ದೇವನಹಳ್ಳಿ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡುವ ಸಮಯದಲ್ಲಿ 2017ರಲ್ಲಿ ರೂಪಿಸಿರುವ ನಿಯಮವನ್ನು 2016ಕ್ಕೂ ಮುನ್ನ ನೇಮಕಗೊಂಡ ಶಿಕ್ಷಕರಿಗೆ ಅನ್ವಯಿಸಬಾರದು ಎಂದು ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಆದರ್ಶ್ ಒತ್ತಾಯಿಸಿದರು.
ಸೋಮವಾರ ಪಟ್ಟಣದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಹೋರಾಟಕ್ಕೆ ತೆರಳುವ ಮುನ್ನ ಮಾತನಾಡಿದ ಅವರು, ಪ್ರೌಢಶಾಲೆಗಳಿಗೆ ಬಡ್ತಿ ನೀಡುವಾಗ ವಿದ್ಯಾರ್ಹತೆಯನ್ನೇ ಪರಿಗಣಿಸಬೇಕು ಎಂದು ಆಗ್ರಹಿಸಿದರು.
2017ರಲ್ಲಿ ರೂಪಿಸಿರುವ ನಿಯಮದಿಂದ 2016ಕ್ಕೂ ಮುನ್ನವೇ ನೇಮಕ ಆಗಿರುವ ಶಿಕ್ಷಕರಿಗೆ ಅನ್ಯಾಯವಾಗುತ್ತದೆ. ಶಿಕ್ಷಣ ಇಲಾಖೆಯೂ ಹೊರಡಿಸಿರುವ ಆದೇಶ ಹಿಂಪಡೆಯಬೇಕು ಎಂದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ನಾಗೇಶ್.ಎಚ್.ಎನ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಎಲ್.ಎಸ್. ಯತೀಶ್ ಕುಮಾರ್, ಸಹ ಕಾರ್ಯದರ್ಶಿ ಎ. ಮಂಜುನಾಥ, ಪದಾಧಿಕಾರಿಗಳಾದ ಕೆ.ಹರೀಶ್, ಪದ್ಮಾವತಿ, ಜಿ.ಗೀತಾ, ಎಚ್.ಕೆ ಸುಜಾತಾ , ಚಂದ್ರಪ್ಪ, ಆಂಜಿನಪ್ಪ ಇದ್ದರು.