ಆನೇಕಲ್ : ತಾಲ್ಲೂಕಿನ ಚಂದಾಪುರದಲ್ಲಿ ಆನೇಕಲ್ ಪೊಲೀಸ್ ಉಪವಿಭಾಗದಿಂದ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ವಿಶ್ವಾಸ ಮೂಡಿಸುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಪೊಲೀಸ್ ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ ಅವರ ನೇತೃತ್ವದಲ್ಲಿ ವಿವಿಧ ಠಾಣೆಗಳ ಪೊಲೀಸರು ಗಸ್ತು ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಎಸ್.ಪಿ. ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆನೇಕಲ್ ತಾಲ್ಲೂಕಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಅಪರಾಧ ಪ್ರಕರಣ ತಡೆಯಲು ಸಾರ್ವಜನಿಕರ ಸಹಕಾರ ಅಗತ್ಯ. ಈ ಹಿನ್ನೆಲೆಯಲ್ಲಿ ಗಸ್ತು ನಡೆಸಿ ಜನರಲ್ಲಿ ವಿಶ್ವಾಸ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾರ್ವಜನಿಕರು ಪೊಲೀಸರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು, ಘಟನೆಗಳು ಕಂಡು ಬಂದಲ್ಲಿ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮಾಹಿತಿದಾರರ ಬಗೆಗಿನ ಮಾಹಿತಿಯನ್ನು ಎಲ್ಲಿಯೂ ಹಂಚಿಕೊಳ್ಳುವುದಿಲ್ಲ ಗುಪ್ತವಾಗಿಡಲಾಗುವುದು. ಹಾಗಾಗಿ ಸಾರ್ವಜನಿಕರು ಆತಂಕ, ಭಯವಿಲ್ಲದೇ ಮಾಹಿತಿ ನೀಡಬೇಕು ಎಂದರು.
ಅಪರಾಧ ಪ್ರಕರಣ ತಡೆಯಲು ರಸ್ತೆ ಮತ್ತು ಅಂಗಡಿಗಳ ಮುಂದೆ ಸಿಸಿ ಕ್ಯಾಮರ ಅಳವಡಿಕೆ ಮಾಡಬೇಕು. ಈ ಬಗ್ಗೆ ಪೊಲೀಸರು ಅಂಗಡಿ ಮಾಲೀಕರಿಗೆ ಮನವಿ ಮಾಡಿ ಪ್ರತಿಯೊಬ್ಬರು ಸಿಸಿ ಕ್ಯಾಮರ ಅಳವಡಿಸಿಕೊಳ್ಳುವಂತೆ ಕೋರಲಾಗುವುದು. ನಿಯಾಮಾನುಸಾರ ಸಾರ್ವಜನಿಕ ಭದ್ರತೆಯ ದೃಷ್ಠಿಯಿಂದ ಸಿಸಿ ಕ್ಯಾಮರಾ ಅಳವಡಿಸಬೇಕಾಗಿದೆ. ಈ ಸಂಬಂಧ ನೊಟೀಸ್ ನೀಡಲಾಗುವುದು ಎಂದರು.
ಠಾಣೆಗಳಿಗೆ ಸೌಲಭ್ಯ ಕಲ್ಪಿಸಲು ಪ್ರಸ್ತಾವನೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 17 ಪೊಲೀಸ್ ಠಾಣೆ ಗುರುತಿಸಲಾಗಿದ್ದು, ಈ ಠಾಣೆಗಳಲ್ಲಿ ಬೆಂಗಳೂರು ನಗರದ ಠಾಣೆಗಳಲ್ಲಿರುವ ಸಿಬ್ಬಂದಿಯ ಮಾದರಿಯಲ್ಲಿ ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡಿ ಠಾಣೆಗಳಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಎಸ್.ಪಿ ತಿಳಿಸಿದರು.
ಚಂದಾಪುರ ಪುರಸಭೆ ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿ ಹಾಕಿರುವ ಜಾಹಿರಾತು ಫಲಕಗಳು ಅಪಘಾತಗಳಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಪುರಸಭೆಯೊಂದಿಗೆ ಚರ್ಚಿಸಿ ಅನಗತ್ಯ ಫಲಕಗಳನ್ನು ತೆರವುಗೊಳಿಸಲಾಗುವುದು ಎಂದು ಎಸ್.ಪಿ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಪೊಲೀಸ್ ಎಎಸ್ಪಿ ಎಂ.ಎಲ್.ಪುರುಷೋತ್ತಮ್, ಡಿವೈಎಸ್ಪಿ ಮೋಹನ್ ಕುಮಾರ್, ಇನ್‌ಸ್ಪೆಕ್ಟರ್‌ಗಳಾದ ಬಿ.ಐ.ರೆಡ್ಡಿ, ನವೀನ್‌ಕುಮಾರ್, ರಾಘವೇಂದ್ರ, ಮಹಾಜನ್ ಇದ್ದರು.
ಸಂಚಾರ ದಟ್ಟಣೆಗೆ ಕ್ರಮ
ಆನೇಕಲ್ ತಾಲ್ಲೂಕಿನ ಚಂದಾಪುರ ವೃತ್ತದಲ್ಲಿ ಪ್ರತಿದಿನ ವಾಹನ ದಟ್ಟಣೆ ಉಂಟಾಗುತ್ತಿದೆ. ಈ ಸಂಬಂಧ ಟ್ರಾಫಿಕ್ ನಿರ್ವಹಣೆಯ ತಜ್ಞರೊಂದಿಗೆ ಚರ್ಚಿಸಲಾಗಿದ್ದು ವರದಿ ನೀಡುವಂತೆ ಕೋರಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಸಂಚಾರಿ ಪೊಲೀಸ್ ಠಾಣೆ ಸ್ಥಾಪಿಸುವ ಸಂಬಂಧ ಎರಡು ಬಾರಿ ಮನವಿ ಸಲ್ಲಿಸಲಾಗಿದೆ. ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ತ್ವರಿತವಾಗಿ ಸಂಚಾರಿ ಠಾಣೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು. ವಾಹನ ದಟ್ಟಣೆ ನಿಯಂತ್ರಣ ಸವಾಲು: ಎಲೆಕ್ಟ್ರಾನಿಕ್‌ಸಿಟಿಯಿಂದ ಅತ್ತಿಬೆಲೆವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಸಂಚಾರಿ ಪೊಲೀಸ್ ಠಾಣೆಯಿಲ್ಲ. ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಟ್ರಾಫಿಕ್ ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.