ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್‌ಗೆ ಮೋಟಾರ್‌ ಫ್ಯಾನ್: ಹಳ್ಳಿ ಎಂಜಿನಿಯರ್ ಮುದ್ದಣ್ಣನಿಂದ ವಾಯು ಶಕ್ತಿ ಬೈಕ್‌!

ಕಡಿಮೆ ಇಂಧನ ಬಳಕೆಯ ಪ್ರಯೋಗ
Last Updated 8 ಜೂನ್ 2022, 4:09 IST
ಅಕ್ಷರ ಗಾತ್ರ

ಚಪ್ಪರದಕಲ್ಲು (ದೇವನಹಳ್ಳಿ): ಜಿಲ್ಲಾಡಳಿತ ಭವನದ ಸುತ್ತ ಮುತ್ತ, ಸದ್ದಿಲ್ಲದೇ ಗಾಳಿಯ ವೇಗದೊಂದಿಗೆ ಸೂರ್‌.. ಸೂರ್‌... ಎಂದು ಸಾಗುವ ಮೋಟಾರ್‌ ಬೈಕ್‌ನ ಸವಾರರೊಬ್ಬರು ಸ್ಥಳೀಯರ ಗಮನ ಸೆಳೆದಿದ್ದಾರೆ.

ಇವರು ಮೋಟಾರ್‌ಗಳ ರಿಪೇರಿ ಮಾಡುವ ಮುದ್ದಣ್ಣ. ತಮ್ಮ ಮೋಟಾರ್‌ ಬೈಕ್‌ ಆವಿಷ್ಕಾರದಲ್ಲಿ ತೊಡಗಿರುವ ಇವರು, ತಮ್ಮ ಬೈಕ್‌ನ ಎಡ ಮತ್ತು ಬಲ ಭಾಗದಲ್ಲಿ ಫ್ಯಾನ್‌ಗಳನ್ನು ಹಾಕಿಕೊಂಡು, ಬೈಕ್‌ ಏರಿ ರಸ್ತೆಯಲ್ಲಿ ಕಾಣ ಸಿಗುತ್ತಾರೆ.

‘ಬೈಕ್‌ನಲ್ಲಿ ಸಾಗುವಾಗ ಗಾಳಿಯ ವಿರುದ್ಧವಾಗಿ ನುಗ್ಗಿಕೊಂಡು ಹೋಗುತ್ತೇವೆ. ಸಾಕಷ್ಟು ವಾಯು ಶಕ್ತಿ ವ್ಯರ್ಥವಾಗುತ್ತಿದೆ. ಅದನ್ನು ಉಪಯೋಗಿಸಿಕೊಂಡು ಮತ್ತಷ್ಟು ದೂರ ಸಾಗಬಹುದು, ಅದರ ಪ್ರಯೋಗದಲ್ಲಿ ನಾನಿದ್ದೇನೆ. ಭಾಗಶಃ ಯಶಸ್ಸನ್ನು ಕಂಡಿದ್ದೇನೆ’ ಎನ್ನುತ್ತಾರೆ ಆವಿಷ್ಕಾರಿ ಮುದ್ದಣ್ಣ.

‘ದಿನದಿಂದ ದಿನಕ್ಕೆ ಪೆಟ್ರೋಲ್‌ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಬೇಸತ್ತು ಕಡಿಮೆ ಇಂಧನ ಬಳಸಿ ಹೆಚ್ಚು ದೂರ ಸಾಗುವ ಬೈಕ್‌ ರೂಪಿಸಬೇಕೆಂದು, ನನಗೆ ತಿಳಿದಿರುವ ಮೋಟಾರ್‌ ರಿಪೇರಿಯ ತಂತ್ರಗಾರಿಕೆ ಬಳಿಸಿಕೊಂಡು ಬೈಕ್‌ಗಳಿಗೆ ಕೆಟ್ಟ ಮೋಟಾರ್‌ಗಳ ಫ್ಯಾನ್‌ ಅಳವಡಿಸಿದ್ದೇನೆ’ ಎಂದು ವಿವರಿಸುತ್ತಾರೆ.

‘ದೊಡ್ಡ ದೊಡ್ಡ ಬೆಟ್ಟಗಳ ಮೇಲೆ ಫ್ಯಾನ್‌ಗಳನ್ನು ಅಳವಡಿಸಿಕೊಂಡು ವಿದ್ಯುತ್‌ ಉತ್ಪತ್ತಿ ಮಾಡುವುದಾಗಿ, ಬೈಕ್‌ನಲ್ಲಿ ಯಾಕೆ ಅದು ಸಾಧ್ಯವಿಲ್ಲ ಎಂದು ನನಗೆ ಆಲೋಚನೆ ಬಂತು. ಸತತ ಪ್ರಯತ್ನಗಳಿಂದ ಅಲ್ಪಮಟ್ಟಿನಲ್ಲಿ ಇಂಧನ ಕ್ಷಮತೆ ಸಾಧಿಸಿದ್ದೇನೆ. ಅದರ ಪರೀಕ್ಷಾರ್ಥ ರಸ್ತೆಗಳಲ್ಲಿ ಬೈಕ್‌ ಸದ್ದಿಲ್ಲದೇ ಸಾಗುತ್ತದೆ’ ಎಂದರು.

‘ಮುಂದೊಂದು ದಿನ ಸಂಪೂರ್ಣ ವಾಯು ಶಕ್ತಿಯಿಂದಲೇ ಬೈಕ್‌ ಚಾಲನೆ ಮಾಡುವತ್ತಾ ಆವಿಷ್ಕಾರ ಸಾಗಿದೆ. ಪೆಟ್ರೋಲ್‌ನೊಂದಿಗೆ ಗಾಳಿಯ ಬಲದಿಂದ ಕಡಿಮೆ ಇಂಧನದಲ್ಲಿ ಹೆಚ್ಚು ದೂರ ಸಾಗುವ ಬೈಕ್‌ಗಳ ನಿರ್ಮಾಣವೇ ನನ್ನ ಗುರಿ’ ಎನ್ನುತ್ತಾರೆ ‘ಹಳ್ಳಿ ಎಂಜಿನಿಯರ್’ ಮುದ್ದಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT