ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ತಿಬೆಲೆ: ಪಟಾಕಿ ದಾಸ್ತಾನು ಮಳಿಗೆಗೆ ಬೆಂಕಿ– 11 ಮಂದಿ ಸಾವು

Published 7 ಅಕ್ಟೋಬರ್ 2023, 13:51 IST
Last Updated 7 ಅಕ್ಟೋಬರ್ 2023, 16:47 IST
ಅಕ್ಷರ ಗಾತ್ರ

ಆನೇಕಲ್‌: ತಮಿಳುನಾಡಿನಿಂದ ಬಂದ ಪಟಾಕಿಯನ್ನು ಲಾರಿಯಿಂದ ಇಳಿಸುವ ವೇಳೆ ಗಡಿ ಪ್ರದೇಶ ಅತ್ತಿಬೆಲೆಯಲ್ಲಿರುವ ದಾಸ್ತಾನು ಮಳಿಗೆಯೊಂದರಲ್ಲಿ (ಗೋದಾಮು) ಬೆಂಕಿ ಹೊತ್ತಿಕೊಂಡಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಪಟಾಕಿ ದಾಸ್ತಾನು ಮಳಿಗೆ ನಾಲ್ಕೈದು ತಾಸಿನಿಂದ ಹೊತ್ತಿ ಉರಿಯುತ್ತಿದ್ದು, ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಅಗ್ನಿ ಶಾಮಕ ದಳದ ಐದಾರು ವಾಹನಗಳು ಹಾಗೂ ಹತ್ತಾರು ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ.

ಮಳಿಗೆಯಲ್ಲಿ ಸುಮಾರು ಐದು ಕೋಟಿ ಮೌಲ್ಯದ ಪಟಾಕಿಗಳ ಸಂಗ್ರಹ ಇತ್ತು ಎನ್ನಲಾಗಿದೆ. ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಪಟಾಕಿ ಮಳಿಗೆಯಲ್ಲಿ 30-40 ಮಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಹಿಂಬಾಗಿಲಿನಿಂದ ಹೊರಬಂದಿದ್ದರಿಂದ ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಹಲವರು ಒಳಗಡೆ ಸಿಲುಕಿರುವ ಶಂಕೆ ಇದೆ.

ದಾಸ್ತಾನು ಮಳಿಗೆ, ಒಂದು ಲಾರಿ, ಒಂದು ಸರಕು ಸಾಗಣೆ ಮತ್ತು ನಾಲ್ಕು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ. ಘಟನಾ ಸ್ಥಳದಲ್ಲಿ ಪಟಾಕಿಗಳು ಇನ್ನೂ ಸಿಡಿಯುತ್ತಿದ್ದು, ಸುತ್ತಲೂ ದಟ್ಟವಾದ ಬೆಂಕಿ ಮತ್ತು ಹೊಗೆ ಆವರಿಸಿದೆ.

ಪಟಾಕಿ ಮಳಿಗೆ ಮಾಲೀಕ ಸೇರಿ ಐವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ನಾಲ್ಕೈದು ಆಂಬುಲೆನ್ಸ್‌ಗಳು ಬಂದಿವೆ.

ವಾಹನ ದಟ್ಟಣೆ

ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭಾರಿ ಸಂಖ್ಯೆಯ ಜನ ಜಮಾಯಿಸಿದ್ದರು. ಇದರಿಂದ ವಾಹನ ಸಂಚಾರ ನಾಲ್ಕೈದು ಗಂಟೆಗಳ ಕಾಲ ಅಸ್ತವ್ಯಸ್ಥವಾಯಿತು. ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿನತ್ತ ತೆರಳುತ್ತಿದ್ದ ವಾಹನಗಳು ಗಂಟೆ ಗಟ್ಟಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾದು ನಿಲ್ಲಬೇಕಾಯಿತು. ಇದರಿಂದಾಗಿ ಅತ್ತಿಬೆಲೆಯಿಂದ ಸುಮಾರು 2 ಕಿ.ಮೀ.ಗೂ ಹೆಚ್ಚು ದೂರ ವಾಹನಗಳ ಸಾಲುಗಳು ಕಂಡು ಬಂದವು. ಸ್ಥಳದಲ್ಲಿ ಸೇರಿದ್ದ ಜನರನ್ನು ನಿಭಾಯಿಸಲು ಪೊಲೀಸರು ಪರದಾಡಬೇಕಾಯಿತು.

ನಾಳೆ ಸ್ಥಳಕ್ಕೆ ಮುಖ್ಯಮಂತ್ರಿ ಭೇಟಿ

ಬೆಂಗಳೂರು ನಗರ ಜಿಲ್ಲೆ ಆನೇಕಲ್ ಸಮೀಪ ಅತ್ತಿಬೆಲೆಯ ಪಟಾಕಿ ಸಂಗ್ರಹ ಮಳಿಗೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 12 ಮಂದಿ ಮೃತಪಟ್ಟ ಸುದ್ದಿ ತಿಳಿದು ಅತೀವ ನೋವಾಯಿತು. ದುರ್ಘಟನೆ ನಡೆದ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT