ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ' ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಟೀಕೆ

ದೇವನಹಳ್ಳಿ: ಎಸ್‌.ಸಿ ಮೋರ್ಚಾ ಮುಖಂಡರ ಪ್ರತಿಭಟನೆ
Last Updated 4 ನವೆಂಬರ್ 2021, 7:03 IST
ಅಕ್ಷರ ಗಾತ್ರ

ದೇವನಹಳ್ಳಿ: ‘ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಸೇರಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಿರುವಹೇಳಿಕೆ ಅಕ್ಷಮ್ಯವಾದುದು’ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಖಜಾಂಚಿ ಎ.ಕೆ.ಪಿ. ನಾಗೇಶ್ ಖಂಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಕೂಡ ಜೆಡಿಎಸ್ ಪಕ್ಷದಲ್ಲಿ ಬೆಳೆದು ಕಾಂಗ್ರೆಸ್‌ಗೆ ಹೋಗಿರುವುದು ಹೊಟ್ಟೆಪಾಡಿಗಾಗಿಯಾ? ಬಿಜೆಪಿ ದಲಿತರನ್ನು ಬೆಳೆಸುತ್ತಿರುವ ರೀತಿಯನ್ನು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಹತಾಶರಾಗಿ ಈ ರೀತಿಯಾಗಿ ದಲಿತರನ್ನು ಕಡೆಗಣಿಸಿ ಮಾತನಾಡಿದ್ದಾರೆ. ಈ ಹೇಳಿಕೆಯನ್ನು ಅವರು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಈಗಾಗಲೇ ಸಿದ್ದರಾಮಯ್ಯ ಅವರಿಂದಾಗಿ ಕಾಂಗ್ರೆಸ್ ನೆಲಕಚ್ಚಿದೆ. ಈಗ ಹೇಳಿಕೆಯಿಂದ ಕಾಂಗ್ರೆಸ್‌ನ ಮತ ಬ್ಯಾಂಕ್ ಆಗಿದ್ದ ದಲಿತರನ್ನು ಕಡೆಗಣಿಸುತ್ತಿರುವುದು ಖಂಡನೀಯ ಎಂದರು.

ಬಿಜೆಪಿ ಯುವ ಮುಖಂಡ ಸುರೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ನಾಯಕರನ್ನು ಸೋಲಿಸಲು ಮೂಲ ಕಾರಣರಾಗಿದ್ದೇ ಸಿದ್ದರಾಮಯ್ಯ. ಈ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳುವುದರ ಬದಲಿಗೆ ದಲಿತರು ಬಿಜೆಪಿಯ ಕಡೆಗೆ ಹೋಗುತ್ತಿದ್ದಾರೆ ಎನ್ನುವುದನ್ನು ಸಹಿಸದೇ ಬಾಲಿಶ ಹೇಳಿಕೆ ನೀಡಿದ್ದಾರೆ ಎಂದು ದೂರಿದರು.

ಕೂಡಲೇ, ದಲಿತರ ಕ್ಷಮೆ ಕೇಳಬೇಕು. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ಕಿತ್ತುಕೊಳ್ಳುತ್ತಾರೆ ಎನ್ನುವ ಅಪವಾದವಿತ್ತು. ಆದರೆ, ಬಿಜೆಪಿ ಈ ಅಪವಾದದಿಂದ ದೂರವಿದ್ದು ಕೆಲಸ ಮಾಡುತ್ತಿದೆ ಎಂದರು.

ವಿಜಯಪುರ ಟೌನ್ ಬಿಜೆಪಿ ಅಧ್ಯಕ್ಷ ಆರ್.ಸಿ. ಮಂಜುನಾಥ್ ಮಾತನಾಡಿ, ರಾಜಕೀಯವಾಗಿ ದಲಿತರು ಬಿಜೆಪಿಯಲ್ಲಿ ಬೆಳೆಯುತ್ತಿರುವುದನ್ನು ಸಿದ್ದರಾಮಯ್ಯ ಅವರು ಸಹಿಸುತ್ತಿಲ್ಲ. ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಈ ಹೇಳಿಕೆ ನೀಡಬಾರದು ಎಂದರು.

2014 ರಿಂದ 2021 ರವರೆಗೆ ದಲಿತ ವರ್ಗಕ್ಕೆ ಎಷ್ಟು ಅವಕಾಶ ಕೊಟ್ಟಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಅವರು ದಲಿತ ನಾಯಕರು ಮುಖ್ಯಮಂತ್ರಿಯಾಗಬಾರದು ಎಂದು ಸೋಲಿಸಿದರು. ಯಡಿಯೂರಪ್ಪ ಅವರು ದಲಿತರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದರು. ಸಿದ್ದರಾಮಯ್ಯ ಹಳ್ಳಿ ಭಾಷೆಯನ್ನು ಬಿಟ್ಟು ಸಂಸ್ಕೃತಿಯನ್ನು ಕಲಿತುಕೊಳ್ಳಬೇಕಾಗಿದೆ ಎಂದರು.

ಬಿಜೆಪಿ ಮುಖಂಡರಾದ ರಾಜ್ಯ ಎಸ್.ಸಿ. ಮೋರ್ಚಾ ಕಾರ್ಯದರ್ಶಿ ಹನುಮಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ತಾಲ್ಲೂಕು ಎಸ್.ಸಿ. ಮೋರ್ಚಾ ಅಧ್ಯಕ್ಷ ಮುನಿರಾಜು, ಗಣೇಶ್ ಬಾಬು, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೂದಿಗೆರೆ ನಾಗವೇಣಿ, ತಾಲ್ಲೂಕು ಉಪಾಧ್ಯಕ್ಷೆ ಪುನೀತಾ, ಲಕ್ಷ್ಮೀ, ದ್ರಾಕ್ಷಾಯಿಣಿ, ಯುವ ಮೋರ್ಚಾದ ಮೋಹನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT