ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆನೇಕಲ್ | ಪಾಳು ಬಿದ್ದಿದ್ದ ಸ್ಥಳವೀಗ ಕುಂಚತಾಣ

Published 9 ನವೆಂಬರ್ 2023, 5:20 IST
Last Updated 9 ನವೆಂಬರ್ 2023, 5:20 IST
ಅಕ್ಷರ ಗಾತ್ರ

ಆನೇಕಲ್ : ಕಸ ಸುರಿಯುವ ಮತ್ತು ಮೂತ್ರ ವಿಸರ್ಜನೆಯ ಸ್ಥಳವಾಗಿದ್ದ ಜಾಗವೀಗ ಕುಂಚತಾಣವಾಗಿದೆ !

ರಸ್ತೆ ಬದಿ ತ್ಯಾಜ್ಯ, ಪಾಳು ಬಿದ್ದ ಗೋಡೆ, ರಸ್ತೆ ಬದಿಯೇ ಮೂತ್ರ ವಿಸರ್ಜನೆಯಿಂದ ಹಾಳಾಗಿದ್ದ ಪಟ್ಟಣದ ಹಲವು ಸ್ಥಳಗಳು ಈಗ ಜನರ ಗಮನ ಸೆಳೆಯವ ಸುಂದರ ತಾಣವಾಗಿದೆ.

ಪಟ್ಟಣದಲ್ಲಿ ಗಲೀಜು ಮತ್ತು ಪಾಳು ಬಿದ್ದ ಜಾಗಗಳಿಗೆ ಸುಂದರ ರೂಪ ನೀಡಲು ಆನೇಕಲ್‌ ಪುರಸಭೆ‌ ಕಾರ್ಯೋನ್ಮುಖವಾಗಿದೆ. ಈಗಾಗಲೇ ತಿಮ್ಮರಾಯಸ್ವಾಮಿ ದೇವಾಲಯ ಪ್ರವೇಶದ್ವಾರದ ಬಳಿ ಪಾಳು ಬಿದ್ದ ಜಾಗವನ್ನು ಡಿಜಿಟಲ್‌ ವಾಲ್‌ ಪ್ರಿಟಿಂಗ್‌ ಮತ್ತು ಕಿರು ಉದ್ಯಾನ ನಿರ್ಮಿಸಲಾಗಿದ್ದು, ಜನರ ಗಮನ ಸೆಳೆಯುತ್ತಿದೆ.

ಆನೇಕಲ್‌ ಪುರಸಭೆ ವ್ಯಾಪ್ತಿಯ ಹೊಸೂರು ರಸ್ತೆಯ ತಿಮ್ಮರಾಯಸ್ವಾಮಿ ದೇವಾಲಯದ ಪ್ರವೇಶದ್ವಾರದ ಬಳಿ ಹಲವು ವರ್ಷಗಳಿಂದ ಪಾವತಿ ಬಳಕೆ ಮಾಡುವ ಶೌಚಾಲಯದ ನಿರ್ಮಿಸಲಾಗಿತ್ತು. ಆದರೆ ಈ ಕಟ್ಟಡ ಉದ್ಘಾಟನೆಯಾಗುವ ಮುನ್ನವೇ ಪಾಳುಬೀಳುವ ಪರಿಸ್ಥಿತಿಯಲ್ಲಿ ಇತ್ತು. ಕಟ್ಟಡದ ಸುತ್ತಲೂ ಗಿಡ ಗಂಟಿಗಳು ಬೆಳೆದಿದ್ದವು. ಈ ರಸ್ತೆಯಲ್ಲಿ ಸಾಗುವ ಜನರು ಖಾಲಿ ಜಾಗವನ್ನೇ ಬಯಲು ಶೌಚಾಲಯವನ್ನಾಗಿ ಮಾಡಿಕೊಂಡಿದ್ದರು.

ಇದರಿಂದಾಗಿ ರಸ್ತೆಯಲ್ಲಿ ಸಾಗುವವರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ನಿಟ್ಟಿನಲ್ಲಿ ಕಾಯಕಲ್ಪ ನೀಡಬೇಕೆಂಬ ದೃಷ್ಠಿಯಿಂದ ಕಾರ್ಯಯೋಜನೆ ಸಿದ್ದಪಡಿಸಿದ ಆನೇಕಲ್‌ ಪುರಸಭೆ ಗೋಡೆಗಳಿಗೆ ಡಿಜಿಟಲ್‌ ವಾಲ್‌ ಪ್ರಿಂಟಿಂಗ್‌ ಮಾಡಿಸಿ ಪಟ್ಟಣದ ವಿವಿಧ ದೇವಾಲಯಗಳು, ಚರ್ಚ್‌, ಮಸೀದಿ, ದಸರಾ, ಕರಗ, ಮುತ್ಯಾಲಮಡುವು ಸೇರಿದಂತೆ ವಿವಿಧ ಪ್ರಮುಖ ಚಿತ್ರಗಳನ್ನೊಳಗೊಂಡ ಗೋಡೆ ಬರಹವನ್ನು ಮಾಡಿಸಿದೆ.

ಗಲೀಜಾಗಿದ್ದ ಜಾಗದಲ್ಲಿ ಕಿರು ಉದ್ಯಾನ ನಿರ್ಮಿಸಿ ಆಕರ್ಷಣೀಯಗೊಳಿಸಲಾಗಿದೆ. ಇದರಿಂದಾಗಿ ಈ ಜಾಗದ ಚಿತ್ರಣವೇ ಬದಲಾಗಿದೆ. ಈ ರಸ್ತೆಯಲ್ಲಿ ತೆರಳುವವರು ಒಮ್ಮೆ ನಿಂತು ನೋಡಿ, ಸೆಲ್ಫಿ ತೆಗೆದುಕೊಳ್ಳುವ ತಾಣವಾಗಿ ಮಾರ್ಪಾಡಾಗಿದೆ.

ಸರ್ವಧರ್ಮಗಳ ಸಮನ್ವಯತೆ

ವಾಲ್‌ ಪ್ರಿಟಂಗ್‌ನಲ್ಲಿ ದೇವಾಲಯ, ಮಸೀದಿ, ಚರ್ಚ್‌ ಸೇರಿದಂತೆ ವಿವಿಧ ಆಚರಣೆಗಳಿಗೆ ಆದ್ಯತೆ ನೀಡಲಾಗಿದ್ದು ಈ ಗೋಡೆ ಬರಹವು ಸರ್ವಧರ್ಮ ಸಮನ್ವಯತೆ ಸಾರುತ್ತಿದೆ.

ಪಟ್ಟಣದ ತಿಮ್ಮರಾಯಸ್ವಾಮಿ ದೇವಾಲಯ, ಚನ್ನಕೇಶವ ಸ್ವಾಮಿ ದೇವಾಲಯ, ಚೌಡೇಶ್ವರಿ ದೇವಾಲಯ, ಕಂಬದ ಗಣಪತಿ ದೇವಾಲಯ, ನಗರೇಶ್ವರ ದೇವಾಲಯ, ವೇಣು ಗೋಪಾಲಸ್ವಾಮಿ ದೇವಾಲಯ, ಗಂಗಮ್ಮ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳ ಚಿತ್ರಗಳು ಗೋಡೆ ಬರಹದಲ್ಲಿ ಕಂಗೊಳಿಸುತ್ತಿವೆ. ಪಟ್ಟಣದ ಮಸೀದಿ, ಚರ್ಚ್‌ನ ಚಿತ್ರಗಳು ವಾಲ್‌ ಪ್ರಿಂಟಿಂಗ್‌ನಲ್ಲಿ ಜಾಗ ಪಡೆದಿದ್ದು ಆಕರ್ಷಣೀಯವಾಗಿದೆ.

ಪಾಳುಬಿದ್ದ ಸ್ಥಳಗಳಿಗೆ ಕಾಯಕಲ್ಪ

ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಕಸ ಸುರಿದು ಪಟ್ಟಣದ ಅಂದವನ್ನು ಕೆಡಿಸಲಾಗುತ್ತಿತ್ತು. ಎಲ್ಲಂದರಲ್ಲಿ ಮೂತ್ರ ವಿಸರ್ಜನೆ ಮಾಡಲಾಗುತ್ತಿತ್ತು. ಇದರಿಂದಾಗಿ ವಾತಾವರಣ ಹಾಳಾಗಿತ್ತು. ಇದಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಪುರಸಭೆ ಪ್ರಮುಖ ಸ್ಥಳಗಳನ್ನು ಗುರುತಿಸಿ ಸುಂದರಗೊಳಿಸಲು ಕ್ರಮ ಕೈಗೊಂಡ ಪರಿಣಾಮ ಪಾಳು ಬಿದ್ದಿದ್ದ ಸ್ಥಳಗಳು ಅಂದಗೊಂಡಿವೆ ಎಂದು ಪುರಸೆ ಮುಖ್ಯಾಧಿಕಾರಿ ರಾಜೇಶ್‌ ತಿಳಿಸಿದರು. ಆನೇಕಲ್‌ನ ದೇವರಕೊಂಡಪ್ಪ ವೃತ್ತ ತಿಮ್ಮರಾಯಸ್ವಾಮಿ ದೇವಾಲಯದ ಹೆಬ್ಬಾಗಿಲು ಸೇರಿದಂತೆ ವಿವಿಧೆಡೆಗಳಲ್ಲಿ ಸುಂದರ ಸ್ಥಳಗಳನ್ನಾಗಿ ಮಾಡಲು ಆದ್ಯತೆ ನೀಡಲಾಗಿದೆ. ಹಲವು ವರ್ಷಗಳಿಂದ ಉಪಯೋಗಕ್ಕೆ ಬಾರದಿದ್ದ ತಿಮ್ಮರಾಯಸ್ವಾಮಿ ರಸ್ತೆಯ ಶೌಚಾಲಯ ಬಳಕೆಗೆ ಬರುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಆನೇಕಲ್-ಹೊಸೂರು ರಸ್ತೆಯ ತಿಮ್ಮರಾಯಸ್ವಾಮಿ ದೇವಾಲಯದ ಪ್ರವೇಶದ್ವಾರದ ಬಳಿ ಆನೇಕಲ್ ಪುರಸಭೆ ವತಿಯಿಂದ ನಿರ್ಮಿಸಿರುವ ಕಿರು ಉದ್ಯಾನ
ಆನೇಕಲ್-ಹೊಸೂರು ರಸ್ತೆಯ ತಿಮ್ಮರಾಯಸ್ವಾಮಿ ದೇವಾಲಯದ ಪ್ರವೇಶದ್ವಾರದ ಬಳಿ ಆನೇಕಲ್ ಪುರಸಭೆ ವತಿಯಿಂದ ನಿರ್ಮಿಸಿರುವ ಕಿರು ಉದ್ಯಾನ
ಆನೇಕಲ್-ಹೊಸೂರು ರಸ್ತೆಯ ತಿಮ್ಮರಾಯಸ್ವಾಮಿ ದೇವಾಲಯದ ಪ್ರವೇಶದ್ವಾರದ ಬಳಿಯ ಕಿರುಉದ್ಯಾನದಲ್ಲಿ ಪುರಸಭೆಯ ಸಿಬ್ಬಂದಿ
ಆನೇಕಲ್-ಹೊಸೂರು ರಸ್ತೆಯ ತಿಮ್ಮರಾಯಸ್ವಾಮಿ ದೇವಾಲಯದ ಪ್ರವೇಶದ್ವಾರದ ಬಳಿಯ ಕಿರುಉದ್ಯಾನದಲ್ಲಿ ಪುರಸಭೆಯ ಸಿಬ್ಬಂದಿ
ಆನೇಕಲ್-ಹೊಸೂರು ರಸ್ತೆಯ ತಿಮ್ಮರಾಯಸ್ವಾಮಿ ದೇವಾಲಯದ ಪ್ರವೇಶದ್ವಾರದ ಬಳಿ ಪಾಳುಬಿದ್ದಿದ್ದ ಸ್ಥಳ
ಆನೇಕಲ್-ಹೊಸೂರು ರಸ್ತೆಯ ತಿಮ್ಮರಾಯಸ್ವಾಮಿ ದೇವಾಲಯದ ಪ್ರವೇಶದ್ವಾರದ ಬಳಿ ಪಾಳುಬಿದ್ದಿದ್ದ ಸ್ಥಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT