ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ | ಲಾಕ್‌ಡೌನ್‌ ತೆರವಾದರೆ ಬೇಡಿಕೆ ನಿರೀಕ್ಷೆಯಲ್ಲಿ ಬೆಳೆಗಾರರು

ಹೊಸ ಆಶಾವಾದದಲ್ಲಿ ಕ್ಯಾಪ್ಸಿಕಂ
Last Updated 21 ಏಪ್ರಿಲ್ 2020, 19:42 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಲಾಕ್‌ಡೌನ್‌ ತೆರವಾದ ನಂತರವಾದರೂ ಒಂದಿಷ್ಟು ಮಾರುಕಟ್ಟೆ ದೊರೆಯಬಹುದು ಎನ್ನುವ ನಿರೀಕ್ಷೆಯಲ್ಲಿ ಗಿಡಗಳಲ್ಲಿ ಕಾಯಿಗಳು ಉಳಿಯದಂತೆ ಇನ್ನು ಹಸಿರಾಗಿರುವಾಗಲೇ ಕಿತ್ತು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇವೆ. ಉಳಿದವನ್ನು ತಿಪ್ಪೆಗೆಹಾಕಲಾಗುತ್ತಿದೆ’

ತಾಲ್ಲೂಕಿನ ಎಸ್‌.ಎಂ.ಗೊಲ್ಲಹಳ್ಳಿ ಗ್ರಾಮದ ರೈತ ಮಲ್ಲೇಶ್‌ ಎರಡು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿರುವ ಕ್ಯಾಪ್ಸಿಕಂ (ಬಣ್ಣದ ದಪ್ಪ ಮೆಣಸಿನ ಕಾಯಿ) ಬೆಳೆದು ತಾವು ಪಡುತ್ತಿರುವ ಪಾಡನ್ನು ಹೇಳಿಕೊಂಡರು.

‘ಸಾಮಾನ್ಯವಾಗಿ ಫೆಬ್ರುವರಿ ಕೊನೆಯ ವಾರದಿಂದ ಆರಂಭವಾಗಿ ಜೂನ್‌ ಕೊನೆಯವರೆಗೂ ಸಹ ಬಣ್ಣದ ಕ್ಯಾಪ್ಸಿಕಂಗೆ ಉತ್ತಮ ಬೇಡಿಕೆ ಇದ್ದೇ ಇರುತ್ತದೆ. ಕಾರಣ ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚು. ಹೀಗಾಗಿ ಪಾಲಿಹೌಸ್‌ನಲ್ಲಿ ಮಾತ್ರ ಕ್ಯಾಪ್ಸಿಕಂ ಬೆಳೆಯಲು ಸಾಧ್ಯ. ಹೊಲದಲ್ಲೇ ಬೆಳೆದರೆ ರೋಗಬಾಧೆ, ಕೀಟಬಾಧೆಯನ್ನೂ ಎದುರಿಸಬೇಕಾಗುತ್ತದೆ’ ಎಂದರು.

ಸ್ಥಳೀಯ ಮಾರುಕಟ್ಟೆ ಕಡಿಮೆ: ‘ಬಣ್ಣದ ಕ್ಯಾಪ್ಸಿಕಂಗೆ ಹೆಚ್ಚಿನ ಬೇಡಿಕೆ ಇರುವುದೇ ಗುಜರಾತ್‌, ಉತ್ತರಪ್ರದೇಶ, ದೆಹಲಿ, ರಾಜಸ್ತಾನ, ಮಹಾರಾಷ್ಟ್ರದಲ್ಲಿ. ಇದಲ್ಲದೆ ದುಬೈ, ಬಾಂಗ್ಲಾದೇಶ, ಪಾಕಿಸ್ತಾನದಲ್ಲಿ ಹೆಚ್ಚಿನ ಬೇಡಿಕೆಯಿದೆ. ನಮ್ಮಲ್ಲಿ ಹಣ್ಣು ತಿನ್ನುವ ರೀತಿಯಲ್ಲಿಯೇ ಅಲ್ಲಿನ ಜನ ಇತರ ಹಣ್ಣುಗಳೊಂದಿಗೆ ಸೇರಿಸಿಕೊಂಡು ಸಿಹಿಯಾಗಿರುವ ಬಣ್ಣದ ಕ್ಯಾಪ್ಸಿಕಂ ಸೇವನೆ ಮಾಡುತ್ತಾರೆ’ ಎನ್ನುತ್ತಾರೆ ರೈತ ಮಲ್ಲೇಶ್‌.

‘ಸ್ಥಳೀಯ ಮಾರುಕಟ್ಟೆಗಳಲ್ಲಿ ಹಸಿರು ಬಣ್ಣದ ಕ್ಯಾಪ್ಸಿಕಂಗೆ ಸ್ವಲ್ಪಮಟ್ಟಿಗೆ ಬೇಡಿಕೆ ಇದೆ. ಬಣ್ಣದ ಕ್ಯಾಪ್ಸಿಕಂಗೆ ಹೊರ ರಾಜ್ಯ, ದೇಶಗಳ ಮಾರುಕಟ್ಟೆಯನ್ನು ನಂಬಿಯೇ ಬೆಳೆ ಬೆಳೆಯಲಾಗುತ್ತದೆ. ವ್ಯಾಪಾರಿಗಳು ತೋಟದಲ್ಲಿಯೇ ಬಂದು ಹದವಾಗಿರುವ ಕಾಯಿಗಳನ್ನು ಕೊಯ್ಲು ಮಾಡಿಸಿ ರಫ್ತು ಗುಣಮಟ್ಟದ ಪ್ಯಾಕ್‌ಗಳನ್ನು ಸಹ ಇಲ್ಲಿಯೇ ಸಿದ್ಧಪಡಿಸಿ ತೆಗೆದುಕೊಂಡು ಹೋಗುತ್ತಿದ್ದರು. ಲಾಕ್‌ಡೌನ್‌ ಜಾರಿಯಾದ ನಂತರ ನಾವೇ ಕೊಯ್ದು ಮಾಡಿ ಪ್ಯಾಕ್‌ ಮಾಡಿ ಕಳುಹಿಸುತ್ತೇವೆ. ಮಾರಾಟ ಮಾಡಿದ ನಂತರ ಹಣ ನೀಡಿ ಅಂದರೂ ಯಾರೊಬ್ಬ ವ್ಯಾಪಾರಿಯು ಸಹ ಖರೀದಿಸಲು ಮುಂದೆ ಬರುತ್ತಿಲ್ಲ’ ಎಂದರು.

50 ಎಕರೆ ಕ್ಯಾಪ್ಸಿಕಂ:‘ತಾಲ್ಲೂಕಿನಲ್ಲಿ ಪಾಲಿಹೌಸ್‌ ನಿರ್ಮಿಸಿಕೊಂಡಿರುವ ಬಹುತೇಕ ರೈತರು ಬೇಸಿಗೆಯ ಒಂದು ಬೆಳೆಯನ್ನು ಕ್ಯಾಪ್ಸಿಕಂ ಬೆಳೆಯುತ್ತಾರೆ. ಈ ಅವಧಿಯಲ್ಲಿ 1 ಕೆ.ಜಿ. ಬಣ್ಣದ ಕ್ಯಾಪ್ಸಿಕಂಗೆ ₹ 80ರಿಂದ ₹ 120ಗಳವರೆಗೆ ಬೆಲೆ ಇರುತ್ತದೆ. ಅಲ್ಲದೆ ಎಂದು ಎಕರೆಗೆ 60ರಿಂದ 80 ಟನ್‌ವರೆಗೂ ಇಳುವರಿ ಬರುತ್ತದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ತಾಲ್ಲೂಕು ನಿರ್ದೇಶಕ ಎಂ.ಶ್ರೀನಿವಾಸ್‌.

‘ಕ್ಯಾಪ್ಸಿಕಂ ಬೆಳೆದಿರುವ ರೈತರು ಗಿಡಗಳನ್ನು ಕಿತ್ತು ಹಾಕದಂತೆ ಯಾವ ರೀತಿ ಉಳಿಸಿಕೊಳ್ಳಬೇಕು ಎನ್ನುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಒಂದು ಎಕರೆ ಪ್ರದೇಶದಲ್ಲಿ ಕ್ಯಾಪ್ಸಿಕಂ ಬೆಳೆಯಲು ಸಸಿ, ಗೊಬ್ಬರ, ತಯಾರಿ ಸೇರಿದಂತೆ ಸುಮಾರು ₹ 4 ಲಕ್ಷದವರೆಗೂ ಖರ್ಚು ಬರಲಿದೆ. ಲಾಕ್‌ಡೌನ್‌ ತೆರವಾದ ನಂತರ ಉತ್ತಮ ಬೇಡಿಕೆ ಬರುವ ನಿರೀಕ್ಷೆ ಇದೆ. ತಾಲ್ಲೂಕಿನಲ್ಲಿ ಹಸಿರು ಮನೆಗಳಲ್ಲಿ ಕ್ಯಾಪ್ಸಿಕಂ, ಹೂವು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ರೈತರು ಸಲ್ಲಿಸಿರುವ ಮನವಿಗಳನ್ನು ಜಿಲ್ಲಾ ತೋಟಗಾರಿಕೆ ನಿರ್ದೇಶಕರ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT