ಭಾನುವಾರ, ಮೇ 9, 2021
18 °C

ದೊಡ್ಡಬಳ್ಳಾಪುರ: ಧಾರ್ಮಿಕ ಆಚರಣೆ ಮೇಲೆ ಕರಿನೆರಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ಧಾರ್ಮಿಕ ಆಚರಣೆಗಳಿಗೆ ಗುಂಪು ಸೇರುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ರಾಮನವಮಿ ಆಚರಣೆ ಹಾಗೂ ವಿವಿಧ ಧಾರ್ಮಿಕ ಉತ್ಸವಗಳ ಮೇಲೆ ಪರಿಣಾಮ ಬೀರಿದೆ.

ಪ್ರತಿ ವರ್ಷ ರಾಮನವಮಿ ಹಬ್ಬದ ದಿನ ನಡೆಯುತ್ತಿದ್ದ ತಾಲ್ಲೂಕಿನ ರಾಜಘಟ್ಟ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಕೋವಿಡ್ -19 ಮುಂಜಾಗ್ರತಾ ಕ್ರಮವಾಗಿ ರದ್ದು ಮಾಡಲಾಗಿದೆ. ಗ್ರಾಮ ದೇವತೆ ದೊಡ್ಡಮ್ಮದೇವಿ ದೇವಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ಊರಿನ ಹಿರಿಯರು ಜಾತ್ರೆ ರದ್ದು ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಹಬ್ಬದ ಹಿನ್ನೆಲೆ ದೇವಾಲಯದಲ್ಲಿ ಮೂರು ದಿನಗಳ ಕಾಲ ದೇವರ ದರ್ಶನ ಹಾಗೂ ವಿಶೇಷ ಪೂಜೆಗೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ. ಇದೇ ವೇಳೆ ರಾಮನವಮಿ ಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಕೋವಿಡ್‌-19 ತಡೆಗಟ್ಟಲು ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಮನವಿ ಮಾಡಲಾಗಿದೆ.

ನಗರದ ಪ್ರಸಿದ್ದ ನೆಲದಾಂಜನೇಯಸ್ವಾಮಿ ದೇವಾಲಯದಲ್ಲಿ ಏ.18 ರಿಂದ ಮುಂದಿನ ಸೂಚನೆವರೆಗೆ ಭಕ್ತಾದಿಗಳಿಗೆ ಗರ್ಭಗುಡಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ದೇವಾಲಯದಲ್ಲಿ ಭಕ್ತಾದಿಗಳೇ ನೇರವಾಗಿ ಗರ್ಭಗುಡಿಗೆ ತೆರಳಿ ಪೂಜೆ ಸಲ್ಲಿಸುವ ಪರಿಪಾಠ ಈ ದೇವಾಲಯದಲ್ಲಿದೆ.

ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿ ಭಕ್ತಾದಿಗಳು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ದೇವಾಲಯದ ಆಡಳಿತ ಮಂಡಲಿ ಸೂಚಿಸಿದೆ. ಈ ನಡುವೆ ಏ.29 ರಂದು ಘಾಟಿ ಕ್ಷೇತ್ರದ ದೇವಾಲಯದ ವತಿಯಿಂದ ನಡೆಸಲಿರುವ ಉಚಿತ ಸಾಮೂಹಿಕ ವಿವಾಹ ನೋಂದಣಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ವಿವಾಹ ಕಾರ್ಯಕ್ರಮವನ್ನು ಯಾವ ರೀತಿ ನಡೆಸಬೇಕು ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ.

ಏ.21ರಂದು ರಾಮನವಮಿ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅರವಟಿಗೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ಬಾರಿ ಹೆಚ್ಚಿನ ಜನರು ಸೇರಲು ನಿರ್ಬಂಧವಿರುವುದರಿಂದ ಸಾಂಕೇತಿಕವಾಗಿ ಆಚರಣೆ ಮಾಡಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು