ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: ನಬಾರ್ಡ್‌ನಿಂದ ₹12.95 ಲಕ್ಷ ಸಹಾಯ ಧನ

ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಸಭೆ
Published 26 ಆಗಸ್ಟ್ 2023, 13:26 IST
Last Updated 26 ಆಗಸ್ಟ್ 2023, 13:26 IST
ಅಕ್ಷರ ಗಾತ್ರ

ಆನೇಕಲ್ : ಸಾಲ ವಸೂಲಾತಿಯಲ್ಲಿ ಆನೇಕಲ್‌ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಜಿಲ್ಲೆಯಲ್ಲಿಯೇ ಮೊದಲ ಸ್ಥಾನದಲ್ಲಿದೆ. ರೈತರು ಸಮರ್ಪಕವಾಗಿ ಸಾಲ ಮರುಪಾವತಿ ಮಾಡಿರುವುದರಿಂದ ಬ್ಯಾಂಕ್‌ ಅಭಿವೃದ್ಧಿಯಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಎ.ಮುನಿರಾಜು ಹೇಳಿದರು.

ಶನಿವಾರ ನಡೆದ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ 85ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಆನೇಕಲ್‌ ತಾಲ್ಲೂಕಿನ ರೈತರಿಗೆ ₹1.89 ಕೋಟಿ ಸಾಲವನ್ನು ಸಮಗ್ರ ತೋಟಗಾರಿಕೆ, ರೇಷ್ಮೇ, ಹೈನುಗಾರಿಕೆ, ಕೋಳಿ, ಕುರಿ, ಹಂದಿ ಸಾಕಾಣಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಾಲ ನೀಡಲಾಗಿದೆ ಎಂದರು.

ರೈತರು ತಾವು ಪಡೆದ ಸಾಲವನ್ನು ಸದ್ಭಳಕೆ ಮಾಡಿಕೊಂಡು ಉತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿಸಿ ಸಾಲ ಮರುವಾಪತಿಯನ್ನು ನಿಯಮಿತವಾಗಿ ಮಾಡಬೇಕು. ನಿಗದಿತ ಗಡುವಿನೊಳಗೆ ಮರುಪಾವತಿ ಮಾಡಿದ ರೈತರಿಗೆ ಬ್ಯಾಂಕ್‌ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಗಿದೆ ಎಂದರು.

2022-23ನೇ ಸಾಲಿನಲ್ಲಿ ಶೇ.70.04ರಷ್ಟು ಸಾಲ ವಸೂಲಿ ಮಾಡಲಾಗಿದೆ. ನಬಾರ್ಡ್‌ನಿಂದ ಬಂದ ₹12.95 ಲಕ್ಷ ಸಹಾಯ ಧನವನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. 12 ಮಂದಿ ರೈತರಿಗೆ ವಿವಿಧ ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಬಮೂಲ್‌ ನಿರ್ದೇಶಕ ಬಿ.ಜಿ.ಆಂಜಿನಪ್ಪ ಅವರು ₹4 ಲಕ್ಷ ವೆಚ್ಚದ ಲಾಕರ್‌ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ರೈತಸ್ನೇಹಿ ಬ್ಯಾಂಕ್‌ ಆಗಿದ್ದು ರೈತರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಆನೇಕಲ್‌ ಪಿಎಲ್‌ಡಿ ಬ್ಯಾಂಕ್‌ ಸದಸ್ಯರುಗಳಿಗೆ ವಿವಿಧ ಸಾಲ ಸೌಲಭ್ಯಗಳನ್ನು ನೀಡಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರ ನೀಡಿದೆ ಎಂದು ತಿಳಿಸಿದರು.

ಬ್ಯಾಂಕ್‌ ನಿರ್ದೇಶಕ ಪಂಡಿತನ ಅಗ್ರಹಾರ ವಿ.ಆಂಜಿನಪ್ಪ ಮಾತನಾಡಿ, ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಪಿಎಲ್‌ಡಿ ಬ್ಯಾಂಕ್‌ ರೈತ ಸ್ನೇಹಿಯಾಗಿದೆ. ಆನೇಕಲ್‌ನಲ್ಲಿ ಪಿಎಲ್‌ಡಿ ಬ್ಯಾಂಕ್‌ ಸ್ವಂತ ಕಟ್ಟಡ ಹೊಂದಿದ್ದು ಆಡಳಿತ ಮಂಡಳಿಯು ಅನಾವಶ್ಯಕ ವೆಚ್ಚಗಳಿಗೆ ಅವಕಾಶ ನೀಡದೇ ಸಮರ್ಪಕವಾಗಿ ನಡೆಸಿಕೊಂಡು ಬಂದಿರುವುದು ಉತ್ತಮ ಪ್ರಯತ್ನವಾಗಿದೆ ಎಂದರು.

ಪಿಎಲ್‌ಡಿ ಬ್ಯಾಂಕ್‌ನ ಉಪಾಧ್ಯಕ್ಷ ಪಿ.ಎನ್‌.ಭವಾನಿ, ನಿರ್ದೇಶಕರಾದ ಮಧು.ಎಸ್‌.ಮೂರ್ತಿ, ಗಂಗಪ್ಪ, ಶ್ರೀನಿವಾಸರೆಡ್ಡಿ, ಎಸ್‌.ಪ್ರಭಾಕರ್‌, ಮಂಗಳಗೌರಮ್ಮ, ಆರ್‌.ಶ್ರೀನಿವಾಸ್‌, ಲಕ್ಷ್ಮೀನಾರಾಯಣ್‌, ಆರ್‌.ಸೋಮಶೇಖರರೆಡ್ಡಿ, ಭದ್ರಪ್ಪ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ವಣಕನಹಳ್ಳಿ ಸೋಮಶೇಖರ್‌, ಕಿಯೋನಿಕ್ಸ್‌ ಮಾಜಿ ಅಧ್ಯಕ್ಷ ಎಂ.ಯಂಗಾರೆಡ್ಡಿ, ಹಾಪ್‌ಕಾಮ್ಸ್‌ ನಿರ್ದೇಶಕ ಮುತ್ತೂರು ಜೆ.ನಾರಾಯಣಪ್ಪ, ಪ್ರಭಾರ ವ್ಯವಸ್ಥಾಪಕ ಡಿ.ಸೋಮಶೇಖರ, ಗೀತಾದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT