ಗುರುವಾರ , ಏಪ್ರಿಲ್ 15, 2021
23 °C
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಕೇಂದ್ರ ತ್ರಿಭಾಷಾ ಸೂತ್ರ ಅನುಸರಿಸಲಿ: ಕವಿ ಡಾ.ಸಿದ್ದಲಿಂಗಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: (ಡಿ.ಆರ್‌.ನಾಗರಾಜ್‌ ವೇದಿಕೆ) ಕೇಂದ್ರ ಸರ್ಕಾರ ಹಿಂದಿ, ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ನೇಮಕಾತಿ ಪರೀಕ್ಷೆ ನಡೆಸುತ್ತಿರುವುದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರಕ್ಕೆ ಅನುಸಾರ ನಡೆದುಕೊಳ್ಳಬೇಕು ಎಂದು ಕವಿ ಡಾ. ಸಿದ್ದಲಿಂಗಯ್ಯ ಹೇಳಿದರು.

ನಗರದ ಬಸವ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ನಡೆದ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಹಿಂದಿ ಹೇರಿಕೆ ಸರಿಯಾದ ಕ್ರಮವಲ್ಲ. ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಕ್ರಮ ನಿಲ್ಲಿಸದೇ ಇದ್ದರೆ ನಾವು ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಹಿಂದಿ ಬಳಕೆ ವಿರೋಧಿಸಬೇಕಾಗಿದೆ. ಕನ್ನಡ ಭಾಷೆಯ ಲಿಪಿ ಪ್ರಪಂಚದ ಎಲ್ಲ ಲಿಪಿಗಳ ರಾಣಿ ಎಂಬ ಮಾತನ್ನು ವಿನೋಬಾ ಭಾವೆ ಅವರು ಹೇಳುತಿದ್ದರು. ಆದರೆ, ಇಂದು ಆಹ್ವಾನ ಪತ್ರಿಕೆಗಳಲ್ಲೂ ಇಂಗ್ಲಿಷ್ ಭಾಷೆ ಅನುಸರಿಸುತ್ತಿರವುದು ಶೋಚನೀಯ. ಗ್ರಾಮಗಳಲ್ಲಿನ ಗ್ರಾಮದೇವತೆಗಳು ಸಹ ಇಂಗ್ಲಿಷ್ ಮಾತನಾಡುವ ಹಂತಕ್ಕೆ ತಲುಪಿರುವುದು ವಿಪರ್ಯಾಸ. ದೇವರಿಗೇ ಕನ್ನಡ ಬೇಕಿಲ್ಲವೆಂದರೆ ಜನಸಾಮಾನ್ಯರ ಪಾಡೇನು ಎಂದು ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಹೇಳಿದ್ದನ್ನು ಸ್ಮರಿಸಿದರು.

ಕೇಂದ್ರ ಸರ್ಕಾರದ ಬಹುತೇಕ ಉದ್ಯೋಗ ಉತ್ತರ ಭಾರತದವರ ಪಾಲಾಗುತ್ತಿವೆ. ಹಿಂದಿ ಹಾಗೂ ಇಂಗ್ಲಿಷ್ ಭಾಷೆ ಸಾಕಷ್ಟು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಯಾವುದೇ ಅನ್ಯ ಭಾಷಿಕನಿಗೂ ಕನ್ನಡದಲ್ಲಿಯೇ ಉತ್ತರ ನೀಡಬೇಕೇ ಹೊರತು ಕನ್ನಡ ಬರುವ ವ್ಯಕ್ತಿಗಳ ಜೊತೆ ಬೇರೆ ಭಾಷೆ ಬೇಡ. ಮೊದಲು ಕನ್ನಡಿಗರು ಕನ್ನಡ ಸ್ವಚ್ಛವಾಗಿ ಮಾತನಾಡುವುದನ್ನು ಕಲಿಯಬೇಕಿದೆ. ಕನ್ನಡದ ಬರವಣಿಗೆಯಲ್ಲಿ ವ್ಯಾಕರಣ ತಪ್ಪಿಲ್ಲದೆ ಬರೆಯಬೇಕು. ರಾಜಕಾರಣಿಗಳು, ಸಚಿವರು ಸೇರಿದಂತೆ ಎಲ್ಲರೂ ಕನ್ನಡಕ್ಕೆ ಒತ್ತು ನೀಡಬೇಕಿದೆ. ಸರ್ಕಾರ ಕನ್ನಡದಲ್ಲಿ ಇಲ್ಲದ ಅರ್ಜಿ ತಿರಸ್ಕರಿಸುವ ಕೆಲಸ ಕಡ್ಡಾಯವಾಗಿ ಮಾಡುವಂತಾಗಬೇಕು ಎಂದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಗಡಿ ವಿಚಾರದ ಕುರಿತು ಹೇಳಿಕೆ ನೀಡಿದ್ದನ್ನು ಪ್ರಸ್ತಾಪಿಸಿದ ಅವರು 1762ರಲ್ಲಿ ಪೋರ್ಚ್‌ ಗೀಸ್ ರಾಣಿಯೂ ಸಹ ಕನ್ನಡ ಮತ್ತು ಪೋರ್ಚಿಗೀಸ್ ಭಾಷೆಗೆ ಮಾನ್ಯತೆ ನೀಡಿದ್ದರು. ಮುಂಬೈ ಪ್ರದೇಶ ಕನ್ನಡಿಗರ ಪ್ರದೇಶವಾಗಿತ್ತು. ಬೆಳಗಾವಿ ಒಂದು ಕಾಲಕ್ಕೆ ರಾಜ್ಯದ ಮಧ್ಯ ಭಾಗದಲ್ಲಿತ್ತು. ಈಗ ಗಡಿ ಭಾಗವಾಗಿದೆ ಎಂದರು.

ಕನ್ನಡಪರ ಹೋರಾಟಗಾರ ತ.ನ.ಪ್ರಭುದೇವ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿರುವ ಎಲ್ಲ ಕನ್ನಡಪರ ಹೋರಾಟಗಾರರಿಗೆ ಸಂದ ಗೌರವವಾಗಿದೆ. ದೊಡ್ಡಬಳ್ಳಾಪುರ ಹಲವಾರು ಮಹನೀಯರನ್ನು ನಾಡಿಗೆ ಕೊಡುಗೆಯಾಗಿ ನೀಡಿರುವುದನ್ನು ಸ್ಮರಿಸಿದ ಅವರು, ರೈತ ನಾಯಕ ಡಾ.ವೆಂಕಟರೆಡ್ಡಿ, ವಿಮರ್ಶಕ ಡಿ.ಆರ್‌.ನಾಗರಾಜ್‌ ಅವರೊಂದಿಗಿನ ತಮ್ಮ ಒಡನಾಟ ನೆನೆದರು.

ಚಿತ್ರನಟಿ ಭವ್ಯ ಮಾತನಾಡಿ, ಕನ್ನಡ ನನಗೆ ಎಲ್ಲವನ್ನೂ ಕೊಟ್ಟಿದೆ. ಆದರೆ, ವರನಟ ಡಾ.ರಾಜ್‌ಕುಮಾರ್ ಅವರಂತ ಮೇರು ನಟರೊಂದಿಗೆ ನಟಿಸುವ ಆಸೆ ಈಡೇರದೆ ಹೋಗಿದ್ದು ಬೇಸರದ ಸಂಗತಿ. ಭಾಷೆಯ ಅವಿಭಾಜ್ಯ ಅಂಗವಾಗಿರುವ ಕನ್ನಡ ಚಿತ್ರಗಳನ್ನು ನೋಡುವ ಮೂಲಕ ಕನ್ನಡ ಭಾಷೆ ಉಳಿಸಿ ಬೆಳೆಸಬೇಕಿದೆ ಎಂದರು.

ಸಮ್ಮೇಳದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷೆ ಪ್ರಮೀಳಾಮಹದೇವ್‌,ಕ್ಷೇತ್ರ ಶಿಕ್ಷಣಾಧಿಕಾರಿ ಭೈಯಪ್ಪರೆಡ್ಡಿ, ದೇವನಹಳ್ಳಿ ತಾಲ್ಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ನಂಜೇಗೌಡ,ನೆಲಮಂಗಲ ತಾಲ್ಲೂಕು ಅಧ್ಯಕ್ಷ ಕೇಶವಮೂರ್ತಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಬಸವ ಭವನದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ರಾಷ್ಟ್ರಧ್ವಜವನ್ನು ಉಪವಿಭಾಗಾಕಾರಿ ಅರುಳ್‌ಕುಮಾರ್, ಪರಿಷತ್ ಧ್ವಜವನ್ನು ಜಿಲ್ಲಾ ಅಧ್ಯಕ್ಷ ಚಿ.ಮಾ.ಸುಧಾಕರ್, ಕನ್ನಡ ನಾಡ ಧ್ವಜವನ್ನು ತಹಶೀಲ್ಧಾರ್ ಟಿ.ಎಸ್‌.ಶಿವರಾಜ್‌ ನೆರವೇರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು