ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಮಳೆ: ಶೇ 70 ರಷ್ಟು ನೆಲಕಚ್ಚಿದ ರಾಗಿ ಬೆಳೆ

Last Updated 17 ನವೆಂಬರ್ 2021, 22:04 IST
ಅಕ್ಷರ ಗಾತ್ರ

ದಾಬಸ್ ಪೇಟೆ: ನಿರಂತರ ಮಳೆಯಿಂದಾಗಿ ನೆಲಮಂಗಲ ತಾಲ್ಲೂಕಿನುದ್ದಕ್ಕೂ ಶೇಕಡ 70ರಷ್ಟು ರಾಗಿ ಬೆಳೆ ನೆಲಕಚ್ಚಿದ್ದು, ಮಳೆ ಹೀಗೆ ಮುಂದುವರಿದರೆ ಹೆಚ್ಚಿನ ಹಾನಿಯಾಗುವ ಆತಂಕ ರೈತರಲ್ಲಿ ಮೂಡಿದೆ.

ರಾಗಿ ಬಿತ್ತನೆ ತಾಲ್ಲೂಕಿನ ಪ್ರಮುಖ ಬೆಳೆಯಾಗಿದೆ. ಇಲ್ಲಿನ ಬಹುತೇಕ ರೈತರು ಕೃಷಿ ಜೊತೆಗೆ ಹೈನುಗಾರಿಕೆಯನ್ನು ಉಪ ಕಸುಬಾಗಿಸಿಕೊಂಡಿದ್ದು, ರಾಗಿ ಜೊತೆಗೆ ಜಾನುವಾರಗಳ ಮೇವಿಗಾಗಿ ರಾಗಿ ಬಿತ್ತನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಾರೆ.
ಕೊಯಿಲು ಮಾಡುವ ಹಂತದಲ್ಲಿ ಮಳೆ ಬಂದದ್ದರಿಂದ ಬಹುತೇಕ ರಾಗಿ ಬೆಳೆ ನೆಲಕಚ್ಚಿದೆ. ತಗ್ಗು ಪ್ರದೇಶಗಳ ಹೊಲಗಳಲ್ಲಿ ನೀರು ನಿಂತು, ರಾಗಿ ತೆನೆಯಲ್ಲಿ ಮೊಳಕೆಯೊಡೆದು ಹುಲ್ಲು ಕೊಳೆಯುತ್ತಿದೆ.

ನೆಲಮಂಗಲ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ 5,938 ಹೆಕ್ಟೇರ್, ಸೋಂಪುರ ಹೋಬಳಿಯಲ್ಲಿ 5,417 ಹೆಕ್ಟೇರ್ ಮತ್ತು ತ್ಯಾಮಗೊಂಡ್ಳು ಹೋಬಳಿಯಲ್ಲಿ 5,217 ಹೆಕ್ಟೇರ್ ಸೇರಿ 16,562 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯಾಗಿದೆ. ಈಗಾಗಲೇ ಒಂದಷ್ಟು ಹೆಕ್ಟೇರ್‌ಗಳಲ್ಲಿ ಬೆಳೆಯು ಮಳೆಯಿಂದ ಹಾಳಾಗಿದೆ. ಮಳೆ ಹೀಗೆ ಮುಂದುವರೆದರೆ, ಇನ್ನಷ್ಟು ಬೆಳೆ ಹಾಳಾಗುವ ಸಂಭವವಿದೆ.

‘ರಾಗಿ ಪೈರು ನೆಲಕಚ್ಚಿರುವುದರಿಂದ ಹುಲ್ಲು ಕೊಳೆಯುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆ ಮಾಡಲು ಸಾಧ್ಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ರಾಗಿ ಹುಲ್ಲಿಗೆ ಅಭಾವ ಸೃಷ್ಟಿಯಾಗುತ್ತದೆ. ರಾಗಿ ಕಪ್ಪಾಗುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ರಾಗಿ ಬೆಲೆ ಕುಸಿಯುತ್ತದೆ’ ಎನ್ನುತ್ತಾರೆ ರೈತ ರಾಮಯ್ಯ.

ಈಗಾಗಲೇ ಶೇಕಡ 10ರಷ್ಟು ರಾಗಿ ಫಸಲು ಕೊಯ್ಲಿಗೆ ಬಂದಿದ್ದು, ಅವು ಮಳೆಯಿಂದ ಕೊಯ್ಲು ಮಾಡಲು ಆಗದೇ ತೆನೆ ಉದುರಿ ಬರಡಾಗುತ್ತಿದೆ. ಜತೆಗೆ ಹುಲ್ಲು ಸಹ ಕೈಗೆ ಸಿಗುವ ನಂಬಿಕೆ ರೈತರಿಗೆ ಇಲ್ಲವಾಗಿದೆ.

ಸೋಂಪುರ ಹೋಬಳಿ ಅನಂತಪುರ ಬೇಚರೆ ಗ್ರಾಮದ ರೈತ ಮುದ್ದ ಮಾರೇಗೌಡ ಅವರ 5 ಎಕರೆ ರಾಗಿ ಬೆಳೆ ಕೆರೆ ಹಿನ್ನೀರಿನಿಂದ ಹಾಳಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಯು ನೀರಿನಲ್ಲಿ ಕೊಚ್ಚಿ ಹೋಗಿದೆ.

‘ಮಳೆಯಿಂದ ರಾಗಿ ಬೆಳೆ ಹಾಳಾಗಿದ್ದರೆ ಕಂದಾಯ ಅಥವಾ ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ, ಎರಡು ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿ, ಬೆಳೆ ನಾಶದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ’ ಎಂದು ನೆಲಮಂಗಲ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪಿ. ರಾಘವೇಂದ್ರ ಹೇಳಿದರು.

ರೈತರು 'ಕರ್ನಾಟಕ ರೈತ ಸುರಕ್ಷಾ ಫಸಲ್ ವಿಮಾ ಯೋಜನೆಯಲ್ಲಿ' ವಿಮೆ ಕಟ್ಟಿದ್ದರೆ, ಬೆಳೆ ನಾಶವಾದ ಸಂದರ್ಭದಲ್ಲಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಪರಿಹಾರ ನೀಡುತ್ತಿತ್ತು. ಆದರೆ, ತಾಲ್ಲೂಕಿನ ಬಹುತೇಕ ರೈತರು ವಿಮೆ ಮಾಡಿಸಲು ತಾತ್ಸಾರ ತೋರಿದ್ದಾರೆ’ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT