ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಶೀತಲ ಸರಪಳಿ ಘಟಕ ಎತ್ತಂಗಡಿ?

ಪೂಜನಹಳ್ಳಿ ಶತಮಾನದ ಗಾಂಧಿ ತೋಟಗಾರಿಕಾ ಕ್ಷೇತ್ರದಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಸ್ಥಳಾಂತರಗೊಳ್ಳುವ ಅನುಮಾನ
Last Updated 25 ಜನವರಿ 2020, 19:30 IST
ಅಕ್ಷರ ಗಾತ್ರ

ದೇವನಹಳ್ಳಿ: ಇಲ್ಲಿನ ಪೂಜನಹಳ್ಳಿ ಶತಮಾನದ ಗಾಂಧಿ ತೋಟದಲ್ಲಿ ಕೆಪೆಕ್ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹಣಕಾಸಿನ ನೆರವಿನಿಂದ ಉದ್ದೇಶಿಸಿಲಾದ ಸಮಗ್ರ ಶೀತಲ ಸರಪಳಿ ಘಟಕ ಚಿಕ್ಕಬಳ್ಳಾಪುರ ಜಿಲ್ಲೆಗೆ ಸ್ಥಳಾಂತರಗೊಳ್ಳುವ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬಯಲು ಸೀಮೆ ಪ್ರದೇಶದಲ್ಲಿರುವ ಜಿಲ್ಲೆಗಳು ವಿವಿಧ ರೀತಿಯ ಫಲವತ್ತಾದ ಮಣ್ಣು ಹಾಗೂ ವೈವಿಧ್ಯಮಯ ಹವಾಗುಣದಿಂದ ಕೂಡಿದ ಪ್ರದೇಶಗಳಾಗಿದ್ದು ಉತ್ಕೃಷ್ಟ ರೀತಿಯ ತರಕಾರಿ, ದ್ರಾಕ್ಷಿ, ದಾಳಿಂಬೆ, ಮಾವು, ನಿಂಬೆ, ಗುಲಾಬಿ, ಸೇವಂತಿಗೆ, ಸುಗಂಧರಾಜ ದೇರಿದಂತೆ ವಿವಿಧ ರೀತಿಯ ಹೂವುಗಳನ್ನು ಬೆಳೆಯುತ್ತಿರುವುದರಿಂದ ಇವುಗಳಿಗೆ ದೇಶ ಹಾಗೂ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.

ಹಾಗಾಗಿ ಸಾಗಾಣಿಕೆ ಮತ್ತು ರಪ್ತು ಮಾಡಲು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪವಿರುವ ಪೂಜನಹಳ್ಳಿ ಶತಮಾನದ ಗಾಂಧಿ ತೋಟಗಾರಿಕಾ ಕ್ಷೇತ್ರ ಸೂಕ್ತವೆಂದು ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ನಾಲ್ಕು ಎಕರೆ ಜಾಗ ಗುರುತಿಸಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣಭೈರೇಗೌಡ, ಕೃಷಿ ಸಚಿವ ಶಿವಶಂಕರರೆಡ್ಡಿ, ಸ್ಥಳೀಯ ಶಾಸಕ ನಿಸರ್ಗ ನಾರಾಯಣಸ್ವಾಮಿ ಸ್ವಾಮಿ2018 ನ. 5ರಂದು ಗುದ್ದಲಿ ಪೂಜೆ ನೆರವೇರಿಸಿದ್ದರು.

ಆದರೆ ರಾಜಕೀಯ ಅನಿರೀಕ್ಷಿತ ಬದಲಾವಣೆಯಲ್ಲಿ ಬಿಜೆಪಿ ಸರ್ಕಾರಅಸ್ತಿತ್ವಕ್ಕೆ ಬಂದ ನಂತರ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಒತ್ತಡದ ಮೇರೆಗೆ ಕನಕಪುರದಲ್ಲಿ ಆರಂಭವಾಗಬೇಕಾಗಿದ್ದ ಮೆಡಿಕಲ್ ಕಾಲೇಜು, ನಂತರ ಪೂಜನಹಳ್ಳಿಯಲ್ಲಿ ಉದ್ದೇಶಿತ ಸಮಗ್ರ ಶೀತಲ ಸರಪಳಿ ಫಟಕ ಸ್ಥಳಾಂತರವಾಗಲಿದೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು ವಿವಿಧ ಜಿಲ್ಲೆಗಳಲ್ಲಿ ಉತ್ತಮ ಗುಣಮಟ್ಟದ ಹಣ್ಣು, ತರಕಾರಿ, ಹೂವನ್ನು ರೈತರು ಬೆಳೆಯುತ್ತಿರುವುದರಿಂದ ಸದರಿ ಉತ್ಪನ್ನಗಳ ರಫ್ತಿಗೆ ಸಹಕಾರಿಯಾಗಲು ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ನೀಡಿ ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೆಪೆಕ್ (ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಪ್ತು ನಿಗಮ) ಭಾರತ ಸರ್ಕಾರ ಅಪೇಡಾ ಸಂಸ್ಥೆ, ರಾಜ್ಯ ತೋಟಗಾರಿಕೆ ಇಲಾಖೆ ವಿವಿಧ ಉತ್ಪನ್ನಗಳ ರಪ್ತುದಾರರು ಒಳಗೊಂಡಂತೆ ಪರಸ್ಪರ ಚರ್ಚೆ ನಡೆಸಿ ವಿಮಾನ ನಿಲ್ದಾಣದ ಸಮೀಪವೇ ಸೂಕ್ತವೆಂದು ನಿರ್ಧರಿಸಿ ಅಂತಿಮ ನಿರ್ಮಾನ ಕೈಗೊಂಡು, ನಾಲ್ಕು ಎಕರೆಯಲ್ಲಿ ವಿವಿಧ ಘಟಕಗಳ ಕಾಮಗಾರಿಗೆ ₹ 25.15 ಕೋಟಿ ವೆಚ್ಚದ ಕ್ರಿಯಾಯೋಜನೆ ರೂಪಿಸಿ, ಟೆಂಡರ್ ಕರೆದು ಗುದ್ದಲ್ಲಿ ಪೂಜೆ ನಡೆಸಿತ್ತು.

ಪ್ರಸ್ತುತ ಆಡಳಿತ ಸರ್ಕಾರದ ನಡೆಗಳು ಪ್ರಶ್ನಾರ್ಹವಾಗುತ್ತಿವೆ ಎಂಬುದು ಸ್ಥಳೀಯ ರೈತರ ಆಕ್ರೋಶ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರತಿ ವರ್ಷ ಸರಾಸರಿ ಒಂದು ಸಾವಿರ ಕೋಟಿಯಷ್ಟು ಮೌಲ್ಯದ ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳು ರಫ್ತಾಗುತ್ತಿದ್ದು ಇದರ ಪ್ರಮಾಣ ಮುಂಬರುವ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆಗಳಿವೆ. ಪೂರಕವಾಗಿ ಕೊಯ್ಲಿನ ನಂತರ ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸಿದಲ್ಲಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ರಪ್ತು ವೃದ್ಧಿ ಜೊತೆಗೆ ರೈತರಿಗೆ ಆಶಾದಾಯಕ ಬೆಲೆ ಸಕಾಲದಲ್ಲಿ ಸಿಗಲಿದೆ ಎಂದು ಶಂಕುಸ್ಥಾಪನೆಯಲ್ಲಿ ಭಾಗವಹಿಸಿದ್ದ ತೋಟಗಾರಿಕಾ ಸಚಿವ ಎಂ.ಸಿ.ಮನಗೊಳಿ ಸಮಗ್ರ ಶೀತಲ ಸರಪಳಿ ಘಟಕದ ಬಗ್ಗೆ ವಿವರಿಸಿದ್ದರು.

ಉದ್ದೇಶಿತ ಸೌಲಭ್ಯಗಳು‌: ಸರಕು ಸ್ವೀಕೃತಿ ಪ್ರದೇಶ, ಸರಕು ಪರಿವೀಕ್ಷಣಾ ಪ್ರದೇಶ, ಸಂಸ್ಕರಣೆ ಮತ್ತು ವಿಂಗಡಣೆ ಪ್ರದೇಶ, ತರಕಾರಿ ಮತ್ತು ಮಾವಿನ ಹಣ್ಣಿನ ವಿಂಗಡಣೆ, ಮಾವಿನ ಹಣ್ಣಿನ ಸ್ಪಾಂಜಿ ಟಿಸ್ಯೂ ಡಿಟೆಕ್ಟರ್, ಮಾವಿನ ಹಣ್ಣಿನ ಬಿಸಿ ನೀರಿನ ಶಾಖೋಪಚಾರಣಾ ಘಟಕ (900 ಕೆ.ಜಿ ಪ್ರತಿ ಗಂಟೆಗೆ) ಮಾವಿನ ಹಣ್ಣಿನ ವೇಪರ್ ಹೀಟ್ ಟ್ರೀಟ್‌ಮೆಂಟ್ ಘಟಕ (1,500 ಕೆ.ಜಿ. ಪ್ರತಿ ವ್ಯಾಟ್), ಹೆಚ್ಚಿನ ಆರ್ದ್ರತೆಯ ಶೀತಲ ಗೃಹಗಳು, 3.10 ಮೆಟ್ರಿಕ್ ಟನ್ 2 ಮತ್ತು 15 ಮೆಟ್ರಿಕ್ ಟನ್ ಒಂದು ಘಟಕ, ಪ್ರಿ–ಕೂಲಿಂಗ್ ಘಟಕ 6, ಮೆಟ್ರಿಕ್ ಸಾಮರ್ಥ್ಯ 2, ದಾಳಿಂಬೆ ಬೀಜ ಪ್ಯಾಕಿಂಗ್ ಪ್ರದೇಶ, ಹಣ್ಣು ಮಾಗಿಸುವ (ಮಾವು ಮತ್ತು ಬಾಳೆ) 10 ಮೆಟ್ರಿಕ್ ಟನ್ 5 ಘಟಕಗಳು, ಬಾಳೆ ಹೆಣ್ಣಿನ ಸಂಸ್ಕರಣಾ ಘಟಕ, ಪ್ಯಾಕಿಂಗ್ ವಸ್ತುಗಳ ಶೇಖರಣಾ ಕೋಣೆ, ಪ್ರಯೋಗಾಲಯ, ಆಡಳಿತ, ವಿದ್ಯುದೀಕರಣ ಇತರೆ ಯಂತ್ರಗಳು, ಇನ್ನಿತರ ಸರಕು ಸಾಗಿಸುವ ವ್ಯವಸ್ಥೆ, ಪ್ಲಾಸ್ಟಿಕ್ ಕ್ರೇಟ್ಸ್ ಪ್ಯಾಕಿಂಗ್ ವ್ಯವಸ್ಥೆ.

ಘಟಕ ಸ್ಥಳಾಂತರದ ಬಗ್ಗೆ ಮಾಹಿತಿ ಇಲ್ಲ

ಘಟಕ ಸ್ಥಳಾಂತರದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪ್ರಸ್ತುತ ಗುರುತಿಸಿರುವ ನಾಲ್ಕು ಎಕರೆಯಲ್ಲಿ 80ಕ್ಕೂ ಹೆಚ್ಚು ವಿವಿಧ ಹಣ್ಣಿನ ಮರಗಳ ಕಟಾವು ಮಾಡಬೇಕಾದ ಅನಿರ್ವಾಯತೆ ಇರುವುದರಿಂದ ಬೇರೆಡೆ ಜಾಗ ಗುರುತಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಇದು ಘಟಕ ನಿರ್ಮಾಣಕ್ಕೆ ವಿಳಂಭವಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಏನು ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ

-ಮಹಂತೇಶ್ ಮುರುಗೋಡ್ ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ

***

ಸ್ಥಳಾಂತರವಾದರೆ ರೈತರಿಕೆ ಕಷ್ಟ

ವಿಮಾನ ನಿಲ್ದಾಣ ಸವೀಪ ಆರಂಭವಾಗುವುದರಿಂದ ಒಂದೇ ಬಾರಿ ಸಾಗಾಣಿಕೆಗೆ ಅವಕಾಶವಿರುತ್ತದೆ. ರೈತರು ತಾವು ಬೆಳೆದ ಉತ್ಪನ್ನಗಳನ್ನು ಚಿಕ್ಕಬಳ್ಳಾಪುರಕ್ಕೆ ಸಾಗಾಣಿಕೆ ಮಾಡಿ ಅಲ್ಲಿಂದ ಮತ್ತೆ ವಿಮಾನ ನಿಲ್ದಾಣಕ್ಕೆ ಎಂದರೆ ರೈತರಿಗೂ ಕಷ್ಟ. ರಪ್ತುದಾರರಿಗೂ ಸಂಕಷ್ಟ. ರೈತರಿಗೆ ಹೊರೆ. ಯಾವುದೇ ಕಾರಣಕ್ಕೂ ಸ್ಥಳಾಂತರವಾಗಬಾರದು

-ಸೋಮಶೇಖರ್ಸ್ಥಳೀಯ ಪಂಚಾಯಿತಿ ಸದಸ್ಯ

***

ಸರ್ಕಾರದ ಯೋಜನೆಗಳಿಗೆ ಬೆಲೆ ಇದೆಯೇ?

ಸ್ಥಳಾಂತರ ಕುರಿತು ಸರ್ಕಾರದ ಮಟ್ಟದಲ್ಲಿ ಎರಡು ಬಾರಿ ಚರ್ಚೆಯಾಗಿದೆ ಎಂಬುದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ರಾಮನಗರ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಎಲ್ಲ ಜಿಲ್ಲೆಯ ರೈತರಿಗೆ ಅನುಕೂಲವಾಗುವ ದೇವನನಹಳ್ಳಿ ಕೇಂದ್ರ ಸೂಕ್ತವಾಗಿದೆ. ಸರ್ಕಾರ ಉಳಿಸಿಕೊಳ್ಳಲು ಅಮಾಯಕ ರೈತರನ್ನು ಬಲಿ ಪಶು ಮಾಡಿದರೆ ಹೋರಾಟ ಅನಿವಾರ್ಯ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು, ಬೆಳೆ ಉತ್ಪನ್ನ ರೈತ ಮುಖಂಡರು, ಉತ್ಪನ್ನಗಳ ರಪ್ತುದಾರರು ಸಭೆ ನಡೆಸಿ ಸೂಕ್ತ ಜಾಗ ಆಯ್ಕೆ ಮಾಡಿ ಸಮಗ್ರ ಶೀತಲ ಸರಪಳಿ ಘಟಕಕ್ಕೆ ಶಂಕು ಸ್ಥಾಪನೆ ಮಾಡಿದ್ದಾರೆ. ಘಟಕ ಖಾಸಗಿ ಎಂಬಂತೆ ಸ್ಥಳಾಂತರ ಮಾಡಿದರೆ ಸರ್ಕಾರದ ಯೋಜನೆಗಳಿಗೆ ಬೆಲೆ ಇದೆಯೇ?

-ಬಿಜ್ಜವಾರ ನಾಗರಾಜ್ಪಿವಿಬಿಎಸ್‌ ಸಂಸ್ಥಾಪಕ ಅಧ್ಯಕ್ಷ

***

ಸ್ಥಳಾಂತರ ಬಗ್ಗೆ ಮಾಹಿತಿ ಇಲ್ಲ. ಸ್ಥಳಾಂತರಕ್ಕೆ ಮುಂದಾದರೆ ವಿಧಾನಸೌಧದಲ್ಲಿ ಹೋರಾಟ ನಡೆಸುತ್ತೇನೆ. ಇದು ನನ್ನ ಗೌರವದ ಪ್ರಶ್ನೆ
-ನಿಸರ್ಗ ನಾರಾಯಣಸ್ವಾಮಿ,ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT