ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್‌: ಮಳೆ ಬಂದಾಗ ಕೆರೆಯಾಗುವ ಕ್ರೀಡಾಂಗಣ

Published 11 ಜೂನ್ 2023, 23:30 IST
Last Updated 11 ಜೂನ್ 2023, 23:30 IST
ಅಕ್ಷರ ಗಾತ್ರ

ಆನೇಕಲ್ : ತಾಲ್ಲೂಕು ಕೇಂದ್ರವಾದ ಆನೇಕಲ್ ಪಟ್ಟಣದಲ್ಲಿ ಸುಸಜ್ಜಿತ ಕ್ರೀಡಾಂಗಣ, ಉದ್ಯಾನ ಪ್ರಾಥಮಿಕ ಆದ್ಯತೆಯಾಗಿದೆ. ಆದರೆ ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಕರು ಪಟ್ಟಣದ ಎಎಸ್‌ಬಿ ಕಾಲೇಜು ಮುಂಭಾಗದ ಹೊಸ ಮಾಧ್ಯಮಿಕ ಶಾಲೆ ಮೈದಾನದಲ್ಲಿ ಸೌಲಭ್ಯಗಳ ಕೊರತೆ ನಡುವೆಯೂ ಕ್ರೀಡೆ, ಕರಾಟೆ, ವಾಯುವಿಹಾರ ನಡೆಸುತ್ತಿದ್ದಾರೆ.

ತಾಲ್ಲೂಕು ಕ್ರೀಡಾಂಗಣ ಚಿಕ್ಕಕೆರೆ ಮೈದಾನದಲ್ಲಿ ನಿರ್ಮಾಣಗೊಂಡು ದಶಕಗಳೇ ಕಳೆದಿವೆ. ಆದರೆ, ಇದುವರೆಗೂ ಅದು ಟೇಕಾಫ್‌ ಆಗಲೇ ಇಲ್ಲ. ಮಳೆ ಬಂದಾಗ ಕೆರೆಯಾಗುತ್ತದೆ. ಉಳಿದ ಸಮಯದಲ್ಲಿ ದನಕರು ಮೇಯುವ ಹುಲ್ಲುಗಾವಲು ಆಗುತ್ತದೆ. ಹಾಗಾಗಿ ಸದ್ಯ ಪಟ್ಟಣದ ಕೇಂದ್ರ ಭಾಗದಲ್ಲಿರುವ ಹೊಸ ಮಾಧ್ಯಮಿಕ ಶಾಲೆ ಆಟದ ಮೈದಾನಕ್ಕೆ ಆಧುನಿಕ ಸೌಲಭ್ಯ ಕಲ್ಪಿಸಿ ಕ್ರೀಡಾ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ ಮಾಡಬೇಕು ಎಂಬುದು ಪಟ್ಟಣದ ಜನರ ಬಹುದಿನಗಳ ಬೇಡಿಕೆಯಾಗಿದೆ.

ಆನೇಕಲ್‌ನ ಹೊಸ ಮಾಧ್ಯಮಿಕ ಶಾಲೆ ನೂರು ವರ್ಷಗಳ ಇತಿಹಾಸ ಹೊಂದಿದೆ. ಇಲ್ಲಿಯೇ ಕೆಪಿಎಸ್‌ ಶಾಲೆ ಸಹ ಕಾರ್ಯನಿರ್ವಹಿಸುತ್ತಿದೆ. ಹೆಣ್ಣು ಮಕ್ಕಳ ಸರ್ಕಾರಿ ಪ್ರೌಢಶಾಲೆ ಇದೆ. ಎಎಸ್‌ಬಿ ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಸೇರಿದಂತೆ ನಾಲ್ಕೈದು ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಕಾಲೇಜುಗಳು ಹೊಸ ಮಾಧ್ಯಮಿಕ ಶಾಲೆ ಮೈದಾನಕ್ಕೆ ಸಮೀಪದಲ್ಲಿದೆ. ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಿಸಿ ಸೌಲಭ್ಯ ನೀಡಿದರೆ ಈ ಸರ್ಕಾರಿ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇಲ್ಲಿಯ ಸೌಲಭ್ಯ ಬಳಸಿಕೊಳ್ಳಲು ಅನುಕೂಲವಾಗಲಿದೆ. ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬಹುದಾಗಿದೆ.

ಹೊಸಮಾಧ್ಯಮಿಕ ಶಾಲೆಗೆ ಸೇರಿದ 4 ಎಕರೆ ಜಾಗವಿದ್ದು 3 ಎಕರೆ ಮೈದಾನವಾಗಿದೆ. ಈ ಮೂರು ಎಕರೆ ಪ್ರದೇಶ ವೈಜ್ಞಾನಿಕವಾಗಿ ಯೋಜಿಸಿ ಕಬಡ್ಡಿ, ಕೊಕ್ಕೊ, ಬ್ಯಾಸ್ಕೆಟ್‌ ಬಾಲ್‌ ಸೇರಿದಂತೆ ವಿವಿಧ ಕ್ರೀಡಾ ಕೋರ್ಟ್‌, ರನ್ನಿಂಗ್‌ ಟ್ರಾಕ್‌ ಸೇರಿದಂತೆ ಮಿನಿ ಕ್ರೀಡಾಂಗಣ ರೂಪಿಸಲು ಅವಕಾಶಗಳಿವೆ. ಸರ್ಕಾರದ ಜತೆಗೆ ಖಾಸಗಿ ಕಂಪನಿಗಳ ನೆರವು ಪಡೆದು ಹೈಟೆಕ್‌ ಕ್ರೀಡಾಂಗಣ ನಿರ್ಮಿಸುವ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಪಟ್ಟಣದ ಜನರಿಗೆ ಕೊಡುಗೆ ನೀಡಲು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಶಾಸಕರು, ಸಂಸದರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿ ಬಳಕೆ ಮಾಡಿ ಮೈದಾನಕ್ಕೆ ಹೊಸ ರೂಪ ನೀಡಲು ಶ್ರಮಿಸಬೇಕು ಎಂಬುದು ಕ್ರೀಡಾಸಕ್ತರ ಒತ್ತಾಸೆಯಾಗಿದೆ.

ರಸ್ತೆಯೇ ಪಾರ್ಕಿಂಗ್‌

ಪ್ರತಿದಿನ ಬೆಳಿಗ್ಗೆ ಹೊಸ ಮಾಧ್ಯಮಿಕ ಶಾಲೆ ಆಟದ ಮೈದಾನಕ್ಕೆ ವಾಯುವಿಹಾರ, ಫುಟ್‌ಬಾಲ್‌, ಕ್ರಿಕೆಟ್‌,ಕರಾಟೆ ಅಭ್ಯಾಸಕ್ಕಾಗಿ 500-600 ಮಂದಿ ಬರುತ್ತಾರೆ. ಭಾನುವಾರ ಮತ್ತು ರಜೆ ದಿನಗಳಂದು ಒಂದು ಸಾವಿರಕ್ಕೂ ಹೆಚ್ಚು ಮಂದಿ ಸೇರುತ್ತಾರೆ. ಇವರ ವಾಹನಗಳಿಗೆ ಸಮರ್ಪಕ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದಿರುವುದರಿಂದ ಅತ್ತಿಬೆಲೆ ರಸ್ತೆಯೇ ಪಾರ್ಕಿಂಗ್‌ ಆಗಿರುತ್ತದೆ. ರಸ್ತೆ ಎರಡು ಬದಿಗಳಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳು ನಿಂತಿರುತ್ತವೆ.

ಶಿಥಿಲಗೊಂಡಿರುವ ನೀರಿನ ಟ್ಯಾಂಕ್‌

ಹೊಸ ಮಾಧ್ಯಮಿಕ ಶಾಲೆ ಮೈದಾನದ ಒಂದು ಭಾಗದಲ್ಲಿ ಓವರ್‌ಹೆಡ್‌ ಟ್ಯಾಂಕ್‌ ಇದ್ದು ಈ ಟ್ಯಾಂಕ್‌ ಶಿಥಿಲಗೊಂಡಿದೆ. ಇದನ್ನು ನೆಲಸಮಗೊಳಿಸುವ ಅವಶ್ಯ ಇದೆ. ಇಲ್ಲಿಯ ಜಾಗವನ್ನು ಮೈದಾನದಲ್ಲಿ ಬಳಸಿಕೊಳ್ಳುವಂತಾಗಬೇಕು.

ಶೌಚಾಲಯವಾದ ಮೈದಾನ

ಹೊಸ ಮಾಧ್ಯಮಿಕ ಶಾಲೆ ಮೈದಾನದ ಒಂದು ಭಾಗದಲ್ಲಿ ಹುಲ್ಲು ಬೆಳೆದಿದೆ. ಹಾವುಗಳು ಓಡಾಡುವಂತಾಗಿದೆ. ತಾಲ್ಲೂಕು ಪಂಚಾಯಿತಿ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರು ಈ ಭಾಗವನ್ನು ಶೌಚಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಸುತ್ತಲೂ ಸುಸಜ್ಜಿತ ಕಾಂಪೌಂಡ್‌ ಮತ್ತು ಶಾಲೆ ಹಳೆ ಕಟ್ಟಡಗಳನ್ನು ತೆರವುಗೊಳಿಸಿ ವಿಶಾಲ ಪ್ರದೇಶದಲ್ಲಿ ಮೈದಾನವನ್ನು ಮಿನಿ ಕ್ರೀಡಾಂಗಣವಾಗಿ ಹೈಟೆಕ್‌ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಪಡಿಸುವ ಅವಶ್ಯ ಇದೆ.

ಕ್ರೀಡಾಂಗಣ ಅಭಿವೃದ್ಧಿಪಡಿಸಿ

‘ಆನೇಕಲ್‌ ಪಟ್ಟಣದಲ್ಲಿ ಹಲವು ಮಂದಿ ಕ್ರೀಡಾಸಕ್ತ ಯುವಕರು ವಿದ್ಯಾರ್ಥಿಗಳಿದ್ದಾರೆ. ಇವರಿಗೆ ತರಬೇತಿ ಅಭ್ಯಾಸಕ್ಕಾಗಿ ಸುಸಜ್ಜಿತ ಕ್ರೀಡಾಂಗಣದ ಅವಶ್ಯ ಇದೆ. ಆನೇಕಲ್‌ ಹೊಸ ಮಾಧ್ಯಮಿಕ ಶಾಲೆ ಮೈದಾನ ಪಟ್ಟಣದ ಕೇಂದ್ರ ಭಾಗದಲ್ಲಿದ್ದು ಎಲ್ಲರಿಗೂ ಅನುಕೂಲವಾಗಿದೆ. ಹಾಗಾಗಿ ಈ ಮೈದಾನ ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸಬೇಕು‘ ಹರಿಣಿ ಕರಾಟೆ ತರಬೇತಿಗಾರ್ತಿ ನಿಯಮಿತ ಮಾರ್ಗದರ್ಶನ ಅವಶ್ಯ ‘ಆನೇಕಲ್‌ ತಾಲ್ಲೂಕು ರಾಷ್ಟ್ರ ರಾಜ್ಯಮಟ್ಟದಲ್ಲಿ ಕ್ರೀಡೆಗಳಲ್ಲಿ ಗುರುತಿಸಿಕೊಂಡಿದೆ. ನಿಯಮಿತ ತರಬೇತಿ ಮಾರ್ಗದರ್ಶನ ಸಿಕ್ಕರೆ ಮತ್ತಷ್ಟು ಮಂದಿ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಕಾರ ನೀಡಿ ಸುಸಜ್ಜಿತ ಕ್ರೀಡಾಂಗಣದಲ್ಲಿ ವಿವಿಧ ಕೋರ್ಟ್‌ ನಿರ್ಮಿಸಬೇಕು” ಜಿ.ಶಾಲಿನಿ ರಾಷ್ಟ್ರೀಯ ಕ್ರೀಡಾಪಟು

 ಕರಾಟೆ ಅಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿಗಳು
 ಕರಾಟೆ ಅಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿಗಳು
ಮೈದಾನದ ಮುಂಭಾಗದ ರಸ್ತೆ ವಾಹನಗಳ ಪಾರ್ಕಿಂಗ್‌ ಆಗಿದೆ
ಮೈದಾನದ ಮುಂಭಾಗದ ರಸ್ತೆ ವಾಹನಗಳ ಪಾರ್ಕಿಂಗ್‌ ಆಗಿದೆ
ಮೈದಾನದಲ್ಲಿ ಬೆಳೆದಿರುವ ಗಿಡ ಗಂಟಿ
ಮೈದಾನದಲ್ಲಿ ಬೆಳೆದಿರುವ ಗಿಡ ಗಂಟಿ
ಮೈದಾನದಲ್ಲಿ ಶಿಥಿಲಾವಸ್ಥೆಯಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌
ಮೈದಾನದಲ್ಲಿ ಶಿಥಿಲಾವಸ್ಥೆಯಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT