ಸೋಮವಾರ, ಸೆಪ್ಟೆಂಬರ್ 20, 2021
20 °C
ಕೆರೆ ಅಭಿವೃದ್ಧಿಗೆ ಹಣ ವ್ಯಯ * ಹಲವು ಜನಪರ ಕಾರ್ಯಕ್ರಮ

ವಾಜರಹಳ್ಳಿ-ಬ್ಯಾಡರಹಳ್ಳಿ ಕೆರೆ ಅಭಿವೃದ್ಧಿಗೆ ಟೊಂಕ ಕಟ್ಟಿದ ಭಗೀರಥರು

ವಡ್ಡನಹಳ್ಳಿ ಭೋಜ್ಯನಾಯ್ಕ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಹಿಂದುಳಿದ ಹಳ್ಳಿಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರದಿಂದ ಈಗಾಗಲೇ ‘ಕುಗ್ರಾಮ-ಸುಗ್ರಾಮ’ ಎಂಬ ಯೋಜನೆ ಜಾರಿಯಲ್ಲಿದೆ. ಇದರಿಂದಲೇ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅರಿತಿರುವ ಸಮಾಜ ಸೇವಕರಾದ ಚೇತನ್ ಕುಮಾರ್ ಮತ್ತು ಡಾ.ಪ್ರವೀಣ್ ಕುಮಾರ್ ರೊದ್ಧಂ ಕೆರೆಗಳ ಅಭಿವೃದ್ಧಿಗೆ ಟೊಂಕಕಟ್ಟಿದ್ದಾರೆ 

ತಾಲ್ಲೂಕಿನ ವಾಜರಹಳ್ಳಿ-ಬ್ಯಾಡರಹಳ್ಳಿ ಕೆರೆ ಅಭಿವೃದ್ಧಿಗೆ ಮುಂದಾಗಿದ್ದು ಇದಕ್ಕಾಗಿಯೇ ಸಮಯ ಮೀಸಲಿಟ್ಟಿದ್ದಾರೆ. ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ಜಿಲ್ಲಾಧಿಕಾರಿ ಕರೀಗೌಡರ ಮಾರ್ಗದರ್ಶನ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು, ವಿಶ್ವನಾಥಪುರ, ಕೊಯಿರಾ, ವಾಜರಹಳ್ಳಿ-,ಬ್ಯಾಡರಹಳ್ಳಿ ಮುಖಂಡರ ಸಹಕಾರದೊಂದಿಗೆ ಈ ಕೆಲಸ ಆರಂಭಿಸಿದ್ದಾರೆ.

17.8 ಎಕರೆ ಕೆರೆ ಹೂಳು ತೆಗೆದು ಫಲವತ್ತಾದ ಮೆಕ್ಕಲು ಮಣ್ಣನ್ನು ಸ್ಥಳೀಯ ರೈತರ ಜಮೀನುಗಳಿಗೆ ಉಚಿತವಾಗಿ ಒದಗಿಸಿ ಭೂಮಿ ಫಲವತ್ತತೆ ವೃದ್ಧಿಸಲು ಸ್ಥಳೀಯ ರೈತರಿಗೆ ನೆರವಾಗಿದ್ದಾರೆ.

‌ಹಲವು ವರ್ಷಗಳ ಹಿಂದೆ ಕೆರೆ ಕೋಡಿ ಒಡೆದು ಪ್ರತಿ ಮಳೆಗಾಲದಲ್ಲೂ ನೀರು ಪೋಲಾಗುತ್ತಿತ್ತು. ಇದನ್ನು ಅರಿತ ಸಿ.ಚೇತನ್‌ಕುಮಾರ್ ಮತ್ತು ಡಾ.ಪ್ರವೀಣ್‌ಕುಮಾರ್‌ ರೊದ್ದಂ ಸರ್ಕಾರದಿಂದ ಕಿಂಚಿತ್ತೂ ಸಹಾಯಕ್ಕೆ ಕೈಯೊಡ್ಡದೆ ಸ್ವಂತ ವೆಚ್ಚದಲ್ಲಿ ₹1ಕೋಟಿ ವ್ಯಯ ಮಾಡಿ ಕೆರೆ ಅಭಿವೃದ್ಧಿ ಕೈಗೊಂಡಿದ್ದಾರೆ. 120 ಅಡಿ ಉದ್ದ ಹಾಗೂ 11 ಅಡಿ ಎತ್ತರ, 6 ಅಡಿ ಅಗಲದಿಂದ ಕೂಡಿದ ಕೋಡಿ ನಿರ್ಮಾಣ ಹಾಗೂ ಮಣ್ಣು ಸವೆದು ಹೋಗದ ರೀತಿಯಲ್ಲಿ ತಡೆಗೋಡೆ (ರಿಟೈನಿಂಗ್ ವಾಲ್), ನೀರು ಸಲೀಸಾಗಿ ಹರಿದು ಹೋಗಲು ಇಳಿಜಾರು ನಿರ್ಮಿಸಲಾಗಿದೆ.

‘ಉದ್ಯಮಿಯಾದ ನನಗೆ ರೈತರ ಸಂಕಷ್ಟ ಅರಿವಾಗಿದೆ. ಸಮಾಜ ಸೇವೆಯ ಮಹತ್ವಾಕಾಂಕ್ಷೆಯಿಂದ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಅರಣ್ಯ ಇಲಾಖೆ ಸಹಯೋಗದೊಂದಿಗೆ ಕೆರೆ ಸುತ್ತಲಿನ ಪ್ರದೇಶ ಹಾಗೂ ಗ್ರಾಮಗಳಲ್ಲಿ ಸಸಿ ನೆಡುವ ಕಾರ್ಯ, ವಿದ್ಯಾಭ್ಯಾಸಕ್ಕೆ ನೆರವು, ಯುವಜನರಿಗೆ ಉದ್ಯೋಗದಂತಹ ಜನಪರ ಕಾರ್ಯಕ್ರಮ ರೂಪಿಸಲಾಗಿದೆ. ಇದರೊಂದಿಗೆ ಕೆರೆ ಅಭಿವೃದ್ಧಿಯೂ ಸೇರಿದೆ’ ಎಂದು ಪ್ರವೀಣ್ ಕುಮಾರ್ ಅಭಿಪ್ರಾಯ‍ಪಟ್ಟರು.

ಕೆರೆ ಮಧ್ಯದಲ್ಲಿ ನಡುಗಡ್ಡೆ ನಿರ್ಮಾಣ ಮಾಡಿ ಪ್ರಾಣಿ – ಪಕ್ಷಿ, ಜಲಗಳ ವೃದ್ಧಿಗೆ ಒತ್ತು ನೀಡಲಾಗಿದೆ. ಗ್ರಾಮಸ್ಥರು ಕೂಡ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು