ಗುರುವಾರ , ಜನವರಿ 23, 2020
26 °C

ಐತಿಹಾಸಿಕ ಮಾರ್ಗಸೂಚಿ ವೃತ್ತ ಮರುಸ್ಥಾಪನೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 7ರ ನಂದಿ ಬೆಟ್ಟದ ಕ್ರಾಸ್‌ನಲ್ಲಿ ನಿರ್ಮಾಣ ಮಾಡಲಾಗಿದ್ದ ನಂದಿ ಬೆಟ್ಟದ ಮಾರ್ಗಸೂಚಿ ವೃತ್ತ ಮರುಸ್ಥಾಪನೆ ಮಾಡಬೇಕು ಎಂದು ಸ್ಥಳೀಯ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇತಿಹಾಸ ಸಂಶೋಧಕ ಬಿ.ಜಿ.ಗುರುಸಿದ್ದಯ್ಯ ಮಾತನಾಡಿ, ‘ಇಂಗ್ಲೆಂಡಿನ ರಾಣಿ ಎಲಿಜಬೆತ್‌ ಅವರು ನಂದಿ ಬೆಟ್ಟಕ್ಕೆ ಹೋಗುವ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಸೇರಿದ ಸಾವಿರಾರು ಜನರನ್ನುದ್ದೇಶಿಸಿ ಮಾತನಾಡಿದ್ದರು. ಆ ಸ್ಥಳವನ್ನು ರಾಣಿಯವರ ನೆನಪಿಗಾಗಿ ನಂದಿಬೆಟ್ಟದ ಮಾರ್ಗಸೂಚಿ ನಿರ್ಮಿಸಿ, ರಾಣಿ ಸರ್ಕಲ್‌ ಎಂದು ಹೆಸರಿಸಲಾಗಿದೆ. ಆದರೆ, ಈಗ ಆ ಕುರುಹು ಇಲ್ಲ. ಇತಿಹಾಸಕ್ಕೆ ಸಂಬಂಧಿಸಿದ ಘಟನೆಗಳು ಮತ್ತು ಸ್ಥಳಗಳು ಉಳಿಯಬೇಕು. ಈ ಮಾರ್ತಸೂಚಿ ವೃತ್ತ ಮರು ಸ್ಥಾಪಿಸಿದರೆ ದೇವನಹಳ್ಳಿ ನಗರಕ್ಕೊಂದು ಮೆರಗು ಬರುತ್ತದೆ. ಅದಕ್ಕಾಗಿ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎರಡುವರೆ ದಶಕಗಳ ಹಿಂದೆ ರಸ್ತೆ ಅಗಲೀಕರಣಕ್ಕಾಗಿ ನಂದಿಬೆಟ್ಟದ ರಸ್ತೆ ಮಾರ್ಗಸೂಚಿಯನ್ನು ನೆಲಸಮ ಮಾಡಲಾಗಿದೆ. ಮಾರ್ಗಸೂಚಿ ವೃತ್ತದ ಮೇಲೆ ಪ್ರಶಾಂತವಾದ ವಿವಿಧ ಕೆತ್ತನೆಯುಳ್ಳ ನಂದಿ ವಿಗ್ರಹ ನಂದಿಬೆಟ್ಟಕ್ಕೆ ಸಾಗುವ ಪ್ರವಾಸಿಗರಿಗೆ ಆರಂಭದಿಂದಲೇ ಪ್ರೇರಣೆ ನೀಡುತ್ತಿತ್ತು. ಪ್ರವಾಸ ಮುಗಿಸಿ ಹಿಂದಿರುಗುವ ವೇಳೆ ವಿಗ್ರಹವನ್ನೆ ನೋಡಿ ಧನ್ಯತೆ ಸಮರ್ಪಿಸಿ ಪ್ರವಾಸಿಗರು ತೆರಳುತ್ತಿದ್ದರು. ಇದೊಂದು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ವಿಗ್ರಹವಾಗಿತ್ತು. ವಿಶಾಲವಾದ ಜಾಗವಿದ್ದರೂ ಸಾರ್ವಜನಿಕರ ಗಮನಕ್ಕೂ ಬಾರದ ರೀತಿಯಲ್ಲಿ ರಾತ್ರೋರಾತ್ರಿ ಸಂಬಂಧಿಸಿದ ಇಲಾಖೆ ನೆಲಸಮ ಮಾಡಿ ವಿಗ್ರಹ ಕಚೇರಿಯಲ್ಲಿನ ಮೂಲೆಯಲ್ಲಿ ಇಟ್ಟಿರುವುದು ಯಾವ ಪುರುಷಾರ್ಥಕ್ಕೆ ಎಂಬುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಿಮೋಚನಾ ಬಹುಜನ ಸಮಿತಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ನಾಗರಾಜ್‌ ಮಾತನಾಡಿ, ‘ರಾಷ್ಟ್ರೀಯ ಹೆದ್ದಾರಿ 7ರ ಬೈಪಾಸ್‌ ರಸ್ತೆಯಿಂದ ರಾಣಿ ಕ್ರಾಸ್‌ರವರೆಗೆ ಪ್ರಸ್ತುತ ಪುರಸಭೆ ವ್ಯಾಪ್ತಿಗೆ ಬಂದಿದೆ. ರಾಣಿ ಕ್ರಾಸ್‌ನಲ್ಲಿರುವ ಎರಡು ಬದಿಯ ರಸ್ತೆಯನ್ನೆ ಭವಿಷ್ಯದ ದೃಷ್ಟಿಯಿಂದ ಮತ್ತಷ್ಟು ವಿಸ್ತರಣೆ ಮಾಡಿ ನಂದಿ ಬೆಟ್ಟದ ಮಾರ್ಗಸೂಚಿ ಕಟ್ಟಡವನ್ನು ನೂತನ ವಿನ್ಯಾಸದಿಂದ ನಿರ್ಮಾಣ ಮಾಡಿ, ಮೂಲೆಯಲ್ಲಿ ಧೂಳು ತಿನ್ನುತ್ತಿರುವ ನಂದಿ ಪ್ರತಿಮೆ ಪ್ರತಿಷ್ಠಾಪಿಸಿ ವೃತ್ತದ ಸುತ್ತಲೂ ಅಲಂಕಾರಿಕ ಸಸ್ಯಗಳನ್ನು ಬೆಳೆಸಬೇಕು. ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿರುವ ತಾಲ್ಲೂಕಿನಲ್ಲಿ ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು ಹೆಚ್ಚುತ್ತಿದೆ. ಜತೆಗೆ ವೃತ್ತದ ಅಕ್ಕಪಕ್ಕದಲ್ಲಿ ಸ್ಥಳೀಯರಿಗೆ ವ್ಯಾಪಾರ ವಹಿವಾಟು ಹೆಚ್ಚಲಿದೆ ಸಂಬಂಧಿಸಿದ ಇಲಾಖೆ ಇದರ ಬಗ್ಗೆ ಗಮನ ಹರಿಸಬೇಕು ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಪ್ರತಿಕ್ರಿಯಿಸಿ (+)