ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಪರಿಶಿಷ್ಟರ ಕಾಲೊನಿಯಲ್ಲಿ ‘ಚಂದಿರಮ್ಮ’ ಸಂಭ್ರಮ

ನೆಲಮೂಲದ ಸಂಸ್ಕೃತಿಯ ಅನಾವರಣ
Published 28 ಮಾರ್ಚ್ 2024, 6:36 IST
Last Updated 28 ಮಾರ್ಚ್ 2024, 6:36 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಕದಿರಿ ಹುಣ್ಣಿಮೆ ಆಸುಪಾಸಿನಲ್ಲಿ ದಲಿತ ಕೇರಿಗಳಲ್ಲಿ ವಿಶಿಷ್ಟ ಜಾನಪದೀಯ ಆಚರಣೆಯೊಂದು ಗಮನ ಸೆಳೆಯುತ್ತದೆ. ಶಿಷ್ಟ ಪರಂಪರೆಯ ‘ಚಂದ್ರ’ ಪರಿಶಿಷ್ಟರ ಮನೆಯಂಗಳದಲ್ಲಿ ಅವರ ಮನೆಯ ಮಗಳು ‘ಚಂದ್ರಮ್ಮ’ಳಾಗಿ ಬದಲಾಗುತ್ತಾನೆ.

ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ದಲಿತ ಕೇರಿಗಳು ಮತ್ತು ವಾಲ್ಮೀಕಿ ಸಮುದಾಯದ ಮನೆಯ ಅಂಗಳಗಳು ಈ ವಿಶಿಷ್ಟ ಪದ್ಧತಿಗೆ ಸಾಕ್ಷಿಯಾಗುತ್ತವೆ. ಪರಿಶಿಷ್ಟರು ಚಂದ್ರನನ್ನು ಚಂದ್ರಮ್ಮನನ್ನಾಗಿ ಮಾಡಿಕೊಂಡು ಮನೆ ತುಂಬಿಸಿಕೊಳ್ಳುತ್ತಾರೆ. ತಮ್ಮ ಮನೆಯ ಮಗಳನ್ನು ಪ್ರೀತಿಯಿಂದ ಬರ ಮಾಡಿಕೊಳ್ಳುತ್ತಾರೆ.

ಆಂಧ್ರಪ್ರದೇಶದ ಕದಿರಿಯ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ನಡೆಯುವ ರಥೋತ್ಸಕ್ಕೆ ಹೋಗದವರು ತಮ್ಮ ಊರುಗಳಲ್ಲಿ ಪರಿಶಿಷ್ಟ ಸಮುದಾಯಗಳ ಜನರು ಹುಣ್ಣಿಮೆಯಂದು ರಥೋತ್ಸವ ಆಚರಿಸುತ್ತಾರೆ. ಮನೆಗಳಲ್ಲಿ ಪೂಜೆ ಮಾಡುತ್ತಾರೆ. ಇದೇ ಕಾರಣಕ್ಕೆ ಈ ಹುಣ್ಣಿಮೆಗೆ ‘ಕದಿರಿ ಹುಣ್ಣಿಮೆ’ ಎನ್ನುತ್ತಾರೆ.

ಕದಿರಿ ಹುಣ್ಣಿಮೆಯಂದು ಚಂದ್ರ ಭೂಮಿಗೆ ಅತೀ ಹತ್ತಿರ ಬಂದು ಹಾಲು ಬಿಳಿಪಿನ ಬೆಳಂದಿಗಳು ಚೆಲ್ಲುತ್ತಾನೆ. ಈ ಸಂಧರ್ಭದಲ್ಲಿ ಪಟ್ಟಣದ ವಾಲ್ಮೀಕಿ ನಗರ, ಅಂಬೇಡ್ಕರ್ ನಗರ ಸೇರಿದಂತೆ ತಾಲ್ಲೂಕಿನಲ್ಲಿ, ವಿವಿಧ ದಲಿತರ ಮನೆಗಳು ಹಾಗೂ ವಾಲ್ಮೀಕಿ ಸಮುದಾಯದ ಮನೆಗಳ ಮುಂದೆ ‘ಚಂದ್ರಮ್ಮ’ನ ಆರಾಧನೆ ನಡೆಯುತ್ತದೆ.

ಹುಣ್ಣಿಮೆ ಹಿಂದೆ ಮತ್ತು ಮುಂದಿನ ಕೆಲವು ದಿನಗಳು ಮನೆಗಳ ಮುಂದೆ ಸಂಜೆಯ ಸಮಯದಲ್ಲಿ ಸಗಣಿ ಸಾರಿಸಿ ಅದರ ಮೇಲೆ ರಂಗೋಲಿ ಬಿಡಿಸಲಾಗುತ್ತದೆ. ಅರಿಸಿನ, ಕುಂಕುಮ, ಹೂವು, ಹಣ್ಣು, ಪ್ರಸಾದ ಇಟ್ಟು ಪೂಜೆ ಮಾಡಲಾಗಿದೆ. ಆ ರಂಗೋಲಿಯ ಸುತ್ತಲೂ ಕುಳಿತು ಹಾಡು ಹಾಡುವುದು ಸಂಪ್ರದಾಯ. ಇದು ತಡರಾತ್ರಿಯವರಿಗೂ ನಡೆಯುತ್ತದೆ.

‘ನಮ್ಮ ಅಜ್ಜ ಅಜ್ಜಿಯವರ ಕಾಲದಿಂದಲೂ ನಮ್ಮ ಕಾಲೊನಿಯಲ್ಲಿ ಚಂದ್ರಮ್ಮ ಹಬ್ಬವನ್ನು ಕದಿರಿ ಹುಣ್ಣಿಮೆಯಂದು ಆಚರಿಸುವುದು ರೂಢಿ. ಚಂದ್ರಮ್ಮ ನಮ್ಮ ಮನೆಯ ಹೆಣ್ಣುಮಗಳು. ಆಕೆಯನ್ನು ಮನೆಗೆ ಬರಮಾಡಿಕೊಂಡು ಅತಿಥ್ಯ ನೀಡುತ್ತೇವೆ. ಕಾಲೋನಿಯವರು  ಸಂಪ್ರದಾಯ ಮುಂದುವರೆಸಿದ್ದೇವೆ. ಚಂದ್ರಮ್ಮನ ಹಬ್ಬ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿದ್ದೇವೆ’ ಎಂದು ಪಟ್ಟಣದ ಅಂಬೇಡ್ಕರ್ ಕಾಲೊನಿಯ ನಿವಾಸಿ ಗಂಗಮ್ಮ ಹೇಳುತ್ತಾರೆ.

ಚಂದ್ರಮ್ಮನ ಆರಾಧನೆ, ಪೂಜೆ ಇದು ಕೇವಲ ಒಂದು ಆಚರಣೆಯಲ್ಲ. ಬದಲಿಗೆ ದಲಿತ ಸಮುದಾಯದ ಬದುಕಿನ ಅನಾವರಣವೂ ಆಗಿದೆ. ಕದಿರಿ ಹುಣ್ಣಿಮೆಯಂದು ಚಂದ್ರ ಭೂಮಿಗೆ ಹತ್ತಿರದಲ್ಲಿ ಇರುತ್ತಾನೆ. ಆ ಚಂದ್ರ ಮೇಲ್ವರ್ಗದ ಕಥೆ, ಪುರಾಣಗಳಲ್ಲಿ ಪುರುಷರಾಗಿದ್ದಾರೆ. ಆದರೆ ಪರಿಶಿಷ್ಟರ ಪುರಾಣಗಳಲ್ಲಿ ಹೆಣ್ಣಾಗಿದ್ದಾರೆ. ದ್ರಾವಿಡ ಸಂಸ್ಕೃತಿ ಮೊದಲಿನಿಂದಲೂ ಮಾತೃ ಆರಾಧನೆಯೇ ಮಾಡಿಕೊಂಡು ಬಂದಿದೆ ಎಂದು ಪಟ್ಟಣದ ಸಂಸ್ಕೃತಿ ಚಿಂತಕ ಹಾಗೂ ಕನ್ನಡ ಪ್ರಾಧ್ಯಾಪಕ ಕೆ.ಎಂ.ನಯಾಜ್ ಅಹಮದ್ ಹೇಳುತ್ತಾರೆ.

ಪರಿಶಿಷ್ಟ ಪುರಾಣ ಪ್ರಕಾರ ಚಂದ್ರಮ್ಮ, ದಲಿತರ ಮನೆಯ ಹೆಣ್ಣುಮಗಳು. ವರ್ಷಕ್ಕೆ ಒಮ್ಮೆ ಆಕೆಯನ್ನು ಮನೆ ತುಂಬಿಸಿಕೊಳ್ಳುವ ಪ್ರಕ್ರಿಯೆಯೇ ಈ ಆರಾಧನೆ. ತವರಿನವರು ಅಕ್ಕರೆಯಿಂದ ಹೆಣ್ಣುಮಗಳನ್ನು ಪ್ರೀತಿಯಿಂದ ಮನೆಗೆ ಕರೆದುಕೊಳ್ಳುತ್ತಾರೆ. ತೇರಿನ ಚಿತ್ರ ಬಿಡಿಸಿ, ಅದರಲ್ಲಿ ಆಕೆಯನ್ನು ಕೂರಿಸಲಾಗುತ್ತದೆ. ರಂಗೋಲಿ ಮಧ್ಯೆ ತಟ್ಟೆ ಇಟ್ಟು ನೀರು ಹಾಕುತ್ತಾರೆ. ಆ ನೀರಿನಲ್ಲಿ 'ಚಂದ್ರಮ್ಮ' ಕಾಣಿಸಿಕೊಂಡಾಗ, ತಮ್ಮ ಮಗಳು ಮನೆಗೆ ಬಂದಳು ಎಂದು ಸಂಭ್ರಮಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

ರಂಗೋಲಿಯೂ ಊರಿನಿಂದ ಊರಿಗೆ ಬದಲಾಗುತ್ತದೆ, ಆದರೆ ಚಂದ್ರಮ್ಮನ ಪಾತ್ರ ಬದಲಾಗುವುದಿಲ್ಲ. ಕೆಲವು ಕಡೆ ರಥದ ಮಾದರಿಯಲ್ಲಿ ರಂಗೋಲಿ ಬಿಡಿಸಿ ಚಂದ್ರಮ್ಮನ ಚಿತ್ರ ಬರೆಯುತ್ತಾರೆ. ಅಲಂಕಾರ ಮಾಡುತ್ತಾರೆ. ಮತ್ತೊಂದು ಕಡೆಗಳಲ್ಲಿ ಈ ರಥದ ಚಿತ್ರದ ಕೆಳಗೆ ದಲಿತ ಸಮುದಾಯಗಳ ಜೀವನಾಡಿಯಾದ ಮತ್ತು ಶ್ರಮಿಕ ವರ್ಗಗಳ ಪ್ರತೀಕಗಳಾಗಿ ಕುಡುಗೋಲು, ಹಾರೆ, ಮೊರ, ಪೊರಕೆ, ರಾಗಿ ಮುದ್ದೆ ಮಾಡುವಾಗ ಬಳಸುವ ಕೋಲು, ಮುದ್ದೆ ತೆಗೆಯುವ ಬಿಲ್ಲೆಯ ಚಿತ್ರಗಳನ್ನು ಬಿಡಿಸಲಾಗಿದೆ.

ಕದಿರಿ ಹುಣ್ಣಿಮೆಯಂದು ಬಿಡಿಸುವ ಈ ಒಂದು ರಂಗೋಲಿ, ಅದರ ಸುತ್ತಲಿನ ಆರಾಧನೆ, ಚಂದ್ರಮ್ಮನೊಂದಿಗಿನ ಆ ಸಂಬಂಧ ಒಂದು ದೊಡ್ಡ ಪುರಾಣವನ್ನೇ ತೆರೆದು ಬಿಟ್ಟಿದೆ. ದಲಿತ ಸಮುದಾಯದ ನೋವು, ನಲಿವುಗಳ ಜೊತೆ ಜೊತೆಗೆ ಶ್ರಮಜೀವಿಗಳ ಬೆವರಿನ ಬದುಕು ಮತ್ತು ನೆಲಮೂಲದ ಸಂಸ್ಕೃತಿಯ ಅನಾವರಣ ಮಾಡಿದೆ.

ವಾಲ್ಮೀಕಿ ನಗರದಲ್ಲಿ ಚಂದಿರಮ್ಮಗೆ ಪರಿಶಿಷ್ಟದ ಮಹಿಳೆಯರು ಪೂಜೆ ಮಾಡುತ್ತಿರುವುದು
ವಾಲ್ಮೀಕಿ ನಗರದಲ್ಲಿ ಚಂದಿರಮ್ಮಗೆ ಪರಿಶಿಷ್ಟದ ಮಹಿಳೆಯರು ಪೂಜೆ ಮಾಡುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT