ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದಿ | ಅನುದಾನ ಹಂಚಿಕೆ ತಾರತಮ್ಯ: ಕಾಂಗ್ರೆಸ್‌ ಸದಸ್ಯರ ಅಸಮಾಧಾನ

ಶಾಸಕ ಎ. ಮಂಜುನಾಥ್ ವಿರುದ್ಧ ಕಾಂಗ್ರೆಸ್ ಪುರಸಭೆ ಸದಸ್ಯರ ಆರೋಪ
Last Updated 19 ನವೆಂಬರ್ 2022, 6:38 IST
ಅಕ್ಷರ ಗಾತ್ರ

ಬಿಡದಿ: ಪುರಸಭೆಯ 23 ವಾರ್ಡ್‌ಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಲಾಗಿದೆ ಎಂಬ ಶಾಸಕ ಎ. ಮಂಜುನಾಥ್ ಅವರ ಹೇಳಿಕೆಗೆ ಪುರಸಭೆಯ ಕಾಂಗ್ರೆಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಕಾನ್ ಕಾಲೇಜಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅನುದಾನ ಹಂಚಿಕೆ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡಿದ ಪುರಸಭೆ ಸದಸ್ಯ ಉಮೇಶ್ ಮಾತನಾಡಿದರು.

‘ಶಾಸಕ ಮಂಜನಾಥ್ ಹಣ ಮತ್ತು ಅಧಿಕಾರದ ವ್ಯಾಮೋಹದಿಂದ ಮಾತನಾಡಿದ್ದಾರೆ. ಆದರೆ, ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂಬುದನ್ನು ಅರಿತುಕೊಳ್ಳಲಿ. ಅವರು ಯಾವ ಮಾನದಂಡ ಇಟ್ಟುಕೊಂಡು ಪುರಸಭೆಯ ಎಲ್ಲ 23 ವಾರ್ಡ್‌ಗಳಿಗೆ ಸಮನಾಗಿ ಅನುದಾನ ಹಂಚಿಕೆ ಮಾಡಲಾಗಿದೆ ಎನ್ನುತ್ತಿದ್ದಾರೆ ಎಂಬುದು ಗೊತ್ತಿಲ್ಲ’ ಎಂದರು.

‘ನಾನು ಪ್ರತಿನಿಧಿಸುವ 13ನೇ ವಾರ್ಡ್‌ಗೆ ಎಸ್‌ಎಫ್‌ಸಿ ಅನುದಾನದಲ್ಲಿ ₹86 ಲಕ್ಷ ಹಣವನ್ನು ಪಟ್ಟಿಯಲ್ಲಿ ಸೇರಿಸಿ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ, ಶಾಸಕರು ಉದ್ದೇಶಪೂರ್ವಕವಾಗಿ ಅನುದಾನ ಹಿಂಪಡೆದು, ಜೆಡಿಎಸ್ ಸದಸ್ಯರಿರುವ 7 ಮತ್ತು 8ನೇ ವಾರ್ಡ್‌ಗಳಿಗೆ ಹಣ ಹಂಚಿಕೆ ಮಾಡಿದ್ದಾರೆ’ ಎಂದು ದೂರಿದರು.

ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜ್ ಮಾತನಾಡಿ, ‘ಇದೇ ಸೋಮವಾರ ಪುರಸಭೆ ವಾರ್ಡ್‌ಗಳ ತಾರತಮ್ಯ ಖಂಡಿಸಿ ಪುರಸಭೆ ಎದರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದಾರೆ. ಹಾಗಾಗಿ ಪುರಸಭೆ ವ್ಯಾಪ್ತಿಯ ನಾಗರಿಕರ ಜೊತೆಗೂಡಿ ಹೋರಾಟ ಹಮ್ಮಿಕೊಳ್ಳಲಾಗಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ರಾಮಚಂದ್ರು, ಕುಮಾರ್, ಹೊಂಬಣ್ಣ, ನವೀನ್, ಶ್ರೀನಿವಾಸ್, ಬಿಂದ್ಯಾ, ಮಹಿಮಾ ಕುಮಾರ್, ಬೆಟ್ಟಸ್ವಾಮಿ, ಅಬ್ಬನಕುಪ್ಪೆ ರಮೇಶ್, ಬಾನಂದೂರು ಕುಮಾರ್ ಸೇರಿ ಹಲವರು ಇದ್ದರು.

ಪಟ್ಟಣಕ್ಕೆ ನಿಮ್ಮ ಕೊಡುಗೆಯೇನು?

ಕಳೆದ ನಾಲ್ಕು ವರ್ಷಗಳಿಂದ ಶಾಸಕರಾಗಿರುವ ನೀವು(ಎ. ಮಂಜನಾಥ್) ಬಿಡದಿ ಪಟ್ಟಣಕ್ಕೆ ನೀಡಿರುವ ಅಭಿವೃದ್ಧಿಯ ಕೊಡುಗೆ ಏನು ಎಂಬುದನ್ನು ಜನತೆಯ ಎದುರು ತೆರೆದಿಡುವಂತೆ ಕಾಂಗ್ರೆಸ್ ಸದಸ್ಯ ಉಮೇಶ್ ಸವಾಲು ಹಾಕಿದರು.

ಬಾಲಕೃಷ್ಣ ಅವರು ಶಾಸಕರಾಗಿದ್ದ ವೇಳೆ ಪಟ್ಟಣದ ಎಲ್ಲ ವಾರ್ಡ್‌ಗಳ ಯುಜಿಡಿ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಸಂಪುಟದ ಅನುಮತಿ ಪಡೆದಿದ್ದರು. ಈ ಯೋಜನೆಗಳನ್ನು ನೀವು
ಮುಂದುವರಿಸಿದ್ದೀರಿ ಅಷ್ಟೇ. ನಿಮ್ಮ ಸ್ವಂತ ಕೊಡುಗೆ ಏನೆಂಬುದನ್ನು ಜನತೆಯ ಮುಂದೆ ಹೇಳಬೇಕೆಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT