ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆಗೆ ನಲುಗಿದ ದೇವನಹಳ್ಳಿ

ಸರಾಗವಾಗಿ ಹರಿಯದ ಚರಂಡಿ । ಕೆರೆಯಂತಾದ ರಸ್ತೆ, ತಗ್ಗು ಪ್ರದೇಶಗಳು
Published 3 ಜೂನ್ 2024, 4:37 IST
Last Updated 3 ಜೂನ್ 2024, 4:37 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗ್ರಾಮೀಣ ಭಾಗ ಸೇರಿದಂತೆ ಪಟ್ಟಣ ಪ್ರದೇಶದಲ್ಲಿ ಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಮಳೆ ನೀರು ತಗ್ಗು ಪ್ರದೇಶಕ್ಕೆ ನಗ್ಗುತ್ತಿದೆ.

ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಚರಂಡಿಗಳಿಗೆ ಸೂಕ್ತವಾಗಿ ಸಂಪರ್ಕವಿಲ್ಲ. ಮುಂಗಾರು ಪೂರ್ವ ಮಳೆ ಅವಾಂತರ ಸೃಷ್ಟಿಯಾಗಿದೆ. ಇನ್ನೂ ಮುಂಗಾರು ಮಳೆ ಆರಂಭವಾದರೆ ಗತಿಯೇನು?. ಮುಂಗಾರು

ಮಳೆ ಬರುವ ಮುನ್ನವೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪುರಸಭೆ ಕಚೇರಿಯ ಮುಂಭಾಗದಲ್ಲಿಯೇ ಮಳೆ ನೀರು ನಿಲ್ಲುವಂತಾಗಿದೆ.

ಪಟ್ಟಣದ ಬಿಬಿ ರಸ್ತೆಯಲ್ಲಿ ಚರಂಡಿಯಲ್ಲಿ ತುಂಬಿದ ಕಸವನ್ನು ಪುರಸಭೆ ಅಧಿಕಾರಿಗಳು ಸ್ವಚ್ಛಗೊಳಿಸಿಲ್ಲ. ಇದರಿಂದ ಮಳೆ ನೀರು ರಸ್ತೆಗಳಲ್ಲಿ ಹರಿದು, ವಾಹನ ಸವಾರರಿಗೆ ಸಂಕಷ್ಟ ಉಂಟಾಗಿದೆ.

ರಾಜ ಕಾಲುವೆಯಲ್ಲಿ ಕಳೆ ಗಿಡಗಳು ಬೆಳೆದಿರುವುದರಿಂದ ಮಳೆ ನೀರು ಕೆರೆ ಸೇರದೇ ಮನೆಗಳಿಗೆ ನುಗ್ಗುತ್ತಿದೆ.

ಐತಿಹಾಸಿಕ ದೇವನಹಳ್ಳಿ ಕೋಟೆಯ ಮುಂಭಾಗ ಮೋರಿ ಮುಚ್ಚಿರುವ ಕಾರಣ ರಾಜ ಬೀದಿಯಲ್ಲಿ ಬಿದ್ದ ಮಳೆ ನೀರು ಕೋಟೆಯ ದ್ವಾರದಲ್ಲಿ ಸಂಗ್ರಹವಾಗಿ ಇತಿಹಾಸ ಪ್ರಸಿದ್ಧ ಕೋಟೆಗೆ ಧಕ್ಕೆಯಾಗುತ್ತಿದ್ದು, ಕೋಟೆಯಲ್ಲಿ ವಾಸಿಸುತ್ತಿರು ಜನನಿಬಿಡ ಪ್ರದೇಶ ಮುಳುಗಡೆಯ ಭೀತಿ ಎದುರಿಸುತ್ತಿದೆ.

ಪ್ರತಿ ವರ್ಷವೂ ಮಳೆ ಬಂದರೇ ಚರಂಡಿ ಮತ್ತು ಮಳೆ ನೀರು ಒಟ್ಟಿಗೆ ಹರಿಯುತ್ತಿದೆ. ಇದನ್ನು ನಿವಾರಿಸಲು ಯಾವ ಜನಪ್ರತಿನಿಧಿ ಮತ್ತು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಚೆಗೆ ಮಳೆಗೆ ಪಟ್ಟಣದ ಹೆಬ್ಬಾಗಿಲಿನಂತಿರುವ ಕೆಂಪೇಗೌಡ ವೃತ್ತದಲ್ಲಿ ಮಳೆ ನೀರು ಸಂಗ್ರಹವಾಗಿ, ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌ ರಸ್ತೆಯೂ ಕೆರೆಯಾಗಿ ಬದಲಾಗುತ್ತಿದೆ. ಇದನ್ನು ನೋಡಿ ನೋಡದಂತೆ ಪುರಸಭೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ.

ವಿಮಾನ ನಿಲ್ದಾಣ, ಬೆಂಗಳೂರು ಮಾರ್ಗದಿಂದ ದೇವನಹಳ್ಳಿಗೆ ತಲುಪುವ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಬಿಬಿ ರಸ್ತೆಯಲ್ಲಿ ಸಂಚರಿಸುವ ವೇಳೆ ಪ್ರಾಣ ಕೈಯಲ್ಲಿ ಹಿಡಿದು ಸಾಗಬೇಕು. ನೀರಿನಿಂದ ಬೈಕ್‌ ಕೆಟ್ಟು ನಿಂತು ಸವಾರರು ಪರದಾಡುತ್ತಿದ್ದಾರೆ.

ಸೂಲಿಬೆಲೆ ರಸ್ತೆಯೂ ಮಳೆಯಿಂದ ಜಲಾವೃತ್ತಾಗಿ ಸಂಪರ್ಕ ಸಿಗದೇ ಸಾರ್ವಜನಿಕರು ಹಿಡಿ ಶಾಪ ಹಾಕುವಂತಾಗಿದೆ.

ಮುಂಬಾರು ಮಳೆ ಹಿನ್ನಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆಯಲು ಪುರಸಭೆ ಆಡಳಿತಾಧಿಕಾರಿ ಶ್ರೀನಿವಾಸ್‌ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ಉತ್ತರ ನೀಡಲಿಲ್ಲ. 

ರಾಷ್ಟ್ರ ಮಟ್ಟದ ಮುಖಂಡ ಎಂದು ಬಿಂಬಿಸಿಕೊಳ್ಳುವಲ್ಲಿ ನಿರತರಾಗಿರುವ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಅನುದಾನ ಬಳಕೆ ಮಾಡಿ ದೇವನಹಳ್ಳಿಯನ್ನು ಮಳೆಯಿಂದ ಕಾಪಾಡಲು ಯೋಚಿಸಬೇಕು

-ಮಹೇಂದ್ರ ಸ್ವಾಮಿ ಸ್ಥಳೀಯ ನಿವಾಸಿ

ದೇವನಹಳ್ಳಿಯಲ್ಲಿ ನೆಪ ಮಾತ್ರಕ್ಕೆ ಮನೆ ಮಾಡಿ ರಾಜಕೀಯ ಲಾಭ ಪಡೆಯುವ ಸಚಿವರು ಇಲ್ಲಿನ ಜನರ ನೋವನ್ನು ಅರ್ಥ ಮಾಡಿಕೊಂಡು ಮಳೆಯಿಂದ ರಕ್ಷಿಸುವ ಟಾಸ್ಕ್‌ ಪೋರ್ಸ್‌ ರಚಿಸಲಿ

- ಮಧು ಚಂದ್ರ ಮಾನವ ಹಕ್ಕುಗಳ ಹೋರಾಟಗಾರ

ಸಚಿವರ ಶಾಸಕರ ಅನುದಾನ ಬಳಕೆ ಮಾಡಿ ಪ್ರತಿ ವರ್ಷವೂ ಮಳೆಯಿಂದಾಗಿ ಜಲಾವೃತ್ತವಾಗುವ ಬೈಪಾಸ್‌ ರಸ್ತೆ ಸೂಲಿಬೆಲೆ ರಸ್ತೆ ಮತ್ತು ಚರಂಡಿ ಹಾಗೂ ರಾಜಕಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ದೇವನಹಳ್ಳಿಯ ವಿವಿಧ ಕಾಲುವೆಗಳನ್ನು ದುರಸ್ತಿಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರ ಅನುದಾನ ಬಳಕೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಉಸ್ತುವಾರಿ ಸಚಿವರ ಸ್ವ ಕ್ಷೇತ್ರದ ಅಭಿವೃದ್ಧಿಯಲ್ಲಿ ಆಸಕ್ತಿವಹಿಸದೇ ಇರುವುದಕ್ಕೆ ಸಾರ್ವಜನಿಕರು ಆಕ್ರೊಶ ವ್ಯಕ್ತಪಡಿಸಿದ್ದಾರೆ. ದುರಸ್ತಿಗೆ ಪುರಸಭೆಯಲ್ಲಿಲ್ಲ ಹಣ ದೇವನಹಳ್ಳಿ ಪುರಸಭೆಯಲ್ಲಿ ಅಧ್ಯಕ್ಷರು ಇಲ್ಲದೇ ದೊಡ್ಡಬಳ್ಳಾಪುರದ ವಿಭಾಗಾಧಿಕಾರಿಯನ್ನೇ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಎಲ್ಲದಕ್ಕೂ ಅವರ ಅನುಮತಿಗಾಗಿ ಅಧಿಕಾರಿಗಳು ಕಾಯಬೇಕು. ವಿಶ್ವ ದರ್ಜೆಯ ನಗರವನ್ನಾಗಿ ದೇವನಹಳ್ಳಿಯನ್ನು ಮಾಡುತ್ತೇವೆ ಎಂದ ರಾಜಕೀಯ ವ್ಯಕ್ತಿಗಳು ದೆಹಲಿ ಮಧುರೆ ಪ್ರವಾಸದಲ್ಲಿರುವ ಕಾರಣ ಸರ್ಕಾರದಿಂದ ಅನುದಾನ ಸಿಗದೇ ಸಣ್ಣ ಚರಂಡಿ ಕಾಮಗಾರಿಯನ್ನು ಮಾಡಲು ಸಾಧ್ಯವಾಗದೇ ಹಣವಿಲ್ಲ ಎಂಬ ಸಿದ್ಧ ಉತ್ತರ ಪುರಸಭೆ ಅಧಿಕಾರಿಗಳು ನೀಡುತ್ತಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT