ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಚೆಲುವಿನ ಚಿತ್ತಾರದ ಅಂಗನವಾಡಿ

ಕಾನ್‌ಸ್ಟೆಬಲ್‌ ಪಿ.ಮಧುಸೂದನ್‌ ಕಾರ್ಯಕ್ಕೆ ಅಪಾರ ಮೆಚ್ಚುಗೆ
Last Updated 2 ಫೆಬ್ರುವರಿ 2021, 2:10 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸದಾ ಒಂದೊಲ್ಲೊಂದು ಕೆಲಸದಲ್ಲಿ ಬಿಜಿಯಾಗಿರುವ ಪೊಲೀಸರಿಗೆ ಅರ್ಧ ದಿನ ರಜೆ ಸಿಕ್ಕರೆ ಸಾಕಪ್ಪ ಎನ್ನುವ ಸ್ಥಿತಿಯಲ್ಲಿರುವುದು ಸಾಮಾನ್ಯ. ಇಂತಹ ಬಿಡುವಿಲ್ಲದ ಕೆಲಸದ ನಡುವೆಯೂ ಅಂಗನವಾಡಿ ಕಟ್ಟಡದ ಗೋಡೆಗಳ ಮೇಲೆ ಮಕ್ಕಳಿಗೆ ಅನುಕೂಲವಾಗುವಂತೆ ಪ್ರಾಣಿ, ಪಕ್ಷಿ, ತರಕಾರಿ ಹಾಗೂ ಪಾಠಕ್ಕೆ ಸಂಬಂಧಿಸಿದ ಚಿತ್ರ ಬರೆಯುವ ಮೂಲಕ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಕಾನ್‌ಸ್ಟೆಬಲ್‌ ಪಿ.ಮಧುಸೂದನ್‌ ಅಂಗನವಾಡಿ ಮಕ್ಕಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿನ ರಾಜೀವ್‌ಗಾಂಧಿ ಬಡಾವಣೆ ಅಂಗನವಾಡಿ ಕೇಂದ್ರ-2 ಕಟ್ಟಡ ಈಚೆಗಷ್ಟೇ ನಿರ್ಮಾಣವಾಗಿತ್ತು. ಕಟ್ಟಡದ ಎಲ್ಲ ಗೋಡೆಗಳು ಖಾಲಿಯಾಗಿದ್ದವು. ಆದರೆ, ಈಗ ಗೋಡೆಗಳು ಮಧುಸೂದನ್‌ ಅವರ ಚಿತ್ರಗಳಿಂದ ಅಂಕೃತವಾಗಿದ್ದು ಒಮ್ಮೆ ಅಂಗನವಾಡಿ ಕೇಂದ್ರದ ಗೋಡೆಗಳತ್ತ ತಿರುಗಿ ನೋಡುವಂತೆ ಮಾಡಿದೆ.

ಪುಟ್ಟ ಮಕ್ಕಳು ಯಾವ ತರಕಾರಿತಿಂದರೆ ಒಳಿತು ಎನ್ನುವುದೇ ಸೇರಿದಂತೆ ಪಠ್ಯದಲ್ಲಿನ ಪಾಠಕ್ಕೆ ಸಂಬಂಧಿಸಿದ ಚಿತ್ರ ಗೋಡೆಗಳ ಮೇಲೆ ಬರೆಯಲಾಗಿದೆ. ಇದರಿಂದ ಮಕ್ಕಳು ತರಕಾರಿ, ಪ್ರಾಣಿ, ಪಕ್ಷಿ ನೋಡಿ ಅವುಗಳ ಹೆಸರು ನೆನಪಿನಲ್ಲಿಟ್ಟುಕೊಳ್ಳಲು ಅನುಕೂಲವಾಗುತ್ತದೆ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆ ಭಾಗ್ಯಮ್ಮ.

ಅಪ್ಪನೇ ಗುರು: ಅಪ್ಪ ಕೃಷಿಯೊಂದಿಗೆ ಬಟ್ಟೆಗಳ ಬ್ಯಾನರ್, ಗೋಡೆ ಬರಹ ಬರೆಯುತ್ತಿದ್ದರು. ಅಪ್ಪ ಮನೆಯಲ್ಲಿ ಕುಳಿತು ಬ್ಯಾನರ್‌ ಬರೆಯುವುದನ್ನು ನೋಡುತ್ತಾ, ಅಪ್ಪನಿಗೆ ಸಹಾಯ ಮಾಡುತ್ತಲೇ ನಾನು ಗೋಡೆ ಮೇಲೆ ಚಿತ್ರ ಬರೆಯುವುದನ್ನು ಕಲಿತೆ. ಹೀಗಾಗಿ ನನ್ನ ಚಿತ್ರಕಲೆಗೆ ಅಪ್ಪನೇ ಮೊದಲ ಗುರುವು ಎನ್ನುತ್ತಾರೆ ಪಿ.ಮಧುಸೂದನ್‌.

ತಾಲ್ಲೂಕಿನ ಬನ್ನೇರುಘಟ್ಟದ ಮಧುಸೂದನ್‌ ಮೂರು ವರ್ಷಗಳ ಹಿಂದೆಯಷ್ಟೇ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವೃತ್ತಿ ಬದುಕು ಆರಂಭಿಸಿದ್ದಾರೆ. ಶಾಲೆಯಲ್ಲಿ ಓದುತ್ತಿರುವಾಗಲೇ ಚಿತ್ರಕಲೆ ಸ್ಪರ್ಧೆಗಳಲ್ಲಿ ಹಲವು ಬಹುಮಾನ ಪಡೆದಿದ್ದಾರೆ.ಪೊಲೀಸ್‌ ಇಲಾಖೆಗೆ ಬಂದ ಮೇಲೆ ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶ ಇಲ್ಲದಾಯಿತು ಎಂದರು.

ಲಾಕ್‌ಡೌನ್‌ ಸಂದರ್ಭದಲ್ಲಿ ರಾಜೀವ್‌ಗಾಂಧಿ ಬಡಾವಣೆಯಲ್ಲಿ ಬಂದೋಬಸ್ತ್‌ ನಿಮಿತ್ತ ಅಂಗನವಾಡಿ ಕೇಂದ್ರದ ಬಳಿ ಕುಳಿತಿದ್ದಾಗ ಖಾಲಿಯಾಗಿದ್ದ ಗೋಡೆಗಳ ಮೇಲೆ ಏನಾದರೂ ಬರೆಯಬಹುದಾಗಿತ್ತು ಎಂದು ಜತೆಯಲ್ಲಿದ್ದ ಸಹದ್ಯೋಗಿ ಬೆಟ್ಟಸ್ವಾಮಿ ಅವರೊಂದಿಗೆ ಚರ್ಚಿಸಿದೆ. ಅವರು ಬಣ್ಣ ಕೊಡಿಸುತ್ತೇನೆ ಅಂದರು. ನಾನು ಬಿಡುವಿನ ವೇಳೆಯಲ್ಲಿ ಹೋಗಿ ಚಿತ್ರ ಬರೆದುಕೊಟ್ಟೆ ಎಂದು ಮಧುಸೂದನ್‌ ಚಿತ್ರ ಬರೆದ ಕಥೆ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT