ದೊಡ್ಡಬಳ್ಳಾಪುರ: ಎಂಆರ್‌ಪಿಗಿಂತ ಹೆಚ್ಚು ಹಣ ಪಡೆದ ನಗರದ ವೈಭವ್ ಹಾಗೂ ಸೌಂದರ್ಯ ಮಹಲ್ ಚಿತ್ರಮಂದಿರಕ್ಕೆ ಬೆಂಗಳೂರು ಗ್ರಾಮಾಂತರ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ₹10 ಸಾವಿರ ದಂಡ ವಿಧಿಸಿದೆ.
ಚಿತ್ರಮಂದಿರದಲ್ಲಿ ನೀರಿನ ಬಾಟಲಿ ಮತ್ತು ಚಿಪ್ಸ್ ಖರೀದಿಸಿದ ಗ್ರಾಹಕನಿಗೆ ಎಂಆರ್‌ಪಿ ಗಿಂತಲು ₹40 ಶುಲ್ಕವನ್ನು ಪಡೆದಿದಕ್ಕೆ ಈ ದಂಡವನ್ನು ವಿಧಿಸಲಾಗಿದೆ.
ಆಯೋಗವು ಹೆಚ್ಚುವರಿಯಾಗಿ ಪಡೆದಿದ್ದ ₹40 ಮರುಪಾವತಿಸಿ, ಪರಿಹಾರವಾಗಿ ₹5,000 ಹಾಗೂ ಪ್ರಕರಣದ ಖರ್ಚು ₹5,000 ಫಿರ್ಯಾದುದಾರರಿಗೆ ನೀಡಲು ಅದೇಶಿಸಿದೆ. ಈ ಮೊತ್ತವನ್ನು ಎರಡು ತಿಂಗಳೊಳಗೆ ಪಾವತಿಸಬೇಕು. ವಿಫಲವಾದರೆ ವಾರ್ಷಿಕ ₹9 ಬಡ್ಡಿದರ ವಿಧಿಸಲಾಗುವುದು ಎಂದು ಹೇಳಿದೆ.
ನ್ಯಾ.ಬಿ.ನಾರಾಯಣಪ್ಪ ನೇತೃತ್ವದಲ್ಲಿ ನ್ಯಾ.ಜ್ಯೋತಿ ಹಾಗೂ ನ್ಯಾ.ಎಸ್.ಎಂ.ಶರಾವತಿ ಅವರನ್ನು ಒಳಗೊಂಡ ತ್ರಿಸದಸ್ಯ ಆಯೋಗವು ಈ ಆದೇಶ ಹೊರಡಿಸಿದೆ.
ದೊಡ್ಡಬಳ್ಳಾಪುರದ ಎನ್.ಪಿ.ಗಿರೀಶ್ ಮತ್ತು ಅವರ ಸ್ನೇಹಿತರು ಅಕ್ಟೋಬರ್ 2022 ರಲ್ಲಿ ವೈಭವ್ ಚಿತ್ರಮಂದಿರ ಹಾಗೂ ಸೌಂದರ್ಯ ಮಹಲ್ ಚಿತ್ರಮಂದಿರದಲ್ಲಿ ನೀರಿನ ಬಾಟಲಿ ಮತ್ತು ಚಿಪ್ಸ್ ಖರೀದಿಸಿದ್ದರು. ಪ್ರತಿ ಪದಾರ್ಥಕ್ಕೆ ಎಂಆರ್‌ಪಿಗಿಂತಲು ₹10 ಅಧಿಕ ಶುಲ್ಕದ ಪಡೆಯುತ್ತಿರುವ ಬಗ್ಗೆ ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಗೆ ದೂರು ನೀಡಿದ್ದರು.
ಯಾವುದೇ ಸಕಾರತ್ಮಕ ಉತ್ತರ ಬಾರದೆ ಇದ್ದುದರಿಂದ, ನವೆಂಬರ್ 2022ರಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಗೆ ದೂರು ನೀಡಿದ್ದರು. ಅದರಂತೆ ಜನವರಿ 2023ರಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಚಿತ್ರಮಂದಿರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಒಟ್ಟಾರೆ ₹20,000 ದಂಡ ವಿಧಿಸಿದ್ದರು.
ಇಷ್ಟಾದರೂ ಚಿತ್ರಮಂದಿರಗಳಲ್ಲಿ ಪ್ರತಿ ಪದಾರ್ಥಕ್ಕೆ ಎಂಆರ್‌ಪಿಗಿಂತ ₹10 ಅಧಿಕ ಶುಲ್ಕವನ್ನು ಗ್ರಾಹಕರಿಂದ ಪಡೆಯುವುದನ್ನು ಮುಂದುವರಿಸಿದ್ದರು. ಇದನ್ನು ಪ್ರಶ್ನಿಸಿ ಆಗಸ್ಟ್ 2023 ರಂದು ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು. ಆರು ತಿಂಗಳಲ್ಲಿ ಪ್ರಕರಣ ಇತ್ಯರ್ಥಗೊಳಿಸಲಾಗಿದೆ.