ಬುಧವಾರ, ಆಗಸ್ಟ್ 4, 2021
24 °C
ಗ್ರಾಮೀಣ ಜನರಿಗೆ ಜಿ.ಪಂ ಸಿಇಒ ರವಿಕುಮಾರ್‌ ಮನವಿ

ಸೋಂಕು ಮುಕ್ತ ಹಳ್ಳಿಗೆ ಸಹಕರಿಸಿ: ಜಿ.ಪಂ ಸಿಇಒ ರವಿಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಕೋವಿಡ್ ಎರಡನೇ ಅಲೆ ಆರಂಭವಾದಾಗಿನಿಂದ ಮೊದಲ ಅಲೆಗಿಂತ ಹೆಚ್ಚು ಸಾವು, ನೋವು ಸಂಭವಿಸುತ್ತಿವೆ. ಈ ಸಂಖ್ಯೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಜನರು ಸಹಕಾರ ನೀಡಬೇಕು. ಕೋವಿಡ್‌ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ರವಿಕುಮಾರ್ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಮಾತನಾಡಿದ ಅವರು, ಎರಡನೇ ಅಲೆಯಲ್ಲಿ ಮಧ್ಯವಯಸ್ಕರು ಹೆಚ್ಚಿನ ಪ್ರಮಾಣದಲ್ಲಿ ಮರಣ ಹೊಂದುತ್ತಿದ್ದಾರೆ. ಇದರಲ್ಲಿ ಹೋಮ್‌ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಾ, ಆರೋಗ್ಯ ಗಂಭೀರವಾದಾಗ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದರು.

ಪ್ರತಿಯೊಬ್ಬ ಸೋಂಕಿತರು ಮನೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದಕ್ಕಿಂತ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಅಲ್ಲಿ ಉತ್ತಮ ಚಿಕಿತ್ಸೆ, ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ. ಉಸಿರಾಟಕ್ಕೆ ತೊಂದರೆಯಾದರೆ ಆಮ್ಲಜನಕ ಇರುವ ಹಾಸಿಗೆಗಳಿವೆ. ತಕ್ಷಣ ಪಡೆಯಲು ಅನುಕೂಲವಾಗಲಿದೆ. ಈ ಸೌಕರ್ಯವನ್ನು ಜನರು ಸದ್ಬಳಕೆ ಮಾಡಿಕೊಂಡು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಸಹಕರಿಸಬೇಕು ಎಂದು
ಕೋರಿದರು.

ಆಮ್ಲಜನಕ ಕೊರತೆಯಾಗದಂತೆ ಕಾನ್ಸನ್‌ಟ್ರೇಟರ್‌ಗಳನ್ನು ಅಳವಡಿಸಲಾಗಿದೆ. ಉತ್ತಮವಾದ ಚಿಕಿತ್ಸೆಯೂ ಸಿಗುತ್ತಿದೆ. ಸೋಂಕಿತರು ಮನೆಗಳಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸುವುದರಿಂದ ಮನೆಗಳಲ್ಲಿರುವವರಿಗೂ ಈ ಸೋಂಕು ಹರಡುವಂತಹ ಸಾಧ್ಯತೆ ದಟ್ಟವಾಗಿದೆ. ಇದರಿಂದ ಮನೆಯವರೆಲ್ಲರ ಆರೋಗ್ಯ ಕಾಪಾಡಿಕೊಳ್ಳುವುದು ಜನರ ಹೊಣೆಗಾರಿಕೆ ಆಗಿದೆ. ಮನೆಯವರು ಮಾತ್ರವಲ್ಲದೆ, ಯೋಗಕ್ಷೇಮ ವಿಚಾರಿಸಲು ಬರುವವರಿಗೂ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ನಿಯಂತ್ರಣಕ್ಕೆ ಬಾರದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಬಹುದು. ಅದಕ್ಕೆ ಜನರು ಅವಕಾಶ ಮಾಡಿಕೊಡಬಾರದು ಎಂದು ತಿಳಿಸಿದರು.

ಜನಜೀವನ ಸಹಜ ಸ್ಥಿತಿಗೆ ಬರಬೇಕಾದರೆ ಜಿಲ್ಲೆಯಲ್ಲಿ ಸೋಂಕನ್ನು ನಿಯಂತ್ರಣ ಮಾಡಬೇಕಿದೆ. ಜೊತೆಗೆ, ಸಾವಿನ ಪ್ರಮಾಣವನ್ನು ಶೂನ್ಯಕ್ಕೆ ತಂದು ಆಸ್ಪತ್ರೆಗೆ ದಾಖಲಾಗುವಂತಹ ಸೋಂಕಿತರು ಶೀಘ್ರ ಗುಣಮುಖರಾಗಿ ಮನೆಗೆ ತೆರಳುವಂತೆ ಮಾಡಬೇಕಾದರೆ ನಮ್ಮೆಲ್ಲರ ಪ್ರಯತ್ನಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು. ನಿಮ್ಮ ಹಳ್ಳಿಗಳನ್ನು ಸೋಂಕು ಮುಕ್ತ ಮಾಡಲಿಕ್ಕೆ ಜೊತೆಯಾಗಬೇಕು ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು