ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1.50 ಕೋಟಿ ಉಳಿತಾಯ ಕರಡು ಬಜೆಟ್

ದೊಡ್ಡಬಳ್ಳಾಪುರ ನಗರಸಭೆ ಬಜೆಟ್ ಸಮಾಲೋಚನೆ ಸಭೆ
Last Updated 7 ಫೆಬ್ರುವರಿ 2023, 4:52 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರಸಭೆಯ 2023-24ನೇ ಸಾಲಿನ ಆಯ-ವ್ಯಯದ ಸಾರ್ವಜನಿಕ ಸಮಾಲೋಚನೆಯ ಎರಡನೇ ಸಭೆ ನಗರದ ಡಾ.ರಾಜ್‍ಕುಮಾರ್ ಕಲಾ ಮಂದಿರದಲ್ಲಿ ನಗರಸಭೆ ಅಧ್ಯಕ್ಷೆ ಎಸ್.ಸುಧಾರಾಣಿ ಲಕ್ಷ್ಮೀನಾರಾಯಣ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.

ಬಜೆಟ್ ವಿವರ ಮಂಡಿಸಿದ ನಗರಸಭೆ ಲೆಕ್ಕಾಧಿಕಾರಿ ನಂದೀಶ್‌, 2022-23ನೇ ಸಾಲಿನ ಪರಿಷ್ಕೃತ ಅಂದಾಜು ಆಯವ್ಯಯದಲ್ಲಿ ಆದಾಯ ₹59.07 ಕೋಟಿ ನಿರೀಕ್ಷಿಸಲಾಗಿದ್ದು, ಇದರಲ್ಲಿ ಖರ್ಚು ₹48.10ಕೋಟಿ ಗಳಾಗಿದೆ. ₹10.97ಕೋಟಿ ಉಳಿತಾಯ ನಿರೀಕ್ಷಿಸಲಾಗಿದೆ. 2023-24ನೇ ಸಾಲಿಗೆ ಆದಾಯ ₹70.19 ಕೋಟಿ ನಿರೀಕ್ಷಿಸಲಾಗಿದ್ದು, ಇದರಲ್ಲಿ ಖರ್ಚು ₹68.69 ಕೋಟಿ ಗಳಾಗಿದೆ. ₹1.50ಕೋಟಿ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

2021-22ನೇ ಸಾಲಿನ ವಾಸ್ತವಿಕ ಲೆಕ್ಕದಲ್ಲಿ ಆದಾಯ ₹47.91 ಕೋಟಿ ಇದರಲ್ಲಿ ಖರ್ಚು ₹31.18 ಕೋಟಿ ಗಳಾಗಿದೆ. ₹16.72 ಕೋಟಿ ಉಳಿತಾಯವಾಗಿದೆ.

2022ರ ಡಿಸೆಂಬರ್ ತಿಂಗಳ ಅಂತ್ಯದವರೆಗೆ ₹44.16 ಕೋಟಿ
ಕ್ರೋಡೀಕರಣವಾಗಿದ್ದು, ಇದರಲ್ಲಿ ₹31.23 ಕೋಟಿ ಖರ್ಚಾಗಿದೆ. ಡಿಸೆಂಬರ್ ಅಂತ್ಯಕ್ಕೆ ಉಳಿಕೆ ₹12.92 ಕೋಟಿ ಆಗಿದೆ ಎಂದರು.

ನಾಗರಿಕರಿಂದ ನಗರಸಭೆಗೆ ಗ್ರಂಥಾಲಯ, ಆರೋಗ್ಯ, ಭಿಕ್ಷುಕರು, ಸಾರಿಗೆ ಸೇರಿದಂತೆ ಮೊದಲಾದ ಕರವನ್ನು ತೆರಿಗೆಯೊಂದಿಗೆ ಕಟ್ಟಿಸಿ ಕೊಂಡು ಸಂಬಂಧಿಸಿದ ಇಲಾಖೆಗೆ ನೀಡಲಾಗುತ್ತಿದೆ. ಆದರೆ ಆಯಾ ಇಲಾಖೆಗಳಿಂದ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಪ್ರಯೋಜನವಾಗುತ್ತಿಲ್ಲ. ಭಿಕ್ಷುಕರ ಕರ ಕಟ್ಟಿಸಿಕೊಳ್ಳುವ ಇಲಾಖೆ, ಭಿಕ್ಷುಕರ ಪುನರ್ವಸತಿಗಾಗಿ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಗಮನ ಹರಿಸಬೇಕಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಸಲಹೆ ನೀಡಿದರು.

ಜ.3 ರಂದು ನಡೆದ ಸಭೆಯ ನಡಾವಳಿಗಳನ್ನು ಮಂಡಿಸಿದ ನಗರಸಭೆ ಮುಖ್ಯ ಲೆಕ್ಕಾಧಿಕಾರಿ ಎನ್.ನಂದೀಶ್, ಹಿಂದಿನ ನಡಾವಳಿಗಳ ಬಗ್ಗೆ ಕೈಗೊಂಡಿರುವ ತೀರ್ಮಾನ ತಿಳಿಸಿದರು. ಸಲಹೆಗಳನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರುವುದು. ಕೆಲವು ಸಲಹೆಗಳನ್ನು ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವುದು ಹಾಗೂ ಆಯವ್ಯಯದಲ್ಲಿ ಅಳವಡಿಸಿಕೊಂಡಿರುವ ಕುರಿತು ಮಾಹಿತಿ ನೀಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷೆ ಆದಿಲಕ್ಷ್ಮೀ, ನಗರಸಭೆ ಹಿರಿಯ ಸದಸ್ಯ ಟಿ.ಎನ್.ಪ್ರಭುದೇವ್, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

ಶೌಚಾಲಯ ನಿರ್ವಹಣೆಗೆ ಹಣ ಮೀಸಲಿಡಿ

ಸಾರ್ವಜನಿಕರು ಎಲ್ಲೆಂದರಲ್ಲಿ ಮೂತ್ರ ವಿಸರ್ಜಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣ ಹೆಚ್ಚಬೇಕಿದೆ. ಶೌಚಾಲಯ ನಿರ್ವಹಣೆ ಮತ್ತು ದುರಸ್ತಿಗೆ ಅಗತ್ಯ ಹಣವನ್ನು ಬಜೆಟ್‍ನಲ್ಲಿ ತೆಗೆದಿರಿಸಬೇಕು ಎಂದು ನಾಗರಿಕರು ಒತ್ತಾಯಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಪೌರಾಯುಕ್ತ ಕೆ.ಜಿ.ಶಿವಶಂಕರ್, ಸ್ವಚ್ಛತೆ ಕುರಿತಾಗಿ ಜಾಗೃತಿ ಮೂಡಿಸಲಾಗುತ್ತಿದೆ. ನಗರದ ಉದ್ಯಾನವನಗಳನ್ನು ಸೂಕ್ತವಾಗಿ ನಿರ್ವಹಿಸಲಾಗುವುದು. ಮುಂದಿನ ಬಾರಿಯಿಂದ ನಾಗರಿಕರ ಸಲಹೆ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಸಲಹೆ ಗಂಭೀರವಾಗಿ ಪರಿಗಣಿಸಿ

ಸಭೆಯಲ್ಲಿ ಮಾತನಾಡಿದ ಸಂಘಟನೆಗಳ ಮುಖಂಡರು, ನಗರದ ಸ್ವಚ್ಛತೆ, ಪರಿಸರ, ರಸ್ತೆ ಅಗಲೀಕರಣ, ಸಿಸಿಟಿವಿ ಅಳವಡಿಕೆ ಭದ್ರತೆ ಮೊದಲಾದ ವಿಚಾರಗಳಲ್ಲಿ ಸಾರ್ವಜನಿಕರ ಸಲಹೆಗಳನ್ನು ನಗರಸಭೆ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಒತ್ತಾಯಿಸಿದರು.

ಜೀವ ವೈವಿದ್ಯಕ್ಕೆ ಸಿಗುವ ಅನುದಾನಗಳನ್ನು ಬಳಸಿಕೊಳ್ಳಬೇಕಿದೆ. ನಗರಸಭೆಗೆ ಬರುವ ಆದಾಯ ಮೂಲಗಳನ್ನು ನಿರ್ಲಕ್ಷಿಸದೇ ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ನಗರದಲ್ಲಿ ಎಲ್ಲಂದರಲ್ಲಿ ಬಿಸಾಡುತ್ತಿರುವ ಕಸದ ನಿರ್ವಹಣೆಗೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಸಲಹೆ ನೀಡಿದರು.

ಮುಖಂಡರು ಹಾಗೂ ಸಾರ್ವಜನಿಕರು, ಬಜೆಟ್ ಸಭೆಗೆ ಸಂಘ ಸಂಸ್ಥೆಗಳ ಹಾಗೂ ಸಮಾಜದ ಗಣ್ಯರನ್ನು ಆಹ್ವಾನಿಸುವುದರ ಜೊತೆಗೆ ನಾಗರಿಕರಿಗೂ ಸಲಹೆ ಸೂಚನೆ ನೀಡಲು ನಗರಸಭೆಯಲ್ಲಿ ಸಲಹಾ ಪಟ್ಟಿಗೆ, ಇ-ಮೇಲ್‌, ವಾಟ್ಸ್‌ಆ್ಯಪ್ ಮುಂತಾದ ಜಾಲತಾಣಗಳ ಮೂಲಕ ಅವಕಾಶ ಮಾಡಿಕೊಡುವಂತೆ ಸಲಹೆ ನೀಡಿದರು.

ನಾಗರಿಕರ ಸಲಹೆಗಳನ್ನು ಅಳವಡಿಸಿಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಪೌರಾಯುಕ್ತ ಕೆ.ಜಿ.ಶಿವಶಂಕರ್ ತಿಳಿಸಿದರು.

ಸಾರ್ವಜನಿಕರ ಸಲಹೆ, ಸೂಚನೆ

lಮನೆ, ಕಟ್ಟಡ ಪರವಾನಗಿ ನೀಡುವ ವೇಳೆ ಮಳೆ ನೀರು ಕೊಯ್ಲು ಕಡ್ಡಾಯ ಮಾಡಬೇಕು

lನಗರದ ಕಲ್ಯಾಣಿಗಳ ಸ್ವಚ್ಛತೆ, ಪುನಶ್ಚೇತನಕ್ಕೆ ಬಜೆಟ್‍ನಲ್ಲಿ ಹಣ ನೀಡಬೇಕು

lನಗರಸಭೆ ಸ್ವತ್ತುಗಳು ಖಾಸಗಿಯವರ ಪಾಲಾಗುವುದನ್ನು ತಡೆಗಟ್ಟಬೇಕು

lಎಲ್ಲರಂದರಲ್ಲಿ ಹಾಕುವ ಫ್ಲೆಕ್ಸ್, ಬೃಹತ್‌ ಬ್ಯಾನರ್‌ಗಳಿಗೆ ಶುಲ್ಕ ವಿಧಿಸಬೇಕು.

lಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಬೀಳಲಿ ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT