ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ |ಈ ಬದುಕೇ ಅಕ್ಷಯಾಂಬರ, ಸಮುದಾಯಗಳಿಗೆ ಪಲ್ಲಟಗೊಂಡ ನೇಕಾರಿಕೆ ಕಸುಬು

Last Updated 22 ಮೇ 2020, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಒಂದು ಕಾಲಕ್ಕೆ ನೇಯ್ಗೆ ವೃತ್ತಿ ದೇವಾಂಗ ಸಮುದಾಯಕ್ಕಷ್ಟೇ ಸೀಮಿತವಾಗಿತ್ತು. ಈಗ ಲಿಂಗಾಯತರು, ಶೆಟ್ಟರು, ಒಕ್ಕಲಿಗರು, ಕುರುಬರು, ದಲಿತ ಸಮುದಾಯದವರು ಸೇರಿದಂತೆ ಎಲ್ಲರು ಆಶ್ರಯಿಸಿದ್ದಾರೆ. ನೇಯ್ಗೆ ಕಸುಬು ಬಹುಕಾಲ ನೇಕಾರರ ಬದುಕನ್ನು ಅಕ್ಷಯವಾಗಿಸಿದೆ’ ಎನ್ನುತ್ತಾರೆ ನೇಕಾರರ ಬದುಕಿನ ಕುರಿತು ಕ್ಷೇತ್ರ ಕಾರ್ಯ ನಡೆಸಿ ಸಂಶೋಧನೆ ಮಾಡಿರುವ ಕೆ.ವೆಂಕಟೇಶ್‌.

ಹೀಗೆ ಬದುಕಿನ ‘ಅಕ್ಷಯಾಂಬರ’ದ ಹಲವು ಆಯಾಮಗಳು ಅವರ ಮಾತಿನಲ್ಲಿ ವ್ಯಕ್ತವಾದವು

ಕಸುಬು ವರ್ಗಾವಣೆ: ದೊಡ್ಡಬಳ್ಳಾಪುರದಲ್ಲಿ ಕಸುಬಿನ ವರ್ಗಾವಣೆ ವ್ಯಾಪಕವಾಗಿ ನಡೆದಿದೆ. ಮಗ್ಗದ ಬಗೆಗೆ ಏಕಮುಖಿ ಒಲವು ಇಲ್ಲಿ ಪ್ರಧಾನವಾಗಿದೆ. ದೇವಾಂಗದವರಲ್ಲಿ ಕೌಶಲ ವರ್ಗಾವಣೆಯ ತಲೆಮಾರುಗಳ ಇತಿಹಾಸವಿದೆ. ಇತರ ಜಾತಿಗಳಲ್ಲಿ ಈ ಇತಿಹಾಸವು ಸಾಂಪ್ರದಾಯಿಕ ಕಸುಬುಗಳು ನೇಯ್ಗೆಗೆ ರೂಪಾಂತರಗೊಂಡ ಕಥೆಯನ್ನು ಹೇಳುತ್ತದೆ.

ಅವರಿವರೆನ್ನೇನದೆ...: ನೇಕಾರಿಕೆ ವೃತ್ತಿಯಲ್ಲಿ ಶ್ರಮವಿಭಜನೆ ಇದೆ. ಬಣ್ಣ ಹಾಕುವವರು, ಹುರಿಮಾಡುವವರು, ವೈಂಡಿಂಗ್, ಕಂಡಿಕೆ(ಈಗ ಮಗ್ಗ ಬಿಡುವವರೇ ಕಂಡಿಕೆ ಹಾಕಿಕೊಳ್ಳುತ್ತಾರೆ. ಕಂಡಿಕೆ ಯಂತ್ರ ಮಗ್ಗಕ್ಕೇ ಜೋಡಣೆಯಾಗಿದೆ) ವಾರ್ಪು ಹಾಕುವವರು, ಅಚ್ಚು ರೀಡು ತುಂಬುವವರು, ಕುಚ್ಚು ಕಟ್ಟುವವರು, ಬಟ್ಟೆ ನೇಯುವವರು ಇತ್ಯಾದಿ ವಿಭಾಗಗಳಿವೆ. ಈ ವೃತ್ತಿ ಕೌಶಲವೆಂಬುದು ಗುಣಾತ್ಮಕವಾಗಿ ಮತ್ತು ಪರಿಣಾಮಾತ್ಮಕವಾಗಿ ಶ್ರಮವಿಭನೆಯ ವಿವಿಧ ಹಂತಗಳಲ್ಲಿ ವ್ಯತ್ಯಾಸಗೊಳ್ಳುತ್ತದೆ. ಕಂಡಿಕೆ ಮತ್ತು ವೈಂಡಿಂಗ್ ಈ ವೃತ್ತಿ ಶ್ರೇಣಿಯ ಕೆಳ ಮೆಟ್ಟಿಲುಗಳಾಗಿದೆ. ಇದರಲ್ಲಿ ಮಕ್ಕಳು ಮತ್ತು ಮಹಿಳೆಯರು, ವಯಸ್ಸಾದವರು ಅಧಿಕ ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ಇವರ ವಾರದ ದುಡಿಮೆ ₹ 500.

ಶೇ 45-50ರಷ್ಟು ಕೂಲಿಕಾರ ಕುಟುಂಬಗಳ ಆದಾಯದ ಪ್ರಮುಖ ಮೂಲಗಳು ಹೆಣ್ಣುಮಕ್ಕಳೇ ಆಗಿರುವುದರಿಂದ ಅವರ ವಿದ್ಯಾಭ್ಯಾಸದ ಮಟ್ಟವೂ 5-6-7ನೇ ತರಗತಿಗೇ ನಿಂತು ಬಿಡುತ್ತದೆ. 2-4 ಮಗ್ಗ ಹೊಂದಿರುವವರ ಮನೆಯಲ್ಲಿಯೂ ಹೆಂಗಸರು ಕಂಡಿಕೆ ಹಾಕುವ, ಸೀರೆ ಮಡಚುವ ಕಾಯಕದಲ್ಲಿ ತೊಡಗಿಸಿಕೊಂಡಿರುತ್ತಾರೆ.

ಕಲ್ಪನಾಶೀಲತೆ, ಸ್ವಂತಿಕೆ, ಕುಶಲತೆಗಳಿಗೆ ಬೇಕಾದ ಡಿಸೈನ್ ಹಾಕುವವರು ಮತ್ತು ಕುಚ್ಚು ಕಟ್ಟುವವರು ವೃತ್ತಿ ಶ್ರೇಣಿಯ ತುದಿಯಲ್ಲಿದ್ದಾರೆ. ಡಿಸೈನ್ ಡ್ರಾಫ್ಟ್ ಹಾಕುವವರು ಒಂದು ಇಂಚಿಗೆ ₹160 ತೆಗೆದುಕೊಳ್ಳುತ್ತಾರೆ. ಇಷ್ಟೇ ಮೊತ್ತವನ್ನು ಕುಚ್ಚು ಕಟ್ಟುವವರೂ ಪಡೆಯುತ್ತಾರೆ. ವಾರ್ಪು ಹಾಕುವವರು ಮತ್ತು ರೀಡು ತುಂಬುವವರು ನೇಯ್ಗೆಯ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವವರಾಗಿದ್ದಾರೆ.

ದುರ್ಬಲ ‘ಹಕ್ಕಿಗೂಡು’: ವೃತ್ತಿ ಶ್ರೇಣಿಯ ಮೆಟ್ಟಿಲುಗಳು ಕೆಳಮುಖಿಯಾದಂತೆ ಸಂಘಟನೆಯ ಕೊರತೆ ಹೆಚ್ಚಾಗಿದೆ. ಸಂಘಟನಾಹೀನತೆ ಯಥಾಸ್ಥಿತಿಯನ್ನು ಪೋಷಿಸುತ್ತದೆ. ಮಗ್ಗಗಳೊಂದಿಗೆ ನಿರಂತರವಾಗಿ ಒಡನಾಡುವ ಕೂಲಿಕಾರ ನೇಯ್ಗೆಯವರ ಸಂಖ್ಯೆಯೂ ದೊಡ್ಡದು. ಅಸಂಘಟನೆಯೂ ದೊಡ್ಡದು. 6 ಮೀಟರ್ ಸೀರೆಯ ಪ್ರತಿಯೊಂದು ಎಳೆಯ ಮೇಲೆ ಇವರ ಕಣ್ಗಾವಲು ಇದ್ದೇ ಇರಬೇಕು. ಹಕ್ಕಿಯೊಂದು ಗೂಡು ಕಟ್ಟುವ ಏಕಾಗ್ರತೆಯನ್ನು ನೇಯ್ಗೆ ಅಪೇಕ್ಷಿಸುತ್ತದೆ. ಕಾರ್ಮಿಕರು ದಿನಕ್ಕೆ 9ರಿಂದ 12 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಹಬ್ಬ-ಹರಿದಿನಗಳಂದು ಈ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ. ಸೋಮವಾರದಂದು ಮಾತ್ರ ಅರ್ಧ ದಿನ ಕೆಲಸ. ಬೋಡು ಮಗ್ಗದಲ್ಲಿ ಸೀರೆ ನೇಯುವವರ ವಾರದ ಆದಾಯ ₹800 ರಿಂದ ₹1,000, ಡ್ರಾಬಾಕ್ಸ್ ಮಗ್ಗದಲ್ಲಿ ಸೀರೆ ನೇಯುವವರ ವಾರದ ಆದಾಯ ಗರಿಷ್ಟ 2 ರಿಂದ ಎರಡೂವರೆ ಸಾವಿರ ದುಡಿಯಬಲ್ಲರು.

ದೊಡ್ಡಬಳ್ಳಾಪುರ ಸೇರಿದಂತೆ ಬಹುತೇಕ ಊರುಗಳಲ್ಲಿ ನೇಕಾರಿಕೆ ಎಂಬುದು ಮನೆಗಳಲ್ಲಿಯೇ ಮಗ್ಗಗಳು ಹೆಚ್ಚು ಕೇಂದ್ರೀಕರಣಗೊಂಡಿವೆ. ಕಡಿಮೆ ಗಾತ್ರದಲ್ಲಿ ಮಗ್ಗಗಳ ಫ್ಯಾಕ್ಟರಿಗಳಿವೆ. ಇಲ್ಲಿ ಕೇವಲ 7ರಿಂದ 8 ಮಂದಿ 50-100 ಮಗ್ಗಗಳನ್ನು ಹೊಂದಿದವರಿದ್ದಾರೆ. ಉಳಿದಂತೆ ಕನಿಷ್ಟ 2 ಮಗ್ಗ, ಗರಿಷ್ಟ 8 (ಸರಾಸರಿ 4) ಮಗ್ಗಗಳನ್ನು ಬಹಳಷ್ಟು ಜನ ಹೊಂದಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಶೇ 70 ರಷ್ಟು ಆರ್ಟ್ ಸಿಲ್ಕನ್ನು ಬಳಸಲಾಗುತ್ತದೆ. ಶೇ 20 ರಷ್ಟು ಚೈನಾ ಸಿಲ್ಕ್, ಶೇ10 ರಷ್ಟು ದೇಶೀ ರೇಷ್ಮೆ ಬಳಕೆಯಾಗುತ್ತಿದೆ. ಸೀಸನ್‍ಗೆ ತಕ್ಕಂತೆ ಇದು ಬದಲಾಗುತ್ತಿರುತ್ತದೆ. ಕಳೆದ ಎರಡು ವರ್ಷಗಳಿಂದ ಇಲ್ಲಿ ಚಿರಾಲ ಐಟಂ ಓಡುತ್ತಿತ್ತು. ಈಗ ಚಿರಾಲ ಐಟಂ ಶೇ 25ರಷ್ಟಿದೆ ಮಾತ್ರ ಇದೆ.

ದೊಡ್ಡಬಳ್ಳಾಪುರದ ಸೀರೆಗಳನ್ನು ಒಂದು ಹಂತದ ಗ್ರಾಹಕ ಸಮೂಹವು ಮಾತ್ರ ಅಪೇಕ್ಷೆ ಪಡುತ್ತಿರುವುದರಿಂದ ಉದ್ಯಮ ಉಳಿದುಕೊಂಡಿದೆ. ಆದರೆ ಆರ್ಥಿಕತೆಯ ಸ್ವರೂಪದಲ್ಲಿ ತೀವ್ರ ಬದಲಾವಣೆಗಳು ಸಂಭವಿಸುತ್ತಿರುವ ಈ ದಿನಗಳಲ್ಲಿ ಗ್ರಾಹಕನ ಆಸೆಗಳೆಂಬ ಮಾಯಾಮೃಗವನ್ನು ಹಿಡಿದು ಅದಕ್ಕೆ ದೊಡ್ಡಬಳ್ಳಾಪುರದ ಸೀರೆ ಹೊದಿಸುವುದು ತುಂಬಾ ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT