ಬೆಂಗಳೂರು: ‘ನೊಂದವರಿಗೆ ನ್ಯಾಯ ಸಿಗಲಿದೆ ಎಂಬ ಭರವಸೆಯನ್ನು ವಕೀಲರು ಮೂಡಿಸಬೇಕು’ ಎಂದು ಆಂಧ್ರಪ್ರದೇಶದ ರಾಜ್ಯಪಾಲ ಎಸ್.ಅಬ್ದುಲ್ ನಜೀರ್ ಸಲಹೆ ನೀಡಿದರು.
ರಾಮಯ್ಯ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ಕಾಲೇಜಿನ ಬೆಳ್ಳಿ ಮಹೋತ್ಸವದಲ್ಲಿ ಅವರು ಮಾತನಾಡಿದರು.
‘ಬಡವರ ಪರವಾಗಿ ವಕೀಲರು ವಕಾಲತ್ತು ವಹಿಸಬೇಕು. ಕಾನೂನು ಎಲ್ಲರಿಗೂ ಒಂದೇ ಎಂಬ ಅಭಿಪ್ರಾಯವನ್ನು ಸಾರ್ವಜನಿಕರಲ್ಲಿ ಮೂಡಿಸಬೇಕು. ಕಾನೂನು ಸೇವಾ ಪ್ರಾಧಿಕಾರಕ್ಕೆ ಮತ್ತಷ್ಟು ಬಲ ತುಂಬಬೇಕು’ ಎಂದು ಕರೆ ನೀಡಿದರು.
‘ಈಗಿನ ಕಾಲಘಟ್ಟದಲ್ಲಿ ಮಹಿಳೆಯರು ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಲೈಂಗಿಕ ಕಿರುಕುಳದ ಪ್ರಕರಣಗಳೂ ಹೆಚ್ಚುತ್ತಿವೆ. ನೊಂದ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡಬೇಕು. ಅವರಲ್ಲಿ ನಂಬಿಕೆ ಮೂಡಿಸಿದರೆ, ಕಾನೂನಿನ ಮೇಲೆ ಇತರರಿಗೂ ನಂಬಿಕೆ ಹೆಚ್ಚಾಗುತ್ತದೆ’ ಎಂದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮಾತನಾಡಿ, ‘ರಾಜ್ಯದಲ್ಲಿರುವ ಕಾನೂನು ಸೇವಾ ಪ್ರಾಧಿಕಾರವು ಜನರಿಗೆ ಹತ್ತಿರವಾಗಿ ಕೆಲಸ ಮಾಡಬೇಕು. ನ್ಯಾಯಮೂರ್ತಿಗಳು ಪ್ರಾಧಿಕಾರದ ಮೇಲ್ವಿಚಾರಣೆ ನಡೆಸಬೇಕು. ಜಿಲ್ಲೆ, ತಾಲ್ಲೂಕು ಪ್ರಾಧಿಕಾರದಲ್ಲಿ ಏನು ನಡೆಯುತ್ತಿದೆ. ಜನರಿಂದ ಹಣ ವಸೂಲಿ ಮಾಡಲಾಗುತ್ತಿದೆಯೇ ಎಂಬುದರ ಕುರಿತು ಮೇಲ್ವಿಚಾರಣೆ ನಡೆಸಬೇಕು’ ಎಂದು ಹೇಳಿದರು.
ರಾಮಯ್ಯ ಕಾನೂನು ಕಾಲೇಜಿನ ನಿರ್ದೇಶಕ ಎಂ.ಆರ್.ಆನಂದರಾಮ್ ಮಾತನಾಡಿ, ‘1995ರಲ್ಲಿ ಕಾನೂನು ಕಾಲೇಜು ಆರಂಭ ಮಾಡಿದ್ದರ ಉದ್ದೇಶವೇ ಸಮಾಜಕ್ಕೆ ಉತ್ತಮ ವಕೀಲರನ್ನು ಸೃಷ್ಟಿಸುವುದಾಗಿತ್ತು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ’ ಎಂದು ಹೇಳಿದರು.
ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮಾತನಾಡಿ, ‘ಯಶಸ್ಸು ಸಾಧಿಸಲು ಅಡ್ಡದಾರಿಗಳು ಇರುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟರೆ ಭವಿಷ್ಯ ಉತ್ತಮವಾಗಿರಲಿದೆ’ ಎಂದು ಹೇಳಿದರು.
ಗೋಕುಲ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಆರ್.ಜಯರಾಂ ಮಾತನಾಡಿ, ‘ನನ್ನ ತಂದೆ ಬಡ ಕುಟುಂಬಗಳ ಪ್ರತಿಭಾನ್ವಿತ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಹಂಬಲದಿಂದ ಶಿಕ್ಷಣ ಸಂಸ್ಥೆ ಆರಂಭಿಸಿದ್ದರು. ಇಂದು ಒಂದೇ ಕ್ಯಾಂಪಸ್‌ನಲ್ಲಿ 21ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳಿವೆ’ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ, ಹೈಕೋರ್ಟ್ ನ್ಯಾಯಮೂರ್ತಿ ಜಿ.ನರೇಂದ್ರ, ಗೋಕುಲ ಎಜುಕೇಶನ್ ಫೌಂಡೇಷನ್ ಉಪಾಧ್ಯಕ್ಷ ಎಂ.ಆರ್.ಸೀತಾರಾಂ ಇದ್ದರು.
ನ್ಯಾಯಾಲಯ ಎಂದರೆ ಜನರಲ್ಲಿ ಇನ್ನೂ ಭಯವಿದೆ. ಈ ಭಯ ದೂರ ಮಾಡಬೇಕು. ಅಲ್ಲದೇ ಸಾಮಾನ್ಯರಲ್ಲಿ ಕಾನೂನು ಅರಿವು ಮೂಡಿಸಬೇಕು.ಎಸ್.ಅಬ್ದುಲ್ ನಜೀರ್ ರಾಜ್ಯಪಾಲ ಆಂಧ್ರಪ್ರದೇಶ
ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ದೊರೆಯಬೇಕಾದರೆ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಧೀಶರಾಗಬೇಕು.ಬಿ.ವಿ.ನಾಗರತ್ನ ನ್ಯಾಯಮೂರ್ತಿ ಸುಪ್ರೀಂ ಕೋರ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.