಂಭದ ದಿನಗಳಲ್ಲಿ ಸ್ಥಳದ ಕೊರತೆಯಿಂದ ಪ್ರೌಢ ಶಾಲಾ ಕಟ್ಟಡದ ಕೆಲವು ಕೊಠಡಿಗಳಲ್ಲೇ ತರಗತಿ ಆರಂಭಿಸಲಾಯಿತು. ಪ್ರಾರಂಭದ ವರ್ಷದಲ್ಲಿ 214 ಜನ ವಿದ್ಯಾರ್ಥಿನಿಯರು ದಾಖಲಾಗಿದ್ದರು. ಮಹಿಳಾ ಕಾಲೇಜಿನಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಪದವಿ ತರಗತಿಗಳು ಪ್ರಾರಂಭವಾಗಿದ್ದವು. ಆದರೆ ವರ್ಷಗಳು ಕಳೆಯುತ್ತಿದ್ದಂತೆ ಕೊಠಡಿಗಳ ಕೊರತೆ, ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರು, ಪದವಿ ತರಗತಿಗಳಿಗೆ ಅಗತ್ಯ ಗ್ರಂಥಾಲಯ, ಪ್ರಯೋಗಾಲಯ ಸೇರಿದಂತೆ ಯಾವುದೂ ಇಲ್ಲದೆ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತ ಬಂದಿದ್ದು, ಈಗ 123 ಜನ ವಿದ್ಯಾರ್ಥಿನಿಯರು ಇದ್ದಾರೆ.

ಗುಣಮಟ್ಟದ ಉಪನ್ಯಾಸಕರು ಇದ್ದರೂ ಸಹ ಈ ಅವ್ಯಸ್ಥೆಯಿಂದ ವಿದ್ಯಾರ್ಥಿನಿಯರ ದಾಖಲಾತಿ ಕುಸಿಯುತ್ತಿದೆ. ಕಾಲೇಜಿನಲ್ಲಿ ಸೌಲಭ್ಯ ಕೊರತೆ ಹಾಗೂ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆ ಇರುವುದರಿಂದ ಯಾವ ಸಂದರ್ಭದಲ್ಲಿ ಕಾಲೇಜು ಬಾಗಿಲು ಮುಚ್ಚುತ್ತದೆಯೋ ಎನ್ನುವ ಆತಂಕದಲ್ಲಿ ಉಪನ್ಯಾಸಕರು ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ.

ಧೂಳು ಹಿಡಿಯುತ್ತಿದೆ ಕಂಪ್ಯೂಟರ್‌ಗಳು: ಕಾಲೇಜಿಗೆ ಸರ್ಕಾರದಿಂದ ಮಂಜೂರಾಗಿರುವ ಉಪನ್ಯಾಸಕರ ಹುದ್ದೆಗಳು 25. ಇದರಲ್ಲಿ ಈಗ ಇರುವುದು ಆರು ಕಾಯಂ ಉಪನ್ಯಾಸಕರು, ಎಂಟು ಅತಿಥಿ ಉಪನ್ಯಾಸಕರು. ಗ್ರಂಥಾಲಯ, ಗ್ರಂಥಪಾಲಕ, ದೈಹಿಕ ಶಿಕ್ಷಣ ನಿರ್ದೇಶಕರು ಇಲ್ಲ. ಖಾಸಗಿ ಕಂಪನಿಯೊಂದು ಕಂಪ್ಯೂಟರ್‌ಗಳನ್ನು ಕಾಲೇಜಿಗೆ ದಾನವಾಗಿ ನೀಡಿದೆ. ಆದರೆ ಇವುಗಳನ್ನು ವಿದ್ಯಾರ್ಥಿಗಳು ಉಪಯೋಗಿಸಲು ಅಗತ್ಯ ಮಾರ್ಗದರ್ಶಕರು ಹಾಗೂ ಕೊಠಡಿಗಳು ಇಲ್ಲದೆ ಹಲವಾರು ವರ್ಷಗಳಿಂದಲು ಬಾಕ್ಸ್‌ಗಳಲ್ಲೇ ಧೂಳು ಹಿಡಿಯುತ್ತಿದೆ.

ಕಾಲೇಜು ಆರಂಭವಾಗಿ ದಶಕ ಕಳೆದಿದ್ದರೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅಭಿವೃದ್ಧಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆದ್ಯತೆ ನೀಡದೆ ಇರುವುದೇ ಕಾಲೇಜಿನ ದುಸ್ಥಿತಿಗೆ ಕಾರಣ ಎನ್ನುತ್ತಾರೆ ಸಾರ್ವಜನಿಕರು.

ದೊಡ್ಡಬಳ್ಳಾಪುರದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಟ್ಟಡದ ಮೇಲ್ಛಾವಣಿ ಸಿಮೆಂಟ್‌ ಕಳಚಿ ಬಿದ್ದಿರುವುದು
ದೊಡ್ಡಬಳ್ಳಾಪುರದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಟ್ಟಡದ ಮೇಲ್ಛಾವಣಿ ಸಿಮೆಂಟ್‌ ಕಳಚಿ ಬಿದ್ದಿರುವುದು

ಬಳಕೆಯಾಗದ ₹2ಕೋಟಿ ಅನುದಾನ

2014ರಲ್ಲಿ ರಾಜ್ಯದಲ್ಲಿ ಜಿಲ್ಲೆಗೆ ಒಂದರಂತೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸ್ಥಾಪನೆ ಮಾಡಲಾಯಿತು. ಇದೇ ಸಮಯದಲ್ಲೇ ಚಿಕ್ಕಬಳ್ಳಾಪುರ ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರಾರಂಭವಾದ ಕಾಲೇಜುಗಳು ಸುಸಜ್ಜಿತವಾದ ಕಟ್ಟಡಗಳನ್ನು ಹೊಂದಿದ್ದು ‘ನ್ಯಾಕ್’ ಮಾನದಂಡಗಳಿಗೆ ಅನುಗುಣವಾಗಿ ಸೌಲಭ್ಯ ಪಡೆದಿವೆ. ಆದರೆ ನಮ್ಮಲ್ಲಿ ₹2 ಕೋಟಿ ಅನುದಾನ ಇದ್ದರೂ ಕಾಲೇಜು ಕಟ್ಟಡಕ್ಕೆ ಅಗತ್ಯ ಸ್ಥಳ ನೀಡದೆ ಇರುವುದೇ ಕಾಲೇಜು ಮೂಲ ಸೌಕರ್ಯ ವಂಚಿತವಾಗಿದೆ. ಇದರಿಂದ ‘ನ್ಯಾಕ್‌’ ಅರ್ಹತೆಗಳನ್ನು ಪೂರೈಸಲು ಕಷ್ಟವಾಗಿದೆ ಎನ್ನುತ್ತಾರೆ ಕಾಲೇಜಿನ ಉಪನ್ಯಾಸಕರು.

ಜಾಗ ಗುರುತಿಸಿ ಕೊಡಿ

ಹೆಣ್ಣು ಮಕ್ಕಳ ಕಾಲೇಜಿಗೆ ನಗರದ ಹೃದಯ ಭಾಗದಲ್ಲೇ ಇರುವ ತೋಟಗಾರಿಕೆ ಇಲಾಖೆ ಸ್ಥಳ ಬಳಕೆಯಾಗದೆ ಪಾಳುಬಿದ್ದಿರುವ ತಿಮ್ಮಣ್ಣನ ಕುಂಟೆಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಸವ ಭವನ ಸಮೀಪದ ಸರ್ಕಾರಿ ಸ್ಥಳ ಇವುಗಳಲ್ಲಿ ಯಾವುದಾದರು ಒಂದನ್ನು ಕಾಲೇಜು ಕಟ್ಟಡ ನಿರ್ಮಾಣಕ್ಕೆ ನೀಡುವಂತೆ ಹಲವಾರು ಬಾರಿ ಲಿಖಿತವಾಗಿ ಮನವಿಗಳನ್ನು ನೀಡಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಒಂದಲ್ಲಾ ಒಂದು ನೆಪಗಳನ್ನು ಹೇಳುತ್ತಲೇ ಬರುತ್ತಿದ್ದಾರೆ. ಈ ನೆಪಗಳ ಕಾರಣದಿಂದಾಗಿ ಕಾಲೇಜು ದಾಖಲಾತಿ ಇಲ್ಲದೆ ಮುಚ್ಚಿವ ಸ್ಥಿತಿಗೆ ಬಂದು ನಿಂತಿದೆ ಎನ್ನುವುದು ಇಲ್ಲಿನ ಉಪನ್ಯಾಸಕರ ಅಳಲು.

ವಿದ್ಯಾರ್ಥಿನಿಯ ಅಳಲು

ಸೌಕರ್ಯ ಒದಗಿಸಿ: ಕೋ ಎಜುಕೇಷನ್‌ ಇರುವ ಕಾಲೇಜಿಗೆ ಪೋಷಕರು ಹೆಣ್ಣು ಮಕ್ಕಳನ್ನು ಕಳುಹಿಸಲು ಆತಂಕಪಡುವ ವಾತಾವರಣ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಇದೆ. ಇದರಿಂದ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುವುದರಿಂದ ವಂಚಿತರಾಗಬಾರದು. ಹಾಗಾಗಿ ಮಹಿಳಾ ಕಾಲೇಜಿಗೆ ಅಗತ್ಯ ಇರುವ ಮೂಲ ಸೌಲಭ್ಯ ಕಲ್ಪಿಸಬೇಕು. ಎ.ಅಂಭುಜ ವಿದ್ಯಾರ್ಥಿನಿ ಕಲಿಕೆಗಿಲ್ಲ ಪೂರಕ ಪರಿಸರ ಪಠ್ಯಗಳು ಉಪನ್ಯಾಸಕರು ಬದಲಾಗಿದ್ದಾರೆ ಹೊರತು ಪದವಿ ಕಾಲೇಜಿನಲ್ಲಿ ಇರಬೇಕಾದ ಯಾವುದೇ ವಾತಾವರಣವು ಇಲ್ಲದಾಗಿದೆ. ನಾವು ಪ್ರೌಢ ಶಾಲೆಯಲ್ಲಿ ಕಲಿಯುತ್ತಿದ್ದೇವೆ ಎನ್ನುವ ಭಾವೆನೆ ಇದೆಯೆ ಹೊರತು ಪದವಿ ಕಾಲೇಜಿನ ಕಲಿಗೆ ಅಗತ್ಯ ಇರುವ ಯಾವುದೇ ಪೂರಕ ಪರಿಸರವು ಇಲ್ಲದಾಗಿದೆ.

-ಎ.ನಂದಿನಿ  ವಿದ್ಯಾರ್ಥಿನಿ

ಹಂದಿ ಗೂಡಿನಂತಹ ಕೊಠಡಿಗಳು

ನಮಗೆ ಯಾವುದೇ ರೀತಿಯ ಹೈಟೆಕ್‌ ಸೌಲಭ್ಯಗಳು ಇಲ್ಲದೇ ಇದ್ದರು ಬೇಸರ ಇಲ್ಲ. ಕನಿಷ್ಠ ಶೌಚಾಲಯ ಗಾಳಿಬೆಳಕು ಬರುವಂತಹ ಕಿಟಕಿಗಳ ಇರುವ ಕೊಠಡಿಗಳ ಇಲ್ಲದಾಗಿವೆ. ಹಂದಿ ಗೂಡಿನಂತಹ ಕೊಠಡಿಗಳ ಪರಿಸರದಲ್ಲಿ ಕುಳಿತು ಕಲಿಯುವುದಾರು ಏನು ? ಸ್ನೇಹಿತೆಯರು ಹೊಸದಾಗಿ ದಾಖಲಾಗಲು ಅಭಿಪ್ರಾಯ ಕೇಳಿದರೆ ಸೌಲಭ್ಯ ಇಲ್ಲ ಗುಣಮಟ್ಟದ ಉಪನ್ಯಾಸಕರಿದ್ದಾರೆ ಎನುತ್ತಾರೆ.

-ಎಂ.ಪ್ರೇಮ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT