ಶುಕ್ರವಾರ, ಮೇ 7, 2021
26 °C

ಎಲ್ಲ ಅಂಗಡಿಗಳಲ್ಲೂ ಜನಜಂಗುಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ (ವಿಜಯಪುರ): ಕೊರೊನಾ ಎರಡನೇ ಅಲೆಯನ್ನು ನಿಯಂತ್ರಣ ಮಾಡಲಿಕ್ಕಾಗಿ ರಾಜ್ಯ ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳು ಕೈಗೊಂಡರೂ ಕ್ರಮಗಳಿಗೆ ಜನರು ಸರಿಯಾಗಿ ಸ್ಪಂದಿಸದ ಕಾರಣದಿಂದಾಗಿ ಸೋಂಕಿತರ ಪ್ರಮಾಣ ಹಾಗೂ ಸಾವಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ.

ಪ್ರತಿದಿನ ಬೆಳಿಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿ ಅವಕಾಶವನ್ನು ಮಧ್ಯಾಹ್ನ 12 ಗಂಟೆಯವರೆಗೆ ವಿಸ್ತರಣೆ ಮಾಡಿರುವ ಕಾರಣ, ಭಾನುವಾರದಂದು ಜನರು ಮಾಂಸದ ಅಂಗಡಿಗಳ ಮುಂದೆ ಅಂತರವಿಲ್ಲದೆ ಮಾಂಸ ಖರೀದಿಗೆ ಮುಗಿಬಿದ್ದಿದ್ದರು.

ಪುರಸಭೆಯ ಅಧಿಕಾರಿಗಳು ಎಷ್ಟೇ ಜಾಗೃತಿ ಮೂಡಿಸಿದರೂ, ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಜನರು, ಸರ್ಕಾರದ ನಿರ್ದೇಶನಗಳು, ಮಾರ್ಗಸೂಚಿಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ, ರಾಜಾರೋಷವಾಗಿ ಎಲ್ಲೆಂದರಲ್ಲಿ ಸುತ್ತಾಡುವುದರ
ಜೊತೆಗೆ, ಅಗತ್ಯ ವಸ್ತುಗಳ ಖರೀದಿಗೆ ಬಂದಾಗ ಹೆಚ್ಚು ಜನರು ಒಟ್ಟಿಗೆ ಸೇರುವ ಮೂಲಕ ಕೊರೊನಾ ಸೋಂಕು ಉಚಿತವಾಗಿ ಹರಡುವಂತೆ ಮಾಡುತ್ತಿದ್ದಾರೆ.

ಅಗತ್ಯ ವಸ್ತುಗಳಾದ ದಿನಸಿ, ಹಾಲು, ಹಣ್ಣು ತರಕಾರಿಗಳ ಖರೀದಿಗೆ ಮಾತ್ರ ಅವಕಾಶ ನೀಡಿದ್ದರೂ ಬೆಳಿಗಿನ ವೇಳೆ ಎಲ್ಲಾ ಅಂಗಡಿಗಳನ್ನು ತೆರೆಯಲಾಗುತ್ತಿರುವುದರ ಜನಸಂದಣಿ ಹೆಚ್ಚಾಗಿ ಕಂಡು ಬರುತ್ತಿದೆ. ಸೋಂಕು ಪ್ರಬಲವಾಗಿ ಹರಡುವ ಭೀತಿ ಎದುರಾಗಿದೆ. ಜನತಾ ಕರ್ಫ್ಯೂ ಇದ್ದರೂ ದ್ವಿಚಕ್ರ ವಾಹನಗಳಲ್ಲಿ ವಿನಾಕಾರಣ ಸಂಚರಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಕೆಲ ಹೋಟೆಲ್‌ಗಳಲ್ಲಿ ಬಾಗಿಲುಗಳನ್ನು ಮುಚ್ಚಿಕೊಂಡು ವ್ಯಾಪಾರ ವಹಿವಾಟು ಮಾಡುತ್ತಿರುವುದು ಕಂಡು ಬರುತ್ತಿದ್ದು, ಹೋಟೆಲ್‌ಗಳು ಕಾಂಡಿಮೆಂಟ್‌ಗಳಾಗಿ ಮಾರ್ಪಡುತ್ತಿವೆ.

ಬೆಳಗಿನ ಜಾವ ಹೋಟೆಲ್‌ಗಳಲ್ಲಿ ತಿಂಡಿ, ಕಾಫಿ, ಟೀ ಕುಡಿಯಲಿಕ್ಕೆ ಬರುವವರು, ಧೂಮಪಾನ ಮಾಡಿಕೊಂಡು ಕುಳಿತುಕೊಳ್ಳುತ್ತಿರುವುದರಿಂದ ಬೇರೆ ಜನರಿಗೂ ತೊಂದರೆಯುಂಟಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಹರೀಶ್ ಬೇಸರ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಪಟ್ಟಣದಲ್ಲಿ ಗಸ್ತು ಮಾಡುವಾಗ ಇಂತಹ ಸ್ಥಳವನ್ನು ಗುರುತಿಸಿ, ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು