ಸೋಮವಾರ, ಮಾರ್ಚ್ 1, 2021
31 °C

ಮತ್ತೆ ಅಂಗನವಾಡಿ ಕಾರ್ಯಕರ್ತೆಯರ ಧರಣಿ? 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದೊಡ್ಡಬಳ್ಳಾಪುರ: ಪ್ರೋತ್ಸಾಹ ಧನ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರು,ಅಂಗವಾಡಿ ಕಾರ್ಯಕರ್ತೆಯರು, ಶಾಲೆಯಲ್ಲಿನ ಅಡುಗೆ ಸಿಬ್ಬಂದಿಯನ್ನು ವಂಚಿಸಲಾಗುತ್ತಿದೆ. ಈ ಸಿಬ್ಬಂದಿಯನ್ನು ಕಾರ್ಮಿಕರನ್ನಾಗಿ ಪರಿಗಣಿಸಿ ಕನಿಷ್ಠ ವೇತನ ನೀಡುವಂತೆ ಒತ್ತಾಯಿಸಿ ಜ.28ರಂದು ಆಖಿಲ ಭಾರತ ಯುನೈಟೆಡ್ ಸೆಂಟರ್‍ ವತಿಯಿಂದ ಕೇಂದ್ರ ಸರ್ಕಾರದ ವಿರುದ್ದ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಹೇಳಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ದೊಡ್ಡಬಳ್ಳಾಪುರ ತಾಲ್ಲೂಕು ಆಶಾ ಕಾರ್ಯಕರ್ತೆಯರ ಸಂಘ, ಆಲ್ ಇಂಡಿಯಾ ಯುನೈಟೆಡ್ ಸೆಂಟರ್ ಸಹಯೋಗದೊಂದಿಗೆ ಬುಧವಾರ ಡಾ.ರಾಜ್‍ಕುಮಾರ್ ಕಲಾಮಂದಿರದಲ್ಲಿ ನಡೆದ ಆಶಾ ಕಾರ್ಯಕರ್ತೆಯರ ಸಮಾವೇಶದಲ್ಲಿ ಅವರು ಮಾತನಾಡಿದರು.

9 ವರ್ಷಗಳ ಹಿಂದೆ ಜಾರಿಗೆ ಬಂದ ಆಶಾ ಯೋಜನೆ ಕುರಿತಂತೆ ಹಲವು ಕಾರ್ಯಕರ್ತೆಯರಲ್ಲಿ ಆಶಾಭಾವನೆ ಇತ್ತು. ಆದರೆ ಕೆಲ ನೀತಿ ನಿಯಮಗಳನ್ನು ಒಡ್ಡಿ ದಿನದ 24 ಗಂಟೆ ದುಡಿಸಿಕೊಂಡರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತವಾದ ಸಂಬಳ ನೀಡುತ್ತಿಲ್ಲ. ಇದನ್ನು ವಿರೋಧಿಸಿ ನಡೆದ ಉಗ್ರವಾದ ಪ್ರತಿಭಟನೆಯ ಕಾರಣ ರಾಜ್ಯ ಸರ್ಕಾರ ₹3,500 ವೇತನ ನೀಡಿತ್ತು. ಆದರೆ ಹಲವು ಕಾರಣ ಒಡ್ಡಿ ಅದನ್ನು ಸಹ ಸಮರ್ಪಕವಾಗಿ ನೀಡುತ್ತಿಲ್ಲ ಎಂದು ದೂರಿದರು.

ಪ್ರಧಾನಿ ಮೋದಿ ಅವರು ಆಶಾ ಕಾರ್ಯಕರ್ತೆಯರೊಡನೆ ನಡೆಸಿದ ಸಂವಾದಲ್ಲಿ ಕಾರ್ಯಕರ್ತೆಯರಿಗೆ ಶುಭಸುದ್ದಿ ನೀಡುವ ಭರವಸೆ ನೀಡಿದ್ದರು.ಈ ಶುಭಸುದ್ದಿ ಕೇವಲ ಒಂದು ಸಾವಿರಕ್ಕೆ ಸೀಮಿತವಾಯಿತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕಾರ್ಯಕರ್ತೆಯರಿಗೆ ₹6,000 ವೇತನ ನೀಡುವ ಕುರಿತು ಪ್ರಕಟಿಸಿದ್ದರು. ಈ ಘೋಷೆಯನ್ನು ಅನುಷ್ಠಾನಗೊಳಿಸಲು ಸಂಘದ ವತಿಯಿಂದ ಮನವಿ ಮಾಡಲಾಗಿದೆ. ಇಲ್ಲವಾದಲ್ಲಿ ಮತ್ತೊಮ್ಮೆ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ಅನಿರ್ವಾರ್ಯವಾಗಲಿದೆ ಎಂದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಗ್ರಾಮಾಂತರ ಜಿಲ್ಲಾ ಗೌರವ ಅಧ್ಯಕ್ಷೆ ಟಿ.ಸಿ.ರಮಾ ಮಾತನಾಡಿ, ಆಶಾ ಕಾರ್ಯಕರ್ತೆಯರು ಒಗ್ಗಟ್ಟಾಗಿ ಹೋರಾಟ ನಡೆಸದ ಹೊರತು ಸಮಸ್ಯೆಗಳಿಗೆ ಪರಿಹಾರ ದೊರಕದು. ಈ ನಿಟ್ಟಿನಲ್ಲಿ ಸಂಘವನ್ನು ಸಂಘಟಿಸಿ ಹೋರಾಟ ನಡೆಸಲಾಗುತ್ತಿದೆ. ಜ.8 ಮತ್ತು 9ರಂದು ನಡೆಯಲಿರುವ ಕೆಲಸ ಬಹಿಷ್ಕರಿಸುವ ಮುಷ್ಕರಕ್ಕೆ ಪ್ರತಿಯೊಬ್ಬರು ಭಾಗವಹಿಸಿ ಬೆಂಬಲ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆರ ಸಂಘದ ತಾಲ್ಲೂಕು ಅಧ್ಯಕ್ಷೆ ಲಕ್ಷ್ಮೀದೇವಿ, ಕಾರ್ಯದರ್ಶಿ ಬಿ.ಮಂಜುಳಾ, ಉಪಾಧ್ಯಕ್ಷರಾದ ನಾಗರತ್ನ, ಶಾಂತಮ್ಮ, ಭಾರತಿ, ಭವ್ಯ, ಆಲ್ ಇಂಡಿಯಾ ಯುನೈಟೆಡ್‌ ಸೆಂಟರ್‍ನ ಗೋವಿಂದರಾಜ್, ಹನುಮೇಶ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು